ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಜಲಮೂಲ ಸಂರಕ್ಷಣೆ ಆದ್ಯತೆ ಆಗಲಿ

ಕ್ರಮ ಕೈಗೊಳ್ಳದಿದ್ದರೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ: ಅಧಿಕಾರಿಗಳಿಗೆ ಶಾಸಕ ಮಾನೆ ಎಚ್ಚರಿಕೆ
Last Updated 16 ಅಕ್ಟೋಬರ್ 2022, 3:21 IST
ಅಕ್ಷರ ಗಾತ್ರ

ಹಾನಗಲ್ಲ: ‘ಕೆರೆ–ಕಟ್ಟೆಗಳು ಸರ್ಕಾರದ ಆಸ್ತಿ. ಮುಂದಿನ ಪೀಳಿಗೆಗೂ ಇವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆ ಮೇಲಿದೆ’ ಎಂದು ಶಾಸಕ ಶ್ರಿನಿವಾಸ ಮಾನೆ ಅಧಿಕಾರಿಗಳಿಗೆ ತಿಳಿಸಿದರು.

ಇಲ್ಲಿನ ತಮ್ಮ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಬೃಹತ್ ಮತ್ತು ಸಣ್ಣ ನೀರಾವರಿ, ಏತ ನೀರಾವರಿ, ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳ ಸಭೆ ನಡೆಸಿದರು.

‘ಒತ್ತುವರಿ ತೆರವುಗೊಳಿಸಿ, ದುರಸ್ತಿ ಪಡಿಸುವುದು ನಿಮ್ಮ ಜವಾಬ್ದಾರಿ ಅಲ್ಲವೇ? ನಿರ್ಲಕ್ಷ್ಯ ಸಲ್ಲದು. ನಿಮ್ಮ ಬೇಜವಾಬ್ದಾರಿ ಮುಂದುವರಿದರೆ ವಿಧಾನಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದು ಅನಿವಾರ್ಯವಾಗಲಿದೆ’ ಎಂದು ತಾಕೀತು ಮಾಡಿದರು.

‘ಕೆರೆ ಸಮೀಕ್ಷೆಗೆ ಬರುವ ಅಧಿಕಾರಿ ಕೆರೆ ಒತ್ತುವರಿ ಮಾಡಿದವರ ಮನೆಯಲ್ಲಿ ಕುಳಿತು ಹೋಗುತ್ತಾನೆ ಎಂದರೆ ಏನರ್ಥ. ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಕೆರೆ ಒತ್ತುವರಿ ತೆರವಿಗೆ ಹಿಂದೆ-ಮುಂದೆ ನೋಡಬೇಡಿ. ಇದರಲ್ಲಿ ಸ್ವಾರ್ಥ, ಸ್ವಹಿತ, ರಾಜಕಾರಣಕ್ಕೆ ಅವಕಾಶ ನೀಡುವುದು ಬೇಡ’ ಎಂದರು.

‘ಅನೇಕ ಕಡೆ ಕಾಲುವೆಗಳು ಒತ್ತುವರಿಗೆ ಒಳಗಾಗಿದ್ದು, ಮಳೆ ಸುರಿದಾಗಲೆಲ್ಲ ಹೊಲ-ಗದ್ದೆಗಳು ಜಲಾವೃತಗೊಂಡು ಬೆಳೆನಾಶ ಆಗುತ್ತಿದೆ. ಮಾರ್ಚ್, ಏಪ್ರಿಲ್ ಹೊತ್ತಿಗೆ ಇದೆಲ್ಲವಕ್ಕೂ ಪರಿಹಾರ ಒದಗಿಸಿರಬೇಕು’ ಸೂಚನೆ ನೀಡಿದರು.

‘ಒತ್ತುವರಿ ತೆರವಿಗೆ ರೈತರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಿ. ನಾನೂ ಆ ಕೆಲಸ ಮಾಡುತ್ತಿದ್ದೇನೆ. ಅನಾಹುತಗಳ ಬಗೆಗೆ ಮನವರಿಕೆ ಮಾಡಿಕೊಡಿ. ಖಂಡಿತವಾಗಿಯೂ ನಿಮಗೆ ಸಹಕಾರ ಸಿಗಲಿದೆ. ಕನಿಷ್ಠ ವಾರದಲ್ಲಿ ಒಂದು ದಿನ ಒತ್ತುವರಿ ತೆರವಿಗೆ ಸಮಯ ಮೀಸಲಿಡಿ’ ಎಂದರು.

ತಾಲ್ಲೂಕು ಪಂಚಾಯ್ತಿ ಇಒ ಸುನೀಲಕುಮಾರ ಬಿ., ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಬೃಹತ್ ಮತ್ತು ಏತ ನೀರಾವರಿ ಇಲಾಖೆಯ ಎಇಇ ಶಿವಮೂರ್ತಿ, ಜಿಲ್ಲಾ ಪಂಚಾಯ್ತಿ ಎಇಇ ದೇವಿಂದ್ರಪ್ಪ, ಸಣ್ಣ ನೀರಾವರಿ ಇಲಾಖೆಯ ಎಇಇ ಸಿ.ಬಿ.ಹಾವನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT