ಮಂಗಳವಾರ, ಮಾರ್ಚ್ 28, 2023
31 °C

ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ: ಅ‍ಪರಾಧಿಗೆ 23 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಸಾಬೀತಾಗಿದ್ದರಿಂದ ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದ ಮಹಮ್ಮದ್ ರಫಿ ಅಲಿಯಾಸ್ ಮಹಮ್ಮದ್ ರಫೀಕ್ ನದಾಫ ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಪೋಕ್ಸೊ) ನ್ಯಾಯಾಲಯವು 23 ವರ್ಷ 6 ತಿಂಗಳು ಜೈಲು, ₹ 27,100 ದಂಡ ವಿಧಿಸಿದೆ.

2020ರ ಫೆಬ್ರುವರಿಯಲ್ಲಿ ಭೀಮಾ ನದಿಯ ದಂಡೆಯ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಜೀವ ಬೆದರಿಕೆ ಹಾಕಿ ಅಪಹರಿಸಿಕೊಂಡು ಮತ್ತೊಂದು ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಎಸಗಿದ್ದ. ಅಲ್ಲದೇ, ತನ್ನನ್ನು ಮದುವೆ ಆಗುವಂತೆ ಒತ್ತಾಯ ಹಾಕಿದ್ದ. ನಂತರ ಸೊಲ್ಲಾಪುರ, ಪುಣೆ, ಶಿರಡಿಗೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರ ಎಸಗಿದ್ದ. ಈ ಕುರಿತು ಬಾಲಕಿಯ ಪೋಷಕರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಅಫಜಲಪುರ ಸರ್ಕಲ್ ಇನ್‌ಸ್ಪೆಕ್ಟರ್ ಮಹಾದೇವ ಪಂಚಮುಖಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು, ಪೋಕ್ಸೊ ಕಾಯ್ದೆಯಡಿ ಎಸಗಿದ ಅಪರಾಧಕ್ಕಾಗಿ 20 ವರ್ಷ ಜೈಲು ಶಿಕ್ಷೆ, ₹ 20 ಸಾವಿರ ದಂಡ, ಬಾಲಕಿಯನ್ನು ಅಪಹರಿಸಿದ ಅಪರಾಧಕ್ಕೆ 3 ವರ್ಷ ಜೈಲು, ₹ 6 ವರ್ಷ ದಂಡ, ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ, ₹ 600 ದಂಡ, ಬೆದರಿಕೆ ಹಾಕಿದ ಅಪರಾಧಕ್ಕೆ ಆರು ತಿಂಗಳು ಸಾದಾ ಶಿಕ್ಷೆ ಹಾಗೂ ₹ 500 ದಂಡ ವಿಧಿಸಿದರು.

ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದ ವತಿಯಿಂದ ₹ 5 ಲಕ್ಷ ಪರಿಹಾರವನ್ನು ತೀರ್ಪು ಪ್ರಕಟವಾದ ತಿಂಗಳೊಳಗಾಗಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು