ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ಶೇ 25ರಷ್ಟು ಹಾಜರಾತಿ

ಜಿಲ್ಲೆಯ ಶಾಲೆಗಳಲ್ಲಿ ಮತ್ತೆ ಬಾರಿಸಿತು ಢಣಢಣ ಗಂಟೆ, ಸಹಪಾಠಿಗಳೊಂದಿಗೆ ಬೆರೆತು ನಲಿದ ಚಿಣ್ಣರ ದಂಡು
Last Updated 26 ಅಕ್ಟೋಬರ್ 2021, 4:46 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲೂ 1ರಿಂದ 5ರವರೆಗೆ ಭೌತಿಕ ತರಗತಿಗಳು ಸೋಮವಾರ ಆರಂಭವಾದವು. ಎರಡು ವರ್ಷಗಳ ನಂತರ ಚಿಣ್ಣರು ತಮ್ಮ ಶಾಲೆ ಅಂಗಳಕ್ಕೆ ಓಡೋಡಿ ಬಂದರು. ಇದರಿಂದ ಶಾಲೆಗಳಲ್ಲಿನ ಲವಲವಿಕೆ ಮತ್ತೆ ಮರಳಿತು. ಅದರಲ್ಲೂ ಇದೇ ಮೊದಲ ಬಾರಿಗೆ 1ನೇ ತರಗತಿಗೆ ಪ್ರವೇಶ ಪಡೆದ ಪುಟಾಣಿಗಳು ತಮ್ಮ ಮೊದಲ ದಿನದ ಶಾಲೆಯ ಸಂಭ್ರಮ ಅನುಭವಿಸಿದರು.

ನಗರದ ಬಹುತೇಕ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೃಪ್ತಿಕರವಾಗಿದ್ದು, ಶೇ 44ರಷ್ಟು ಹಾಜರಾತಿ ಕಂಡು ಬಂತು. ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಇತ್ತು. ಜಿಲ್ಲೆಯಲ್ಲಿ ಒಟ್ಟಾರೆ ಶೆ 25ರಷ್ಟು ಮಕ್ಕಳು ಶಾಲೆಗೆ ಬಂದರು.

‘ಮೂರು– ನಾಲ್ಕು ದಿನಗಳಲ್ಲಿ ಮಕ್ಕಳು ಒಬ್ಬರನ್ನೊಬ್ಬರು ನೋಡಿ ಬರುತ್ತಾರೆ. ಆಗ ಹಾಜರಾತಿ ಸಂಖ್ಯೆ ಹೆಚ್ಚುತ್ತದೆ. ಈ ಬಗ್ಗೆ ಶಿಕ್ಷಕರೇ ಪಾಲಕರಲ್ಲಿ ಅರಿವು ಮೂಡಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಕರಿಗೂ ಸಂಭ್ರಮ: ಬೆಳಿಗ್ಗೆ 9.30ರ ಹೊತ್ತಿಗೆ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದರು. ಬೈಕ್‌, ಆಟೊ, ಬಸ್‌ಗಳಲ್ಲಿ ಬಂದ ಮಕ್ಕಳು ಶಾಲೆ ಅಂಗಳ ತಲುಪುತ್ತಿದ್ದಂತೆ ಗೆಳೆಯ– ಗೆಳತಿಯರನ್ನು ನೋಡಿ ಖುಷಿಯಿಂದ ಕುಣಿದರು. ಬೆಳಿಗ್ಗೆ 10ಕ್ಕೆ ಶಾಲೆಯ ಗಂಟೆ ಬಾರಿಸಿತು. ಧ್ವಜಕಟ್ಟೆಯ ಮುಂದೆ ಪ್ರಾರ್ಥನೆ ಆರಂಭವಾಯಿತು. ರಾಷ್ಟ್ರಗೀತೆ ಹಾಡಿದ ಬಳಿಕ ಮಕ್ಕಳು ತಮ್ಮ ತರಗತಿಯತ್ತ ಓಡಿದರು. ಮಧ್ಯಾಹ್ನ 1.30ರವರೆಗೂ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಸದ್ದು ಕೇಳಿಬಂತು.

ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಮಕ್ಕಳಿಗೆ ಸ್ಯಾನಿಟೈಸರ್‌ ಹನಿಗಳನ್ನು ಹಚ್ಚಿ ಬರಮಾಡಿಕೊಂಡರು. ಹೂಗಳನ್ನು ನೀಡಿ ಶುಭಾಶಯ ಹೇಳಿದರು. ಇಲ್ಲಿನ ವಿವೇಕಾನಂದ ವಿದ್ಯಾನಿಕೇತನ ಇಂಗ್ಲಿಷ್‌ ಮಾಧ್ಯಮ ಶಾಲೆ, ಶರಣಬಸವೇಶ್ವರ ಪಬ್ಲಿಕ್‌ ಸ್ಕೂಲ್‌, ಅಪ್ಪಾಜಿ ಗುರುಕುಲ ಶಾಲೆ ಸೇರಿದಂತೆ ಹಲವು ಕಡೆ ಪುಷ್ಪವೃಷ್ಟಿ ಮಾಡಿ ಮಕ್ಕಳನ್ನು ಖುಷಿಪಡಿಸಲಾಯಿತು.

ರಂಗೋಲಿ ಹಾಕಿ ಅಲಂಕರಿಸಿದ್ದ ಸರ್ಕಾರಿ ಶಾಲೆಗಳಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತರಗತಿಗಳನ್ನು ಆರಂಭಿಸಲಾಯಿತು. ಹಲವು ಶಿಕ್ಷಕ– ಶಿಕ್ಷಕಿಯರು ಮನೆಯಿಂದಲೇ ಸಿಹಿ ಮಾಡಿಕೊಂಡು ಬಂದು ಮಕ್ಕಳಿಗೆ ಹಂಚಿಸಿದರು.

ಕರುಣೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ರಾಮನಗರದ ಗೌತಮ ಬುದ್ಧ ಕಿರಿಯ ಪ್ರಾಥಮಿಕ ಶಾಲೆ, ಸೇಂಟ್ ಮೇರಿ ಶಾಲೆ, ವಿದ್ಯಾನಗರ ಹಾಗೂ ಪಂಚಶೀಲ ಸರ್ಕಾರಿ ಶಾಲೆ, ಜಗತ್‌ ಬಡಾವಣೆಯ ಸರ್ಕಾರಿ ಬಾಲಕಿಯರ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಉತ್ತಮ ಹಾಜರಾತಿ ಕಂಡುಬಂತು.

*

ಹೇಗಿತ್ತು ಸೋಮವಾರದ ಸಂಭ್ರಮ?

ಕೋವಿಡ್‌ ಕಾರಣದಿಂದ ಶಾಲೆಗಳು ಭಣಗುಡುತ್ತಿದ್ದವು. ಈಗ ಮಕ್ಕಳು ಶಾಲೆಗೆ ಬಂದಿದ್ದು ಖುಷಿ ತಂದಿದೆ. ತಮ್ಮ ಸಹಪಾಠಿಗಳನ್ನು ನೋಡಿ ಮಕ್ಕಳೂ ಖುಷಿಯಾಗಿದ್ದಾರೆ. ಅವರ ಸುರಕ್ಷತೆಗೆ ಶಾಲೆಯಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

–ಧರ್ಮರಾಯ ಜಕಾಪುರೆ, ಮುಖ್ಯಶಿಕ್ಷಕ, ಸರ್ಕಾರಿ ಶಾಲೆ, ಜೇವರ್ಗಿ ಕಾಲೊನಿ

ಶಾಲೆಯಲ್ಲಿ ಅಂತರ ಕಾಪಾಡಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಲಾಗಿದೆ. ಅಲ್ಲದೆ, ನಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲೂ ಅವರಿಗೆ ಕೈತೊಳೆಯಲು ಬಿಸಿ ನೀರು, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ.

–ನರಸಿಂಹ, ಸಮೂಹ ಸಂಪನ್ಮೂಲ ವ್ಯಕ್ತಿ, ಜಯನಗರ ಹಾಗೂ ಜೇವರ್ಗಿ ಕಾಲೊನಿ

ನಾನು ಇನ್ನುಮೇಲೆ ಪ್ರತಿದಿನವೂ ಶಾಲೆಗೆ ಬರುತ್ತೇನೆ. ಆನ್‌ಲೈನ್‌ ಕ್ಲಾಸ್‌ಗಳು ಇಷ್ಟವಾಗುವುದಿಲ್ಲ. ಶಾಲೆಯಲ್ಲಿ ಎಲ್ಲರೊಂದಿಗೆ ಆಟವಾಡಲು ಇಷ್ಟವಾಗುತ್ತದೆ. ಶಾಲೆ ಮತ್ತೆ ರಜೆ ಆಗುವುದು ನನಗೆ ಇಷ್ಟವಿಲ್ಲ.

–ಆಯೀಷಾ ಫಾತಿಮಾ ಮಹಮ್ಮದ್‌ ಹುಸೇನ್‌, 4ನೇ ತರಗತಿ, ಎಸ್‌ಬಿ ಪಬ್ಲಿಕ್‌ ಸ್ಕೂಲ್‌

ಮೊದಲ ದಿನ ನಮ್ಮ ಮಿಸ್‌ ಅಂಕಿಮಗ್ಗಿಗಳನ್ನು ಕಲಿಸಿದರು. ಇಷ್ಟು ದಿನ ಟ್ಯೂಷನ್‌ನಲ್ಲಿ ಕಲಿಯುತ್ತಿದ್ದೆ. ನನ್ನ ಇಬ್ಬರು ಗೆಳೆಯರೂ ಶಾಲೆಗೆ ಬಂದಿದ್ದರು. ಮೂವರೂ ಅಕ್ಕಪಕ್ಕ ಕೂತು ಖುಷಿಯಾಯಿತು.

–ವಿನಯರೆಡ್ಡಿ ಎಚ್‌.ಜಿ., ಸೇಂಟ್ ಮೇರಿ ಶಾಲೆ

ಎರಡೇ ದಿನಗಳ ಹಿಂದೆ ನನ್ನ ಸಹೋದರನ ಮದುವೆ ಮುಗಿದಿದೆ. ಸಾಕಷ್ಟು ಕೆಲಸಗಳು ಇದ್ದರೂ ನಾನು ಬಿಟ್ಟು ಬಂದೆ. ನನ್ನ ಮಗ 1ನೇ ತರಗತಿಗೆ ಪ್ರವೇಶ ಪಡೆದಿದ್ದಾನೆ. ಶಾಲೆಗೆ ಕಾಲಿಟ್ಟಾಗ ಅವನ ಮೊದಲ ದಿನದ ಸಂಭ್ರಮ ಹೇಗಿರುತ್ತದೆ ಎಂಬುದನ್ನು ಕಣ್ಣಾರೆ ನೋಡಬೇಕೆಂಬ ಹಂಬಲವಿತ್ತು. ಈಗ ಖುಷಿಯಾಗಿದೆ.

–ಶೀಲಾ ಸಂಗಮೇಶ ಉಳ್ಳಾಗಡ್ಡಿ, ಗೃಹಿಣಿ

ಮಗನನ್ನು ಪ್ರತಿದಿನ ಎಬ್ಬಿಸಿ, ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ ಶಾಲೆಗೆ ಬಿಡುವುದೇ ಒಂದು ಸಂಭ್ರಮ. ಶಾಲೆ ಬಿಡುವ ವೇಳೆಗೆ ಮಗನಿಗಾಗಿ ಮತ್ತೆ ಕಾಯುವುದೂ ಒಂಥರದ ಖುಷಿ.ಕಳೆದ ಎರಡು ವರ್ಷಗಳಿಂದ ನಾನು ಈ ಸಂಭ್ರಮ ಕಳೆದುಕೊಂಡಿದ್ದೆ. ಈಗ ಮತ್ತೆ ಶಾಲೆಗಳು ಆರಂಭವಾಗಿದ್ದರಿಂದ ಮನೆಯಲ್ಲೂ ಸಂಭ್ರಮ ಮೂಡಿದೆ.

–ವಿಜಯಲಕ್ಷ್ಮಿ ಅನಿಲಕುಮಾರ ಅಲಮೇಲಕರ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT