ಯಡಿಯೂರಪ್ಪ ಹಗಲುಗನಸುಗಾರ: ಜಮೀರ್ ಅಹ್ಮದ್‌ ಖಾನ್‌

7
ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ₹1 ಲಕ್ಷ ನೆರವು ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್

ಯಡಿಯೂರಪ್ಪ ಹಗಲುಗನಸುಗಾರ: ಜಮೀರ್ ಅಹ್ಮದ್‌ ಖಾನ್‌

Published:
Updated:
Deccan Herald

ಹಾವೇರಿ: ಎಲ್ಲರೂ ರಾತ್ರಿ ಕನಸು ಕಂಡರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಗಲುಗನಸು ಕಾಣುತ್ತಾರೆ. ಹೀಗಾಗಿ, ಸರ್ಕಾರ ಆಗ ಬೀಳುತ್ತದೆ, ಈಗ ಬೀಳುತ್ತದೆ ಎಂದು ಹೇಳಿಕೆ ನೀಡುತ್ತಲೇ ಇರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಲೇವಡಿ ಮಾಡಿದರು.

3 ತಾರೀಕು, 15 ತಾರೀಕು ಎಂದೆಲ್ಲ ಗಡುವು ನೀಡಿದ್ದರು. ಆದರೆ, ಏನೂ ಆಗಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದಂತೆ ಎಚ್‌.ಡಿ. ಕುಮಾರಸ್ವಾಮಿ ಐದು ವರ್ಷಗಳ ಮುಖ್ಯಮಂತ್ರಿ ಆಗಿರಲಿದ್ದಾರೆ. ಸರ್ಕಾರ ಸುಭದ್ರವಾಗಿರಲಿದೆ ಎಂದು ಬುಧವಾರ ಇಲ್ಲಿ ನುಡಿದರು.

ಎಲ್ಲ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ ಸಹಜ. ಅದೇ ರೀತಿಯಲ್ಲಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಮಧ್ಯೆಯೂ ಸಣ್ಣಪುಟ್ಟ ಗೊಂದಲ ಉಂಟಾಗಿರಬಹುದು. ಅದನ್ನೇ ಮಾಧ್ಯಮಗಳು ದೊಡ್ಡದು ಮಾಡಿವೆ. ಅದೆಲ್ಲ ಸರಿಪಡಿಸಿಕೊಂಡಿದ್ದು, ಮುಂದೇನೂ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ನಮ್ಮ ಪಕ್ಷದಲ್ಲಿ ಎಲ್ಲರೂ ರೇಸ್‌ನಲ್ಲಿದ್ದಾರೆ. ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದು, ಅವರು ನಿಲ್ಲಿಸಿದವರನ್ನು ನಾವೆಲ್ಲ ಸೇರಿ ಗೆಲ್ಲಿಸುತ್ತೇವೆ. ನನ್ನ ಮೇಲೆ ಸ್ವಲ್ಪ ಜವಾಬ್ದಾರಿ ಹೆಚ್ಚಿದೆ’ ಎಂದರು.

‘ರಾಣೆಬೆನ್ನೂರು ನಗರಸಭೆಯ ಆಡಳಿತ ಕುರಿತು ಅರಣ್ಯ ಸಚಿವ ಆರ್. ಶಂಕರ್ ಮತ್ತು ಪಕ್ಷದ ಮುಖಂಡ ಕೆ.ಬಿ. ಕೋಳಿವಾಡರ ಜೊತೆ ನಾನೇ ಮಾತನಾಡಿದ್ದೇನೆ. ಅವರಿಬ್ಬರು ಜೊತೆಯಾಗಿ ಆಡಳಿತ ಚುಕ್ಕಾಣಿ ಹಿಡಿಯುವ ಭರವಸೆ ನೀಡಿದ್ದಾರೆ’ ಎಂದರು.

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಪ್ರತಿ 15 ದಿನಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತೇನೆ. ಎಲ್ಲ ತಾಲ್ಲೂಕುಗಳಿಗೂ ಭೇಟಿ ನೀಡಿ, ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತೇನೆ ಎಂದ ಅವರು, ಚಾಮರಾಜಪೇಟೆ ಮತ್ತು ಹಾವೇರಿಯು ನನ್ನೆರಡು ಮನೆಗಳು ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಸಾಲಮನ್ನಾ ಮಾಡುವ ಒಂದೇ ಗುರಿಯಿದ್ದು, ಹಂತ ಹಂತವಾಗಿ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘ಜಮೀರ್ ಹವಾ’ದಿಂದ ಗೆಲುವು ಬಂದಿದೆಯೇ? ಎಂಬ ಪ್ರಶ್ನೆಗೆ ‘ಜನ ಕಾಂಗ್ರೆಸ್‌ ಅನ್ನು ಮತ್ತೆ ಬಯಸಿದ್ದಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದರು. ಆದರೆ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಪ್ರತಿಕ್ರಿಯಿಸಿ, ‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಗೆಲುವಿನಲ್ಲಿ ಸಚಿವರ ಪ್ರಯತ್ನ ಇದೆ. ಆದರೆ, ಅದನ್ನು ಅವರು ಹೇಳುತ್ತಿಲ್ಲ. ಮಾಡಿ ತೋರಿಸಿದ್ದಾರೆ’ ಎಂದರು.

ನೆರವು ನೀಡಿದ ಜಮೀರ್:

ಇಲ್ಲಿನ ಗುರುಭವನದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡ ಸಚಿವರು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಬಡ ಕುಟುಂಬದ ಸಚಿನ್ ಎಚ್. ವಿದ್ಯಾಭ್ಯಾಸಕ್ಕೆ ₹ 1 ಲಕ್ಷ ನೆರವು ನೀಡಿದರು. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ನೀಡಿದರು. ಅಲ್ಲದೇ, ಆರ್ಥಿಕ ಸಂಕಷ್ಟದಲ್ಲಿರುವ ನಗರದ ನಾಗೇಂದ್ರಮಟ್ಟಿಯ ಅಂಗವಿಕಲ ಗುಜರಿ ವ್ಯಾಪಾರಿ ಮದರ್ ಸಾಹೇಬ ತಿಳವಳ್ಳಿಗೆ ₹30 ಸಾವಿರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !