ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ | ‘ರಾಜಕಾರಣಿಗಳಿಗೆ ಸಾಹಿತಿಗಳು ಬುದ್ಧಿ ಹೇಳಿ ತಿದ್ದಲಿ’

ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್
Last Updated 9 ಜನವರಿ 2023, 15:54 IST
ಅಕ್ಷರ ಗಾತ್ರ

ಹಾವೇರಿ (ಕನಕ-ಶರೀಫ- ಸರ್ವಜ್ಞ ಪ್ರಧಾನ ವೇದಿಕೆ): ‘ಜಾತಿ ಮತ್ತು ಧರ್ಮವನ್ನು ಒಡೆದು ರಾಜಕೀಯ ಮಾಡುವ ರಾಜಕಾರಣಿಗಳಿಗೆ ಸಾಹಿತಿಗಳು ಬುದ್ಧಿ ಹೇಳಿ ತಿದ್ದುವ ಕೆಲಸ ಮಾಡಬೇಕು. ಅದು ಬಿಟ್ಟು ತಾವೇ ರಾಜಕಾರಣಿಗಳಂತೆ ಆಗಬಾರದು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾರ್ಮಿಕವಾಗಿ ನುಡಿದರು.

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ, ಅಲ್ಪಸಂಖ್ಯಾತ ರನ್ನು ಸಮ್ಮೇಳನದಲ್ಲಿ ಕಡೆಗಣಿಸಿರುವ ಆರೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಅವರು, ‘ಸಾಹಿತಿಗಳು ಜಾತಿ, ಧರ್ಮ ಹಾಗೂ ಮನಸ್ಸುಗಳನ್ನು ಕೂಡಿಸುವ ಕೆಲಸ ಮಾಡಬೇಕು. ಲಂಕೇಶ್, ಅನಂತಮೂರ್ತಿ ಅವರಂತಹ ಸಾಹಿತಿಗಳು ಆ ಕೆಲಸ ಮಾಡುವ ಜೊತೆಗೆ, ರಾಜಕಾರಣಿಗಳಿಗೆ ಬುದ್ಧಿ ಹೇಳುತ್ತಿದ್ದರು’ ಎಂದು ನೆನೆದರು.

‘ಸಾಹಿತ್ಯ ಸಮಾಜವನ್ನು ಒಳಗೊಳ್ಳಬೇಕು. ದಮನಿತರಿಗೆ ದನಿಯಾಗಬೇಕು ಎಂದು ಕಿವಿಮಾತು ಹೇಳಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಮಾತನಾಡಿ, ‘ಕುಸಿಯುತ್ತಿರುವ ನೈತಿಕ ಮೌಲ್ಯಗಳನ್ನು ಜಾಗೃತಿಗೊಳಿಸಬೇಕು. ರಾಷ್ಟ್ರೀಯತೆ ಜಾಗೃತಗೊಳಿಸಬೇಕು‘ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಇಂಗ್ಲಿಷ್ ವ್ಯಾಮೋಹವನ್ನು ನಾವು ಬಿಡಬೇಕು. ಮೆಕಾಲೆ ಶಿಕ್ಷಣದ ಗುಲಾಮಿತನದಿಂದ ಹೊರಬರಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಆಶಯ ನುಡಿಗಳನ್ನಾಡಿದರು. ಶಾಸಕ ನೆಹರು‌ ಓಲೇಕಾರ, ಸಚಿವ ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರುಣಕುಮಾರ್, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಂಸದರಾದ ಐ.ಜಿ. ಸನದಿ, ಮಂಜುನಾಥ ಕುನ್ನೂರ ಮುಂತಾದವರು ಇದ್ದರು. ಪರಿಷತ್ತಿನ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಸ್ವಾಗತಿಸಿದರು.

ಸ್ಥಾನಕ್ಕಿಂತ ಸ್ನೇಹ ಶಾಶ್ವತ: ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ವಿರೋಧ ಪಕ್ಷದ ನಾಯಕರಾದರೂ ಬಿ.ಕೆ. ಹರಿಪ್ರಸಾದ್ ನನ್ನ ಆತ್ಮೀಯ ಸ್ನೇಹಿತರು. ಈ ಸ್ಥಾನ ಬರುವುದಕ್ಕಿಂತ ಮುಂಚಿನಿಂದಲೂ ನಮ್ಮ ಸ್ನೇಹವಿದೆ. ಸ್ಥಾನ ಬರಬಹುದು, ಹೋಗಬಹುದು. ಆದರೆ, ಸ್ನೇಹ ಶಾಶ್ವತ’ ಎಂದಾಗ, ಸಭಾಂಗಣದಲ್ಲಿ ಜನ ಜೋರಾಗಿ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT