ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳ ಕ್ವಿಂಟಲ್‌ಗೆ ₹ 8 ಸಾವಿರ: ಇತಿಹಾಸದಲ್ಲೇ ಅತ್ಯಧಿಕ ದರ, ರೈತರಿಗೆ ಬಂಪರ್‌

Published 21 ನವೆಂಬರ್ 2023, 4:35 IST
Last Updated 21 ನವೆಂಬರ್ 2023, 4:35 IST
ಅಕ್ಷರ ಗಾತ್ರ

ಅಫಜಲಪುರ: ಉತ್ತರ ಕರ್ನಾಟಕದ ಪ್ರಮುಖ ಆಹಾರ ಧಾನ್ಯ ಜೋಳ ಒಂದು ಕ್ವಿಂಟಲ್‌ಗೆ ₹ 8 ಸಾವಿರ ತಲುಪುವ ಸಾಧ್ಯತೆಯಿದೆ. ಇದು ಮಾರುಕಟ್ಟೆಯ ಇತಿಹಾಸದಲ್ಲಿಯೇ ಅತ್ಯಧಿಕ ದರವಾಗಿದ್ದು, ಈ ಬಾರಿ ಜೋಳ ಬೆಳೆಗಾರರಿಗೆ ಬಂಪರ್‌ ಲಾಭ ದೊರೆಯಲಿದೆ.

ಇತ್ತೀಚಿನ ದಿನಗಳಲ್ಲಿ ಜೋಳಕ್ಕೆ ಉತ್ತಮ ಬೆಳೆ ಸಿಗುತ್ತಿಲ್ಲ. ಹೀಗಾಗಿ ಈ ಭಾಗದ ರೈತರೂ ಕೂಡ ಜೋಳ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜತೆಗೆ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಿದ್ದರೂ, ಬೆಲೆಯಲ್ಲಿ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಜತೆಗೆ ಸಾಕಷ್ಟು ರೈತರು, ಜಾನುವಾರು ಮೇವಿಗಾಗಿ ಜೋಳವನ್ನು ಬೆಳೆಯುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಜೋಳಕ್ಕೆ ಬಹಳಷ್ಟು ಬೇಡಿಕೆಯಿದ್ದು, ಆವಕ ಕಡಿಮೆಯಾಗಿ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಹೀಗಾಗಿ ರೈತರು, ನಾವ್ಯಾಕೆ ಜೋಳ ಬೆಳೆಯಲಿಲ್ಲ ಎಂದು ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಿಗಿಮನಿ ಅವರು ಜೋಳ ಬೆಳೆಗಾರರಿಗೆ ಮಾಹಿತಿ ನೀಡಿ, ರೈತರು ತಾಲ್ಲೂಕಿನಲ್ಲಿ ಮಳೆ ಆಶ್ರಯದಲ್ಲಿ ಹೆಚ್ಚು ಹತ್ತಿ ಹಾಗೂ ತೊಗರಿ ಬೆಳೆಯುತ್ತಾರೆ. ಜೋಳ ಬೆಳೆಯುವುದು ಬಹಳ ಕಡಿಮೆ. ಸಾಕಷ್ಟು ರೈತರು ಜೋಳವನ್ನು ಬಿತ್ತನೆ ಮಾಡುವುದೇ ಇಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಜಾನುವಾರ ಸಂಖ್ಯೆ ಬಳಕೆ ಕಡಿಮೆಯಾಗುತ್ತಿದೆ. ಹೀಗಾಗಿ ರೈತರಿಗೆ ಜೋಳದ ಅವಶ್ಯಕತೆ ಕಡಿಮೆಯಾಗುತ್ತಿದೆ. ಆದರೆ ಪ್ರತಿ ವರ್ಷ ಜೋಳದ ಬೆಲೆ ಹೆಚ್ಚಳವಾಗುತ್ತಲೇ ಇದೆ. ಪ್ರಸ್ತುತ ವರ್ಷ ಜೋಳದ ಬೆಲೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಜೋಳ ಬೆಳೆಯಲು ಕಡಿಮೆ ಖರ್ಚು ಬರುತ್ತದೆ. ಬಿತ್ತನೆ ವೇಳೆ ತೇವಾಂಶವಿದ್ದರೆ ಸಾಕು. ವಾತಾವರಣದಲ್ಲಿರುವ ತೇವಾಂಶದ ಆಧಾರದಲ್ಲೇ ಜೋಳ ಬೆಳೆಯುತ್ತದೆ. ರೈತರು ಜೋಳ ಜೋಳ ಬೆಳೆಯಲು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.

ಜನಸಾಮಾನ್ಯರಿಗೆ ಬರೆ: ಮಾರುಕಟ್ಟೆಯಲ್ಲಿ ಜೋಳದ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ. ಹೆಚ್ಚು ಬೆಳೆದ ರೈತರು, ಜೋಳವನ್ನು ಮಾರುಕಟ್ಟೆ ತರುತ್ತಾರೆ. ಅಲ್ಪಸ್ವಲ್ಪ ಜೋಳ ಬೆಳೆದ ರೈತರು, ಮನೆಗಾಗಿಯೇ ಇಟ್ಟುಕೊಂಡು ಬಿಡುತ್ತಾರೆ. ಇದರಿಂದಗಿ ಮಾರುಕಟ್ಟೆಗೆ ಜೋಳದ ಆವಕವೂ ಕಡಿಮೆಯಾಗಿದ್ದು, ಜನಸಾಮಾನ್ಯರಿಗೆ ಜೋಳ ಖರೀದಿಸುವುದು ಬರಗಾಲದ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸರ್ಕಾರ ಜೋಳ ಬೆಳೆಯಲು ಪ್ರೋತ್ಸಾಹ ನೀಡಲಿ: ಸರ್ಕಾರವು, ಈ ಭಾಗದ ರೈತರು ಜೋಳವನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು. ಈಗಾಗಲೇ ಕೃಷಿ ಇಲಾಖೆಯಲ್ಲಿ ಸಿರಿಧಾನ್ಯ ಬೆಳೆಯಲು ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲಾಗುತ್ತದೆ. ಅದರಲ್ಲಿ ಬಿಳಿಜೋಳ ಸೇರ್ಪಡೆಯಾಗಿಲ್ಲ. ಹೀಗಾಗಿ ಸರ್ಕಾರ ಬಿಳಿ ಜೋಳ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ಹಾಗೂ ಉಚಿತ ಬೀಜ ವಿತರಣೆ ಮತ್ತು ತರಬೇತಿ ನೀಡಬೇಕು ಎಂದು ರೈತ ಮುಖಂಡರಾದ ಚಂದಮಾಮ ಬಳಗೊಂಡೆ ಹಾಗೂ ಬಂದರವಾಡ ಲಕ್ಷ್ಮಣ ಕಟ್ಟಿಮನಿ, ಮಾಶಾಳ ಗ್ರಾಮದ ಸಂತೋಷ ಗಂಜಿ ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಜೋಳದ ಬೆಲೆ ಗಗನಕ್ಕೇರಿದೆ. ನಾವು ಕೇವಲ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ್ದೇವೆ. ಅವು ಕೂಡ ಮಳೆ ಕೊರತೆಯಿಂದ ಹಾಳಾಗಿವೆ. ಆದರೆ ಜೋಳ ಬಿತ್ತನೆ ಮಾಡಿದ್ದರೆ ಲಾಭ ಪಡೆಯಬಹುದಾಗಿತ್ತು.
-ಚಂದ್ರಶೇಖರ ಕರಜಗಿ, ರೈತ
ಸ್ವಂತ ಜಮೀನಿದ್ದರೂ ಜೋಳ ಖರೀದಿಸುವಂತಾಗಿದೆ. ತೊಗರಿ ಮತ್ತು ಹತ್ತಿಗೆ ಬೆಳೆಯಲು ಆದ್ಯತೆ ನೀಡುತ್ತೇವೆ. ಈ ಬಾರಿ ಜೋಳಕ್ಕೆ ಬಂಪರ್‌ ಬೆಲೆಯಿದ್ದು ಜೋಳ ಬೆಳೆದವರು ಉತ್ತಮ ಲಾಭದ ಪಡೆದುಕೊಳ್ಳಬಹುದಾಗಿದೆ.
-ಶಾಮಸುಂದರ ಮಠಪತಿ, ರೈತರ ಬಳ್ಳೂರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT