ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ ಕ್ಷೇತ್ರಕ್ಕೆ ₹218 ಕೋಟಿ ಅನುದಾನ

ಕಾಗಿಣಾ ನದಿಗೆ ಸೇತುವೆ ನಿರ್ಮಾಣಕ್ಕೆ ಮನ್ನಣೆ
Published : 21 ಸೆಪ್ಟೆಂಬರ್ 2024, 5:52 IST
Last Updated : 21 ಸೆಪ್ಟೆಂಬರ್ 2024, 5:52 IST
ಫಾಲೋ ಮಾಡಿ
Comments

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುತ್ತಿರುವ ಕಾಗಿಣಾ ನದಿಗೆ ಹೊಸದಾಗಿ ಸೇತುವೆ ನಿರ್ಮಾಣ ಮಾಡಬೇಕು ಎನ್ನುವ ದಶಕದ ಬೇಡಿಕೆಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಯತ್ನ ಹಾಗೂ ರಾಜ್ಯ ಸರ್ಕಾರದಿಂದ ಕೊನೆಗೂ ಮನ್ನಣೆ ಸಿಕ್ಕಿದೆ.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಒಟ್ಟು ₹ 218 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನ ಕಲಬುರಗಿ ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಲಂಗಾಣ ಗಡಿಪ್ರದೇಶದ ರಾಜ್ಯದ ಪುಟಪಾಕ-ಭೋಸಗಾ ರಾಜ್ಯ ಹೆದ್ದಾರಿ-126ರ ಮಾರ್ಗದಲ್ಲಿನ ತಾಲ್ಲೂಕಿನ ದಂಡೋತಿ ಸಮೀಪದ ಕಾಗಿಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣಕ್ಕೆ ₹53 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದೆ.

ಹೊಸ ಸೇತುವೆ ನಿರ್ಮಾಣದಿಂದ ಮುಂಬರುವ ವರ್ಷಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷದ ಮಳೆಗಾಲದಲ್ಲಿ ಕಾಗಿಣಾ ನದಿಯಲ್ಲಿ ಉಕ್ಕಿ ಬರುವ ಪ್ರವಾಹದಲ್ಲಿ ಸೇತುವೆ ಮುಳುಗಡೆಯಾಗಿ ಮೂರು ನಾಲ್ಕು ದಿನಗಳು ಸಾರಿಗೆ ಸಂಚಾರ ಬಂದ್ ಆಗುವುದು, ಸೇತುವೆ ಮೇಲಿನ ರಸ್ತೆ ಕಿತ್ತು ಹೋಗುವುದು ಸಾಮಾನ್ಯವಾಗಿತ್ತು. ಸಚಿವರು, ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಅನೇಕ ಅಧಿಕಾರಿಗಳು ಸೇತುವೆಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಕ್ರಮಕ್ಕೆ ಈಗ ಫಲ ದೊರೆತಿದೆ.

ಕೆರೆ ತುಂಬಿಸುವ ಯೋಜನೆಗೆ ₹135 ಕೋಟಿ: ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ರೇವುನಾಯಕ ತಾಂಡಾ-ನಾಲವಾರ ಕೆರೆ, ಕುಂಬಾರಹಳ್ಳಿ-ನಾಲವಾರ ಕೆರೆ, ಲಾಡ್ಲಾಪುರ ಸಣ್ಣಕರೆ, ಲಾಡ್ಲಾಪುರ ದೊಡ್ಡಕರೆ, ಕರದಾಣ ಸಣ್ಣ ನೀರಾವರಿ ಕೆರೆ, ಅಳ್ಳೊಳ್ಳಿಯ ಅಂಬಾಡ ಸಣ್ಣ ನೀರಾವರಿ ಕೆರೆ, ಅಲ್ಲೂರ್(ಬಿ) ಸಣ್ಣ ನೀರಾವರಿ ಕೆರೆ, ಪೇಠಶಿರೂರ ಕೆರೆ, ಮುಗುಳನಾಗಾಂವ ಕೆರೆ ಹೀಗೆ ಒಟ್ಟು 9 ಕೆರೆಗಳನ್ನು ತುಂಬಿಸುವ ಯೋಜನೆಗೆ ಒಟ್ಟು ₹135 ಕೋಟಿ ಅನುದಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೆರೆಗಳ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟದ ವೃದ್ಧಿ ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಜನರು ಸಂತಸ ವ್ಯಕ್ತಮಾಡುತ್ತಿದ್ದಾರೆ.

ವಸತಿ ನಿಲಯದ ಕಟ್ಟಡಕ್ಕೆ, ಸೌಕರ್ಯಕ್ಕೆ ₹20 ಕೋಟಿ: ಚಿತ್ತಾಪುರ ಪಟ್ಟಣದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಣಕ್ಕೆ ₹12 ಕೋಟಿ ಅನುದಾನ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಗುಂಡಗುರ್ತಿ, ವಾಡಿ, ನಾಲವಾರದಲ್ಲಿರುವ ಒಟ್ಟು ಏಳು ಪರಿಶಿಷ್ಟ ಜಾತಿಯ ವಸತಿ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಮಾಡ್ಯೂಲರ್ ಕಿಚನ್ ಸೌಕರ್ಯಗಳನ್ನು ಒದಗಿಸಲು₹18 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದ್ದು, ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಬಲ ನೀಡಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT