ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜಿಲ್ಲೆಯಲ್ಲಿ 2,368 ಮತಗಟ್ಟೆ ಸ್ಥಾಪನೆ: ಜಿಲ್ಲಾಧಿಕಾರಿ

ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ
Last Updated 11 ಮಾರ್ಚ್ 2019, 12:32 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭಾ ಮತಕ್ಷೇತ್ರಗಳಿದ್ದು, ಈ ಪೈಕಿ ಚಿಂಚೋಳಿ ಮತ್ತು ಆಳಂದ ಕ್ಷೇತ್ರಗಳು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರವು ಕಲಬುರ್ಗಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಜಿಲ್ಲೆಯಲ್ಲಿ 516 ಸೂಕ್ಷ್ಮ ಮತ್ತು 61 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ’ ಎಂದರು.

ಅಂಗವಿಕಲರಿಗೆ ವಾಹನ: ‘ಜಿಲ್ಲೆಯಲ್ಲಿ ಒಟ್ಟು 14,117 ಅಂಗವಿಕಲರು ಇದ್ದಾರೆ. ಇವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ 1,216 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳು ಅಂಗವಿಕಲರ ಮನೆಗಳಿಗೆ ತೆರಳಿ ಅವರನ್ನು ಮತದಾನ ಕೇಂದ್ರಕ್ಕೆ ಕರೆತರಲಿವೆ’ ಎಂದು ತಿಳಿಸಿದರು.

ಸಿಬ್ಬಂದಿ ಕೊರತೆ ಇಲ್ಲ: ‘ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಲು ಯಾವುದೇ ರೀತಿಯಿಂದ ಸಿಬ್ಬಂದಿ ಕೊರತೆ ಇಲ್ಲ. ಚುನಾವಣಾ ಅಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿ, ಪೋಲಿಂಗ್ ಅಧಿಕಾರಿ ಸೇರಿದಂತೆ ಒಟ್ಟು 14,682 ಸಿಬ್ಬಂದಿಯ ಅಗತ್ಯವಿದ್ದು, ನಮ್ಮ ಬಳಿ ಈಗಾಗಲೇ 16,527 ಸಿಬ್ಬಂದಿ ಲಭ್ಯವಿದ್ದಾರೆ’ ಎಂದು ಮಾಹಿತಿ ನೀಡಿದರು.

‘63 ಸಂಚಾರ ಜಾಗೃತ ದಳಗಳನ್ನು ನಿಯೋಜಿಸಲಾಗಿದ್ದು, ಎಲ್ಲಾ ವಾಹನಗಳಿಗೆ ಗ್ಲೋಬಲ್ ಪೊಷಿನಸಿಂಗ್ ಸಿಸ್ಟ್‌ಂ (ಜಿಪಿಎಸ್) ಅಳವಡಿಸಲಾಗುವುದು. ಗಡಿ ಭಾಗಗಳಲ್ಲಿ 27 ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ದಿನಕ್ಕೆ 8 ಗಂಟೆಯಂತೆ 81 ಸಿಬ್ಬಂದಿ ದಿನದ 24 ಗಂಟೆ ಕೆಲಸ ನಿರ್ವಹಿಸಲಿದ್ದಾರೆ. ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀವಿಂಗ್ ತಂಡಗಳನ್ನು ಕೂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ಸಾರ್ವಜನಿಕ ಸಭೆ, ರ್‍ಯಾಲಿ ನಡೆಸಲು 24 ಗಂಟೆ ಮುಂಚಿತವಾಗಿ ಅನುಮತಿ ಪಡೆಯಬೇಕು. ಸಮಾಧಾನ ಮತ್ತು ಸುವಿಧಾ ಆ್ಯಪ್ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ತಾರಾ ಪ್ರಚಾಕರ ವೆಚ್ಚವನ್ನು ಅಭ್ಯರ್ಥಿಯ ಚುನಾವಣೆ ವೆಚ್ಚಕ್ಕೆ ಸೇರಿಸುವುದಿಲ್ಲ. ಒಂದು ವೇಳೆ ಅಭ್ಯರ್ಥಿ ತಾರಾ ಪ್ರಚಾರಕರೊಂದಿಗೆ ವೇದಿಕೆ ಹಂಚಿಕೊಂಡರೆ ಅವರ ಖಾತೆಗೆ ಜಮಾ ಮಾಡಲಾಗುವುದು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಂ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT