ಕನಕ–ಶರೀಫ–ಸರ್ವಜ್ಞ ಪ್ರಧಾನ ವೇದಿಕೆ(ಹಾವೇರಿ): ‘ಸಮ್ಮೇಳನದ ಬ್ಯಾನರ್, ಆಮಂತ್ರಣ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಹಾಕಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬೊಮ್ಮಾಯಿ ಅವರು ರಾಜ್ಯಕ್ಕೆ ಮುಖ್ಯಮಂತ್ರಿ. ಅವರಿಗೆ ಸಿಗಬೇಕಾದ ಗೌರವ ನಾವು ನೀಡಿದ್ದೇವೆ. ಮುಂದೆಯೂ ಮುಖ್ಯಮಂತ್ರಿಯ ಭಾವಚಿತ್ರ ಹಾಕಿ, ಸಮ್ಮೇಳನದಲ್ಲಿ ಗೌರವ ಸಲ್ಲಿಸುತ್ತೇವೆ’ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಸಮ್ಮೇಳನ ಯಶಸ್ವಿಗೊಳಿಸಲು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಸಾವಿರಾರು ಪ್ರಶ್ನೆಗಳು, ಆರೋಪಗಳು, ಹೊಂದಾಣಿಕೆ ಕೊರತೆ... ಹೀಗೆ ಅನೇಕ ಅಡೆತಡೆಗಳನ್ನು ಛಲದಿಂದ ಎದುರಿಸಿದ್ದೇವೆ. ಮೂರು ದಿನಗಳ ಮೆಲುಕು ಹಾಕಿದರೆ ಎದೆ ತುಂಬಿ ಬರುತ್ತಿದೆ. ಸರ್ಕಾರ ನೀಡಿದ ₹20 ಕೋಟಿ ಅನುದಾನದ ಜೊತೆಗೆ, ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ತಪ್ಪುಗಳು ನಡೆದಿದ್ದರೆ ತಿದ್ದುಕೊಳ್ಳುತ್ತೇವೆ’ ಎಂದ ಜೋಶಿ, ‘ನಮ್ಮ ನಿಮ್ಮ ಭೇಟಿ ಮಂಡ್ಯದಲ್ಲಿ, ನಮಸ್ಕಾರ...’ ಎಂದು ಮಾತಿಗೆ ಪೂರ್ಣವಿರಾಮ ಹಾಕಿದರು.
ಸಮಿತಿ ರಚನೆಗೆ ಸಲಹೆ: ಸಮಾರೋಪ ಭಾಷಣ ಮಾಡಿದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ, ‘ಪ್ರತಿ ಬಾರಿ ಸಮ್ಮೇಳನ ನಡೆದಾಗ ಸಾಕಷ್ಟು ಗೋಷ್ಠಿಗಳು ನಡೆಯುತ್ತವೆ. ವ್ಯಕ್ತವಾದ ಅಭಿಪ್ರಾಯಗಳು ಗಾಳಿಗೆ ತೂರಿ ಹೋಗದಂತೆ ಕಸಾಪ ಸಮಿತಿ ರಚಿಸಿ, ಅವುಗಳನ್ನು ಕ್ರೋಡೀಕರಿಸಬೇಕು. ವಿಷಯ ತಜ್ಞರು, ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸಮಿತಿಯಲ್ಲಿ ಇರಬೇಕು. ಮುಂದಿನ ಸಮ್ಮೇಳದದಲ್ಲಿ ಸಾರ್ವಜನಿಕರ ಎದುರು ಕೈಗೊಂಡ ಕಾರ್ಯಯೋಜನೆ ಬಗ್ಗೆ ತಿಳಿಸಬೇಕು. ನೂರು ವರ್ಷ ಪೂರೈಸಿದ ಕನ್ನಡ ಶಾಲೆಗಳನ್ನು ಬೆಳೆಸಬೇಕು ಸರ್ಕಾರ ಕ್ರಮ ಕೈಗೊಳ್ಳಬೇಕು‘ ಎಂದು ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.