ಶನಿವಾರ, ಮೇ 15, 2021
25 °C
ವಜಾದಂತಹ ಕಠಿಣ ಕ್ರಮಗಳ ಬಳಿಕ ಉದ್ಯೋಗಕ್ಕೆ ಹಾಜರಾಗುವವರ ಸಂಖ್ಯೆಯಲ್ಲಿ ಹೆಚ್ಚಳ

ಕಲಬುರ್ಗಿ: 1229 ಬಸ್‌ಗಳ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಒಕ್ಕೂಟ ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರಕ್ಕೆ ದಿನದಿಂದ ದಿನಕ್ಕೆ ಬೆಂಬಲ ಕಡಿಮೆಯಾಗುತ್ತಿದೆ. ಸೇವೆಯಿಂದ ವಜಾದಂತಹ ಕಠಿಣ ಕ್ರಮಗಳ ಬಳಿಕ ಬೆದರಿದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಮುಷ್ಕರವು ಭಾನುವಾರ 12ನೇ ದಿನಕ್ಕೆ ಕಾಲಿರಿಸಿದ್ದು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ 1229 ಬಸ್‌ಗಳು ಸಂಚರಿಸಿದವು.

ಏಪ್ರಿಲ್ 15ರಂದು ಬೀದರ್‌ ಜಿಲ್ಲೆಯ ಹುಮನಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್‌ ತಡೆಹಿಡಿದು ಸಂಚಾರಕ್ಕೆ ಅಡ್ಡಿಪಡಿಸಿದ ಮುಷ್ಕರ ನಿರತ ಚಾಲಕ ರಾಜು ಎಂಬುವವರ ವಿರುದ್ಧ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಕಲಬುರ್ಗಿ ಬಸ್ ನಿಲ್ದಾಣದಿಂದ ಭಾನುವಾರವೂ ಬಹುತೇಕ ಖಾಸಗಿ ಬಸ್‌ಗಳು ಸಂಚಾರ ನಡೆಸಿದವು. ಸಂಸ್ಥೆಯ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ 5ರವರೆಗೆ 226 ಖಾಸಗಿ ಬಸ್‌, 163 ಬೇರೆ ರಾಜ್ಯಗಳ ಬಸ್‌, 1491 ಇತರೆ ವಾಹನಗಳು ಸಂಚಾರ ನಡೆಸಿದವು ಎಂದು ಅವರು ತಿಳಿಸಿದ್ದಾರೆ.

ಸತತ ಮನವಿಯ ಬಳಿಕವೂ ಬಹುತೇಕ ಸಿಬ್ಬಂದಿ ಕರ್ತವ್ಯದಿಂದ ದೂರವೇ ಉಳಿದಿದ್ದು, ಕೆಲವರನ್ನು ಬೇರೆ ಘಟಕಗಳಿಗೆ ವರ್ಗಾಯಿಸಲಾಗಿದೆ.  ಕೆಲವರನ್ನು ವಜಾ ಮಾಡಲಾಗಿದೆ. ಆದರೂ, ನಮ್ಮ ಮನವಿಗೆ ಸ್ಪಂದಿಸ ದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

₹ 59 ಕೋಟಿ ಆದಾಯ ನಷ್ಟ: ಮುಷ್ಕರ ಆರಂಭವಾದ ಏಪ್ರಿಲ್ 7ರಿಂದ ಏ 18ರವರೆಗೆ ಸಂಸ್ಥೆಯ ಆದಾಯದಲ್ಲಿ ₹ 59 ಕೋಟಿ ಆದಾಯ ನಷ್ಟವಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಉದ್ಯೋಗಕ್ಕಾಗಿ ತೆರಳುವವರಿಗೆ ಬಸ್‌ ಬಂದ್ ಆಗಿದ್ದರಿಂದ ಸಾಕಷ್ಟು ತೊಂದರೆಯಾಗಿದ್ದು, ದುಪ್ಪಟ್ಟು ದರ ನೀಡಿ ಪ್ರಯಾಣಿಸಬೇಕಾಗಿದೆ.

‘ಸರ್ಕಾರವೇ ಖಾಸಗಿ ವಾಹನ ಮಾಲೀಕರ ಸುಲಿಗೆಗೆ ಮುಕ್ತ ಆಹ್ವಾನ ನೀಡಿದಂತಾಗಿದೆ. ನಿರಂತರವಾಗಿ ಆರ್‌ಟಿಒ ಹಾಗೂ ಪೊಲೀಸ್‌ ಸಿಬ್ಬಂದಿ ಪ್ರಯಾಣ ದರದ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಖಾಸಗಿಯವರ ಸುಲಿಗೆಗೆ ಕೊನೆಯೇ ಇಲ್ಲದಂತಾಗುತ್ತದೆ’ ಎಂದು ಬ್ಯಾಂಕ್‌ ಉದ್ಯೋಗಿ ಸಂಜೀವಕುಮಾರ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.

ಆಟೊಗಳಿಂದಲೂ ಸುಲಿಗೆ: ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುತ್ತಿರುವ ಆಟೊ ಚಾಲಕರೂ ದುಪ್ಪಟ್ಟು ದರವನ್ನು ವಸೂಲಿ ಮಾಡುತ್ತಿದ್ದು, ಅವರ ಮೇಲೆಯೂ ನಿಯಂತ್ರಣ ಹೇರಬೇಕು ಎಂದು ಜೇವರ್ಗಿ ಕಾಲೊನಿ ನಿವಾಸಿ ಜಗನ್ನಾಥ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು