ಸೋಮವಾರ, ಅಕ್ಟೋಬರ್ 26, 2020
23 °C
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ: ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಂಕನೂರ

ಧಾರವಾಡ: ಕುಬೇರಪ್ಪ ಸೇರಿ ಏಳು ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಗೆ ಬಿಜೆಪಿಯ ಎಸ್‌.ವಿ.ಸಂಕನೂರ ಹಾಗೂ ಕಾಂಗ್ರೆಸ್‌ನ ‌‌ಆರ್.ಎಂ.ಕುಬೇರಪ್ಪ ಸೇರಿದಂತೆ ಬುಧವಾರ ಒಟ್ಟು ಏಳು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇವರೊಂದಿಗೆ ಜೆಡಿಎಸ್‌ನ ಶಿವಶಂಕರ ಕಲ್ಲೂರ, ಆಜಾದ್ ಮಜ್ದೂರ್ ಕಿಸಾನ್ ಪಾರ್ಟಿಯ ಪ್ರಕಾಶ ಕಾಂಬಳೆ, ಸ್ವತಂತ್ರ ಅಭ್ಯರ್ಥಿಗಳಾಗಿ ಶಿವಕುಮಾರ ತಳವಾರ, ಬಸವರಾಜ ತೇರದಾಳ, ಕೆ.ಎ.ಚರಣರಾಜ್ ನಾಮಪತ್ರ ಸಲ್ಲಿಸಿದ್ದಾರೆ.

ಆರ್‌.ಎಂ.ಕುಬೇರಪ್ಪ ಅವರು ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಬುಧವಾರ ವರೆಗೂ ಒಟ್ಟು 9 ಅಭ್ಯರ್ಥಿಗಳಿಂದ ಹತ್ತು ನಾಮಪತ್ರ ಸಲ್ಲಿಕೆಯಾಗಿವೆ. ಅಭ್ಯರ್ಥಿಗಳು ನಾಮಪತ್ರಗಳನ್ನು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರಿಗೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನ. ಅ.9ರಂದು ನಾಮಪತ್ರ ಗಳ ಪರಿಶೀಲನೆ ನಡೆಯಲಿದೆ. ಅ.12ರ ವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಲಾಗಿದೆ.

ಆರ್.ಎಂ.ಕುಬೇರಪ್ಪ ಅವರು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಅನಿಲ ಪಾಟೀಲ, ಅಲ್ತಾಫ್ ಹಳ್ಳೂರು, ರುದ್ರಪ್ಪ ಲಮಾಣಿ, ಬಸವರಾಜ ಮಲಕಾರಿ, ಆನಂದ ಸಿಂಗನಾಥ ಅವರೊಂದಿಗೆ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಬೇರಪ್ಪ, ‘ಕ್ಷೇತ್ರದ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದೆ. ಈ ಕ್ಷೇತ್ರದಲ್ಲಿ ಎಚ್‌.ಕೆ.ಪಾಟೀಲ ಅವರು ನಾಲ್ಕು ಬಾರಿ ಗೆದ್ದಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಪರ ಅಲೆ ಇದೆ. ಕೆಲ ತಪ್ಪು ನಿರ್ಧಾರಗಳಿಂದ ಈ ಕ್ಷೇತ್ರದಲ್ಲಿ ನನಗೆ ಎರಡು ಬಾರಿ ಹಿನ್ನಡೆಯಾಗಿದೆ. ಪದವೀಧರ ಕ್ಷೇತ್ರದ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ನಾನೇ ಇದ್ದು, ಹಿಂದಿನ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದ್ದೇನೆ’ ಎಂದರು.

ಈಗಾಗಲೇ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ನಾಲ್ಕು ಜಿಲ್ಲೆಗಳಲ್ಲಿ ಮೂರು ಭಾರಿ ಸಂಚಾರ ಮಾಡಿ, ಮತದಾರರ ನೋಂದಣಿಯನ್ನು ಮಾಡಿಸಲಾಗಿದೆ. ಕ್ಷೇತ್ರದ ಮತದಾರರ ಮನೆ ಮನೆಗೆ ಕಾರ್ಯಕರ್ತರು ತೆರಳಿ ಓಲೈಸುವ ಕೆಲಸ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರಾಜಕೀಯ ಸಭೆ, ಪ್ರಚಾರ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.