ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಲಸದ ಒತ್ತಡ ಹೇರದಂತೆ ಆಗ್ರಹಿಸಿ ಪ್ರತಿಭಟನೆ

Published : 26 ಸೆಪ್ಟೆಂಬರ್ 2024, 14:35 IST
Last Updated : 26 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ರಾಣೆಬೆನ್ನೂರು: ‘ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲ ಸೌಲಭ್ಯ ಒದಗಿಸುವುದು. ಮೊಬೈಲ್‌ ಆ್ಯಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡ ನಿಲ್ಲಿಸಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ರಾಣೆಬೆನ್ನೂರು ತಾಲ್ಲೂಕು ಘಟಕದ ಗ್ರಾಮ ಲೆಕ್ಕಾಧಿಕಾರಿಗಳು ಗುರುವಾರ ಕಪ್ಪು ಪಟ್ಟಿ ಧರಿಸಿ ಅನಿರ್ದಿಷ್ಟಾವಧಿ ಕಾಲ ಮುಷ್ಕರ ನಡೆಸಿದರು.

ನಂತರ ತಹಶೀಲ್ದಾರ ಆರ್‌.ಎಚ್‌. ಭಾಗವಾನ್‌ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳ (ವಿಎ) ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ ಮಾತನಾಡಿ, ‘ಯಾವುದೇ ಮೂಲ ಸೌಕರ್ಯ ಒದಗಿಸದೇ ಮೊಬೈಲ್‌ ಆ್ಯಪ್‌ಗಳ ಮೂಲಕ ಹೆಚ್ಚುವರಿ ಕೆಲಸ ಮಾಡುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳು ಒತ್ತಡಕ್ಕೆ ಒಳಗಾಗಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ದೂರಿದರು.

‘ವೆಬ್‌ ಮತ್ತು ಮೊಬೈಲ್‌ ತಂತ್ರಾಂಶಗಳಾದ ಸಂಯೋಜನೆ, ಇ -ಆಫೀ, ಆಧಾರ್‌ಸೀಡ್‌, ಗರುಡ ಆಪ್‌, ವೋಟರ್‌ ಹೆಲ್ಪ್‌ ಲೈನ್‌, ಬೆಳೆ ಸಮೀಕ್ಷೆ, ಬೆಳೆ ಸಮೀಕ್ಷೆ ಅನುಮೋದನೆ ವೆಬ್‌ ಆ್ಯಪ್‌, ಲ್ಯಾಂಡ್‌ ಬೀಟ್‌, ಸ-ವಿಜಿಲ್‌ ಆ್ಯಪ್‌, ಬಗೈರ್‌ ಹುಕುಂ, ಪೌತಿ ಆಂದೋಲನ, ಭೂಮಿ, ಎಲೆಕ್ಟ್‌-, ಹಕ್ಕು ಪತ್ರ, ನವೋದಯ, ಕೃಷಿ ಗಣತಿ, ನೀರಾವರಿ ಗಣತಿ, ಕೃಷಿ ಗಣತಿ, ದಿಶಾಂಕ್‌ ಸೇರಿದಂತೆ 21 ಕ್ಕೂ ಹೆಚ್ಚು ಆ್ಯಪ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಎಲ್ಲ ಆ್ಯಪ್‌ಗಳಲ್ಲಿ ಏಕ ಕಾಲಕ್ಕೆ ಕೆಲಸ ಮಾಡಲು ದಿನವೂ ಒತ್ತಡ ಹೇರಲಾಗುತ್ತದೆ’ ಎಂದರು.

‘3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್‌ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕು. ಕ್ಷೇತ್ರದ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವ ಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಮೊಬೈಲ್‌/ ವೆಬ್‌ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ- ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿಯನ್ನು ವಹಿಸುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸುಜ್ಜಿತ ಕಚೇರಿ, ಗುಣಮಟ್ಟದ ಮೊಬೈಲ್‌ ಫೋನ್‌, ಸಿಯುಜಿ ಸಿಮ್‌ ಮತ್ತು ಡೇಟಾ, ಗೂಗಲ್‌ ಕ್ರೋಮ್‌ ಬುಕ್‌, ಲ್ಯಾಪ್‌ ಟಾಪ್‌ ಪೂರೈಸಬೇಕು’ ಎಂದು ಒತ್ತಾಯಿಸಿದರು.

‘ಮೊಬೈಲ್‌ ತಂತ್ರಾಂಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತುಗಳನ್ನು ಕೂಡಲೇ ರದ್ದು ಪಡಿಸಬೇಕು. ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೊ ಹಾಕದಿರಲು, ಮೆಮೊ ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತರ್‌ ಜಿಲ್ಲಾ ಪತಿ- ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡಬೇಕು. ಪ್ರಯಾಣ ಭತ್ಯೆಯನ್ನು ₹ 500 ರಿಂದ ₹ 3 ಸಾವಿರಕ್ಕೆ ಏರಿಸಬೇಕು. ಮನೆ ಹಾನಿ ಪ್ರಕರಣಗಳ ಜವಾಬ್ದಾರಿಯಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಬಸವಕುಮಾರ, ಪ್ರಕಾಶ, ಬಸವರಾಜ ಹತ್ತಿಕಾಳ, ಶರಣಪ್ಪ ಕಜ್ಜರಿ, ಮಂಜಪ್ಪ, ಪ್ರಕಾಶ ಎಚ್‌, ಕುರುಬರ, ದೀಪಾ ಎಂ.ಎಚ್‌, ಪ್ರಭಾಕರ, ಪ್ರಿಯಾಂಕಾ, ರೇಖಾ ಎಂ.ಎಚ್‌, ಹನುಮಂತಪ್ಪ ಓಲೇಕಾರ, ನಿಂಗಪ್ಪ ಹೊನ್ನಪ್ಪನವರ, ಡಿ.ಎಂ.ಪಾಟೀಲ, ಉಪತಹಶೀಲ್ದಾರ ಶ್ಯಾಮ ಗೊರವರ, ಮಂಜುನಾಥ ಕೆಂಚರಡ್ಡಿ, ಅಶೋಕ ಅರಳೇಶ್ವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT