ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲುಮೆ ಅಕ್ರಮ: ಕೆ. ಶ್ರೀನಿವಾಸ್‌, ಎಸ್‌. ರಂಗಪ್ಪ ಅಮಾನತು

Last Updated 26 ನವೆಂಬರ್ 2022, 9:05 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಐಎಎಸ್‌ ಅಧಿಕಾರಿಗಳಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಮತ್ತು ಬಿಬಿಎಂಪಿ ವಿಶೇಷ ಆಯುಕ್ತ ಎಸ್‌. ರಂಗಪ್ಪ ಅವರನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಮಾಹಿತಿ ಕಳವು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಹಲವು ಕ್ರಮಗಳನ್ನು ಕೈಗೊಂಡಿತ್ತು. ಮಹದೇವಪುರ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಕೆ. ಶ್ರೀನಿವಾಸ್‌ ಹಾಗೂ ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಎಸ್‌. ರಂಗಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸುವಂತೆ ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತ್ತು.

ಇಬ್ಬರೂ ಐಎಎಸ್‌ ಅಧಿಕಾರಿಗಳನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದೆ. ಅಮಾನತಿನ ಅವಧಿಯಲ್ಲಿ ಲಿಖಿತ ಅನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆಯದಂತೆ ಇಬ್ಬರಿಗೂ ನಿರ್ಬಂಧ ವಿಧಿಸಲಾಗಿದೆ.

ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‌ಒ/ಬಿಎಲ್‌ಸಿ) ಎಂದು ಗುರುತಿನ ಚೀಟಿ ವಿತರಿಸಿರುವುದು ಪೊಲೀಸ್‌ ತನಿಖೆಯಲ್ಲಿ ಪತ್ತೆಯಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿರುವ ಎಲ್ಲ ಪ್ರಕ್ರಿಯೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸುವಂತೆ ಆಯೋಗ ಶುಕ್ರವಾರ ಆದೇಶ ಹೊರಡಿಸಿತ್ತು. ಲೋಪ ತಡೆಯುವಲ್ಲಿ ವಿಫಲರಾದ ಆರೋಪದ ಮೇಲೆ ಇಬ್ಬರೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT