ಮಂಗಳವಾರ, ಆಗಸ್ಟ್ 20, 2019
27 °C
ಕಪ್ಪು ಕೆಂಪು ಮೈಮಾಟ

ಮನೆ ಬಾಗಿಲಿಗೆ ಬಂದ ಹವಳದ ಹಾವು: ಬಲು ವಿಷಕಾರಿ

Published:
Updated:
Prajavani

ಹೊಸನಗರ: ಅಪರೂಪದ ಆದರೆ, ಬಲು ವಿಷಕಾರಿಯಾದ ವಿಶಿಷ್ಠ ಬಣ್ಣದ ಹಾವು ಉರಗತಜ್ಞರ ಮನೆಗೇ ಅತಿಥಿಯಾಗಿ ಬಂದಿದೆ.

ಕಾಡು ಹಾವುಗಳು ಮಲೆನಾಡ ಪ್ರದೇಶದ ಮನೆಗಳಿಗೆ ಬರುವುದು ಸಾಮಾನ್ಯ. ವಿಷಕಾರಿ ಹಾವುಗಳು ಕೂಡ ಕಾಡು ಬಿಟ್ಟು ನಾಡಿಗೆ ಬರುತ್ತಿವೆ. ಇಲ್ಲೊಂದು ಹಾವು ತಾಲ್ಲೂಕಿನ ಬಿದನೂರು ನಗರದಲ್ಲಿನ ಉರಗ ತಜ್ಞ ನಾರಾಯಣ ಕಾಮತ್ ಅವರ ಮನೆಯಂಗಳದಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

ಶನಿವಾರ ಮುಂಜಾನೆ ಕಾಮತರ ಮನೆಯಂಗಳದಲ್ಲಿ ಹಾವು ಬುಸುಗುಟ್ಟಿದೆ. ಇದನ್ನು ನೋಡಿದ ಮನೆಯೊಡತಿ ತೃಪ್ತಿ ಕಾಮತ್ ಹೌಹಾರಿದ್ದಾರೆ. ನಾರಾಯಣ ಕಾಮತ್ ಬಂದು ನೋಡಿದಾಗ ಅದು ಬಲು ಅಪರೂಪದ ವಿಷಕಾರಿ ಹವಳದ ಹಾವು ಆಗಿತ್ತು. ಕೂಡಲೇ ತಮ್ಮ ಕೈಚಳ ತೋರಿ ಸೆರೆ ಹಿಡಿದರು. ಬಳಿಕ ಕಾಡಿಗೆ ಬಿಟ್ಟು ಬಂದರು.

ಕೋರಲ್ ಸ್ನೇಕ್: ಇದು ಮಲೆನಾಡ ಭಾಗದಲ್ಲಿ ಕಂಡು ಬರುವ ಬಲು ಅಪರೂಪದ ಈ ಹಾವಿನ ವೈಜ್ಞಾನಿಕ ಹೆಸರು ಕೋರಲ್ ಸ್ನೇಕ್. ಇತ್ತೀಚಿನ ವರ್ಷಗಳಲ್ಲಿ ಎಲ್ಲೂ ಕಾಣುತ್ತಿರಲಿಲ್ಲ. ಭಾರಿ ಪ್ರಮಾಣದ ವಿಷ ಹೊಂದಿದ್ದರೂ ಈ ಕೋರಲ್ ಸ್ನೇಕ್ ಕಚ್ಚಿ ಸತ್ತವರ ಸಂಖ್ಯೆ ಮಾತ್ರ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚಾಗಿ ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚು ವಿಷ ಹೋಗುವುದಿಲ್ಲ ಎನ್ನುತ್ತಾರೆ ನಾರಾಯಣ ಕಾಮತ್.

ಕೋರಲ್ ಸ್ನೇಕ್, ಹವಳದ ಹಾವು ಎಂದು ಕರೆಸಿಕೊಳ್ಳುವ ಈ ಹಾವು ಮಲೆನಾಡಿಗರಲ್ಲಿ ಹಪ್ಪಟೆ ಹಾವು ಎಂದೆ ಪ್ರಚಲಿತದಲ್ಲಿದೆ.

ಹಾವಿನ ಮೈ ಬಣ್ಣ ಕಂದು ಮಿಶ್ರಿತ ಕಪ್ಪು ಬಣ್ಣ ಹೊಂದಿದೆ. ಕಣ್ಣಿನ ಕೆಲ ಭಾಗದಲ್ಲಿ ಬಿಳಿ ಪಟ್ಟೆ ಪಟ್ಟೆ.. ಆದರೆ ಹೊಟ್ಟೆ ಭಾಗ ಮಾತ್ರ ಸಂಪೂರ್ಣ ಕೆಂಪು. ಸುಮಾರು 10 ಅಡಿಗೂ ಹೆಚ್ಚು ಉದ್ದವಿದೆ.

ಪಶ್ಚಿಮ ಘಟ್ಟದ ಶೋಲಾ ಅರಣ್ಯ ವ್ಯಾಪ್ತಿಯಲ್ಲಿ ಕಡಿದಾದ ಪೊಟರೆ ಪ್ರದೇಶ ಈ ಹಾವಿನ ಆವಾಸ ಸ್ಥಾನ ಎನ್ನಲಾಗಿದೆ. ಒಮ್ಮೊಮ್ಮೆ ಕಾಡು ಬಿಟ್ಟು ನಾಡಿಗೆ ಬರುವ ಇವು ನೋಡುಗರಿಗೆ ತನ್ನ ಮೈಮಾಟ ಪ್ರದರ್ಶಿಸುತ್ತಿವೆ.

Post Comments (+)