ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಗ್ರಾಮ ತಲುಪಿದ ನವೀನ್‌ ಪಾರ್ಥಿವ ಶರೀರ: ಶೋಕತಪ್ತ ಗ್ರಾಮಸ್ಥರಿಂದ ವಿದಾಯ

Last Updated 21 ಮಾರ್ಚ್ 2022, 16:42 IST
ಅಕ್ಷರ ಗಾತ್ರ

ಚಳಗೇರಿ (ಹಾವೇರಿ):ಇಪ್ಪತ್ತು ದಿನಗಳಿಂದ ಹೆಪ್ಪುಗಟ್ಟಿದ್ದ ಪೋಷಕರ ನೋವು ಮಗನ ಪಾರ್ಥಿವ ಶರೀರ ನೋಡಿದ ಕೂಡಲೇ ಕಣ್ಣೀರಾಗಿ ಹರಿಯಿತು. ಪೋಷಕರ ವೇದನೆಯನ್ನು ಕಂಡು, ಅಂತಿಮ ದರ್ಶನ ಪಡೆಯಲು ಬಂದಿದ್ದವರ ಕಣ್ಣಾಲಿಗಳು ಒದ್ದೆಯಾದವು. ನವೀನ ಅಜ್ಜಿ ಸೇರಿದಂತೆ ಸಂಬಂಧಿಕರು ಗೋಳಾಡಿ ಅಳುತ್ತಿರುವ ದೃಶ್ಯ ಎಂಥವರ ಮನಸ್ಸನ್ನು ಕಲಕುವಂತಿತ್ತು.

ರಷ್ಯಾ ದಾಳಿಯಿಂದಉಕ್ರೇನ್‍ನಲ್ಲಿ ಮಾರ್ಚ್ 1ರಂದು ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ ಪಾರ್ಥಿವ ಶರೀರವನ್ನು ಸ್ವಗ್ರಾಮ ಚಳಗೇರಿಗೆ ಸೋಮವಾರ ಬೆಳಿಗ್ಗೆ ತರಲಾಯಿತು. ಈ ವೇಳೆ ಇಡೀ ಗ್ರಾಮವೇ ಶೋಕತಪ್ತವಾಗಿತ್ತು.

ತಂದೆ ಶೇಖರಪ್ಪ ಗ್ಯಾನಗೌಡರ, ತಾಯಿ ವಿಜಯಲಕ್ಷ್ಮಿ, ಅಣ್ಣ ಹರ್ಷ ಗ್ಯಾನಗೌಡರ ಕಂಬನಿ ಮಿಡಿಯುತ್ತ ಭಾರವಾದ ಹೃದಯದಿಂದ ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ವೀರಶೈವ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ಕುಟುಂಬಸ್ಥರು ನೆರವೇರಿಸಿದರು.

ಅಂತಿಮ ಮೆರವಣಿಗೆ: ನವೀನ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯಲು ಸಾರ್ವಜನಿಕರಿಗೆ ಮಧ್ಯಾಹ್ನದವರೆಗೂ ಅವಕಾಶ ಕಲ್ಪಿಸಲಾಗಿತ್ತು. ನಂತರ ಪಾರ್ಥಿವ ಶರೀರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.ರಸ್ತೆಯ ಎರಡೂ ಬದಿಯಲ್ಲಿ ಕಿಕ್ಕಿರಿದು ನಿಂತಿದ್ದ ಜನರು ಹೂಮಳೆಗರೆದು ದುಃಖಭರಿತ ವಿದಾಯ ಹೇಳಿದರು.

ನವೀನ್‌ ಅವರ ಶಾಲಾ-ಕಾಲೇಜಿನ ಸಹಪಾಠಿಗಳು ಹಾಗೂ ಉಕ್ರೇನ್‍ನಲ್ಲಿ ನವೀನ್‌ನೊಂದಿಗೆ ಕಲಿಯುತ್ತಿದ್ದ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು, ಗಣ್ಯರು, ಮಠಾಧೀಶರು ಅಂತಿಮ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮದಲ್ಲಿ ನವೀನ ಗ್ಯಾನಗೌಡರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯಲ್ಲಿ ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ
ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮದಲ್ಲಿ ನವೀನ ಗ್ಯಾನಗೌಡರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯಲ್ಲಿ ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ

ಭಾವುಕರಾದ ಸಿಎಂ:ಮೃತ ನವೀನ್‌ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ, ತಾಯಿ ವಿಜಯಲಕ್ಷ್ಮಿ ಅವರನ್ನು ಸಂತೈಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ಈ ಸಂದರ್ಭದಲ್ಲಿ ಮಗನ ಮುಖವನ್ನು ನೋಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ನವೀನ ಅವರ ತಂದೆ ಹಾಗೂ ಸಹೋದರ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು.

ಎಸ್‌.ಎಸ್‌.ಆಸ್ಪತ್ರೆಗೆ ದೇಹದಾನ: ಮೃತ ನವೀನ್‌ ಗ್ಯಾನಗೌಡರ ಮೃತದೇಹವನ್ನು ಕುಟುಂಬಸ್ಥರ ನಿರ್ಣಯದಂತೆ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ (ಸಿಮ್ಸ್ ದೇಹದಾನ ಸಂಸ್ಥೆ) ಕೇಂದ್ರಕ್ಕೆ ಸೋಮವಾರ ಸಂಜೆ ಹಸ್ತಾಂತರಿಸಲಾಯಿತು.

‘ನನ್ನ ಮಗ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದ. ಆ ಆಸೆ ಈಡೇರಲಿಲ್ಲ. ಅವನ ಮೃತದೇಹ ವೈದ್ಯಕೀಯ ಕ್ಷೇತ್ರಕ್ಕೆ ಬಳಕೆಯಾಗಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ’ ಎಂದು ತಂದೆ ಶೇಖರಪ್ಪ ನುಡಿದರು.

ತಾಯ್ನಾಡು ಸೇರಿದ 19 ಸಾವಿರ ವಿದ್ಯಾರ್ಥಿಗಳು: ಬೊಮ್ಮಾಯಿ
ಚಳಗೇರಿ (ಹಾವೇರಿ):
‘ಆಪರೇಷನ್ ಗಂಗಾದಲ್ಲಿ ರಾಜ್ಯದ 572 ವಿದ್ಯಾರ್ಥಿಗಳು ಸೇರಿ ದೇಶದ 19 ಸಾವಿರ ವಿದ್ಯಾರ್ಥಿಗಳನ್ನು ವಾಪಸ್ ತಾಯ್ನಾಡಿಗೆ ತರುವಲ್ಲಿ ಕೇಂದ್ರ ಸರ್ಕಾರ ಶ್ರೇಷ್ಠ ಕಾರ್ಯ ಮಾಡಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಯುದ್ಧ ಭೂಮಿಯಿಂದ ನಾಗರಿಕರನ್ನು ಹೊರತರುವುದು ಪವಾಡ ಸದೃಶ ಕಾರ್ಯ. ಇಂತಹ ಸಂದಿಗ್ಧ ಸಂದರ್ಭದಲ್ಲಿ ನವೀನರ ಮೃತದೇಹ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ’ ಎಂದರು.

‘ಪ್ರಧಾನಿ ಮೋದಿ ಭಗೀರಥ ಯತ್ನ’
ಬೆಂಗಳೂರು:
ಉಕ್ರೇನ್‌ನಲ್ಲಿ ಕ್ಷಿಪಣಿ ದಾಳಿ ವೇಳೆ ಲೋಹದ ತುಣುಕು ತಗುಲಿ ಮೃತಪಟ್ಟ ನವೀನ್‌ ಗ್ಯಾನಗೌಡರ್ ಅವರ ಮೃತ ದೇಹವನ್ನು ಮರಳಿ ತರುವ ಅಸಾಧ್ಯ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಭಗೀರಥ ಪ್ರಯತ್ನದ ಮೂಲಕ ಸಾಧ್ಯವಾಗಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕೆಂಪೇಗೌಡ ವಿಮಾನನಿಲ್ದಾಣದಲ್ಲಿ ಸೋಮವಾರ ಮುಂಜಾನೆ ನವೀನ್‌ ಮೃತದೇಹವನ್ನು ಬರಮಾಡಿಕೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಳಿಕ ಬೊಮ್ಮಾಯಿ ಅವರು ಪ್ರಧಾನಿ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು.‘ನವೀನ್‌ ಮೃತ ದೇಹವನ್ನು ದೇಶಕ್ಕೆ ತರಿಸುವಲ್ಲಿ ತಮ್ಮ ಪಾತ್ರ ಬಹಳ ಮುಖ್ಯವಾಗಿದೆ. ನವೀನ್‌ ಮುಖ ನೋಡಬೇಕು ಎಂಬುದು ಅವರ ತಂದೆ–ತಾಯಿಯ ಆಸೆಯಾಗಿತ್ತು. ಹೆತ್ತವರ ಕನಸನ್ನು ತಾವು ಈಡೇರಿಸಿದ್ದೀರಿ. ಅದಕ್ಕಾಗಿ ರಾಜ್ಯದ ಜನತೆ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT