ಭಾನುವಾರ, ಡಿಸೆಂಬರ್ 4, 2022
19 °C

ಕಲಬುರಗಿ ಜಿಲ್ಲೆಯ 453 ತಾಂಡಾಗಳು ಕಂದಾಯ ಗ್ರಾಮಗಳಾಗಿ ಘೋಷಣೆ: ಆರ್. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಮುಂದಿನ ಎರಡು ತಿಂಗಳಲ್ಲಿ ಜಿಲ್ಲೆಯ 453 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಘೋಷಿಸಿದರು.

ಜಿಲ್ಲೆಯ ಸೇಡಂ ತಾಲ್ಲೂಕಿನ ಆಡಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಪೈಲಟ್ ಯೋಜನೆಯಾಗಿ ಕಲಬುರಗಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುವುದು ಎಂದರು.

ಕೆಲವೇ ದಿನಗಳಲ್ಲಿ ಕಲಬುರಗಿಗೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ತಾಂಡಾದ 30 ಸಾವಿರ ಜನರಿಗೆ ಭೂಮಿಯ ಹಕ್ಕುಪತ್ರಗಳನ್ನು ಕೊಡಿಸಲಾಗುವುದು. ಇದು ಒಂದು ಗಿನ್ನೆಸ್ ದಾಖಲೆಯಾಗಲಿದೆ ಎಂದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭವಾದ ಕೆಲ ಹೊತ್ತಿನಲ್ಲಿ ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಅವರು ನನಗೆ ಕರೆ ಮಾಡಿ ತಮ್ಮ ಎರಡು ಘೋಷಣೆಗಳನ್ನು ತಿಳಿಸುವಂತೆ ಸೂಚಿಸಿದ್ದಾರೆ.

ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಸ್ಕಾಲರ್ ಶಿಪ್ ನೀಡಲಾಗುತ್ತಿದ್ದು, ಅದನ್ನು ಕುಂಬಾರರು, ಕಮ್ಮಾರರು, ಬಡಿಗತನ ವೃತ್ತಿ ಮಾಡುವವರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂಬುದನ್ನು ತಿಳಿಸಲು ಹೇಳಿದ್ದಾರೆ. ಅಲ್ಲದೇ, ಈ ವೃತ್ತಿ ಮುಂದುವರೆಸಲು ₹ 50 ಸಾವಿರ ಸಾಲ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಅಲ್ಲದೇ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಮಾಸಿಕವಾಗಿ ದೊರೆಯುತ್ತಿದ್ದ ₹ 3 ಸಾವಿರ ಆರ್ಥಿಕ ನೆರವನ್ನು ₹ 10 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ.  ಅವರಿಗೆ ಸರ್ಕಾರದ ವತಿಯಿಂದ ನಿವೇಶನ, ಮನೆ ಕಟ್ಟಿಕೊಡುವುದರ ಜೊತೆಗೆ ₹ 5 ಲಕ್ಷ ಆರ್ಥಿಕ ‌ನೆರವನ್ನೂ ನೀಡಲಾಗುವುದು ಎಂದು ಸಚಿವ ಅಶೋಕ ತಿಳಿಸಿದರು.

ಹಲೋ ಕಂದಾಯ ಸಚಿವರೇ ಸಹಾಯವಾಣಿಗೆ ಕರೆ ಮಾಡಿದವರಿಗೆ ಮುಂದಿನ 72 ಗಂಟೆಗಳಲ್ಲಿ ಪಿಂಚಣಿ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ, ರೈತರ ಮನೆ ಬಾಗಿಲಿಗೇ ಅವರ ಜಮೀನಿನ ಪಹಣಿ, ಸರ್ವೆ ದಾಖಲೆಗಳನ್ನು  ಕಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಯಾವ ಕಂದಾಯ ಸಚಿವರೂ ಮಾಡದ ಕೆಲಸವನ್ನು ನಾನು ಮಾಡಿರುವ ಬಗ್ಗೆ ತೃಪ್ತಿ ‌ಇದೆ. ಮೊದಲೆಲ್ಲ ಸರ್ಕಾರಿ ಸೌಲಭ್ಯ ಪಡೆಯಲು ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಅಲೆಯಬೇಕಿತ್ತು. ಆದರೆ, ಜಿಲ್ಲಾಧಿಕಾರಿಗಳ ಕಡೆ ಹಳ್ಳಿಯ ಕಡೆ ಕಾರ್ಯಕ್ರಮ ಆರಂಭವಾದ ಬಳಿಕ ಅಧಿಕಾರಿಗಳು ಗ್ರಾಮಗಳಿಗೇ ಹೋಗುತ್ತಿದ್ದಾರೆ. ಇದರಿಂದ ಜನರ ಅಲೆದಾಟ ತಪ್ಪಿದಂತಾಗಿದೆ. ಹಿಂದಿನ ಸರ್ಕಾರಗಳು ಬೆಳೆ ನಷ್ಟವಾಗಿದ್ದಕ್ಕೆ ಪರಿಹಾರವನ್ನು ಎರಡು ವರ್ಷಗಳ ಪಡೆಯುವ ಸ್ಥಿತಿ ಇತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ್ದು, ಬೆಳೆ ನಷ್ಟದ ವರದಿ ಬಂದ 30 ದಿನಗಳಲ್ಲೇ ಹಣ ರೈತರ ಖಾತೆಗೆ ಜಮಾ ಆಗುತ್ತಿದೆ ಎಂದು ವಿವರಿಸಿದರು.

ಒಂದು ₹ 10 ಸಾವಿರ ‌ಕೋಟಿಯನ್ನು ವೃದ್ಧರು, ವಿಧವೆಯರು, ಅಂಗವಿಕಲರ ಪಿಂಚಣಿಗೆ ಖರ್ಚು ಮಾಡಲಾಗುತ್ತಿದೆ. ಬೆಳೆನಷ್ಟಕ್ಕಾಗಿ ರಾಜ್ಯದ 18.02 ಲಕ್ಷ ರೈತರಿಗೆ ಕೇಂದ್ರದಿಂದ ₹ 1252 ಕೋಟಿ ಹಾಗೂ ರಾಜ್ಯದಿಂದ 1135 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇಷ್ಟೊಂದು ಹಣವನ್ನು ಹಿಂದಿನ ಯಾವ ಸರ್ಕಾರಗಳೂ ಬಿಡುಗಡೆ ಮಾಡಿರಲಿಲ್ಲ. ಆದರೂ, ನಮ್ಕ ಸರ್ಕಾರ ಸತ್ತಿದೆ ಎಂದು ವಿರೋದ ಪಕ್ಷಗಳವರು ಟೀಕಿಸುತ್ತಿದ್ದಾರೆ. ನಮ್ಮ ಡಬಲ್ ಎಂಜಿನ್ ಸರ್ಕಾರ ಜೀವಂತ ಇದ್ದುದಕ್ಕೇ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದೆ ಎಂದರು.

ನಿವೇಶನ, ಮನೆ, ಜಮೀನು ಖರೀದಿ ಶುಲ್ಕದಲ್ಲಿ ಕೋವಿಡ್ ಪ್ರಯುಕ್ತ ಶೇ 10ರಷ್ಟು ರಿಯಾಯಿತಿ ನೀಡುವ ಬಗ್ಗೆ ಶೀಘ್ರ ಆದೇಶ ಹೊರಡಿಸಲಿದ್ದೇನೆ. ಈ ಬಗ್ಗೆ ಹಣಕಾಸು ಇಲಾಖೆಗೆ ಮನವರಿಕೆ ಮಾಡಿಕೊಡಲಿದ್ದೇನೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು