ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: 9 ವಾರ್ಡ್‌ಗಳು ಸ್ಲಂ

Last Updated 11 ಸೆಪ್ಟೆಂಬರ್ 2020, 1:50 IST
ಅಕ್ಷರ ಗಾತ್ರ

ವಾಡಿ: ಪ್ರಸಕ್ತ ವರ್ಷ ಪಟ್ಟಣದ 23 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳನ್ನು ಸ್ಲಂ ಪ್ರದೇಶಗಳಾಗಿ ಘೋಷಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ತಿಳಿಸಿದರು.

ನೂತನ ಅಧ್ಯಕ್ಷೆ ಝರೀನಾ ಬೇಗಂ ನೇತೃತ್ವದಲ್ಲಿ ಗುರುವಾರ ಜರುಗಿದ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಪಟ್ಟಣದ ಬಸವನಖಣಿ, ಜಾಂಬವೀರ ಕಾಲೊನಿ, ಅಂಬೇಡ್ಕರ್ ಕಾಲೊನಿ, ಇಂದಿರಾ ನಗರ, ಪಿಲ್ಲಕಮ್ಮ ಏರಿಯಾ, ಕಲ್ಕಮ್ಮ ಏರಿಯಾ, ಹನುಮಾನ ನಗರ, ವಿಜಯನಗರ ಹಾಗೂ ಭೀಮಾನಗರ ಬಡಾವಣೆಗಳನ್ನು ಸ್ಲಂ ಪ್ರದೇಶಗಳೆಂದು ಘೋಷಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಅನುದಾನ, ತೆರಿಗೆ ಕಡಿತದಂತಹ ಸೌಲಭ್ಯಗಳು ಈ ಪ್ರದೇಶಗಳಿಗೆ ಹರಿದು ಬರಲಿವೆ. ಯೋಜನೆಗಳ ಅನುಷ್ಠಾನದಲ್ಲಿ ಪ್ರಥಮ ಆದ್ಯತೆ ಸ್ಲಂ ಬಡಾವಣೆಗಳಿಗೆ ದೊರಕಲಿದೆ. ಎರಡನೆ ಹಂತದಲ್ಲಿ ಮತ್ತಷ್ಟು ಬಡಾವಣೆಗಳು ಸ್ಲಂ ಯೋಜನೆಯ ವ್ಯಾಪ್ತಿಗೊಳಪಡಲಿವೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯ 7ನೇ ಹಂತದ ಯೋಜನೆಯಡಿಯಲ್ಲಿ 2,355 ಮನೆಗಳ ಡಿಪಿಆರ್ ತಯಾರಿಸಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದ್ದು, ಮಂಜೂರಾತಿ ಹಂತದಲ್ಲಿದೆ. ಇದರಲ್ಲಿ 1805 ಮನೆಗಳು ಪರಿಶಿಷ್ಟ ಜಾತಿ, 29 ಮನೆಗಳು ಪರಿಶಿಷ್ಟ ಪಂಗಡ, 4 ಅಲ್ಪಸಂಖ್ಯಾತರು, 630 ಹಿಂದುಳಿದ ವರ್ಗ ಹಾಗೂ 87 ಇತರ ಹಿಂದುಳಿದ ವರ್ಗದವರಿಗೆ ಇರುತ್ತವೆ. ಯೋಜನೆಯ ವೆಚ್ಚ ₹6.40 ಲಕ್ಷ ಇದ್ದು, ಅದರಲ್ಲಿ ಪ.ಜಾ/ಪ.ಪಂ ಫಲಾನುಭವಿಗಳು ಯೋಜನೆಯ ಶೇ10, ಇತರ ಹಿಂದುಳಿದ ವರ್ಗದವರು ಶೇ15 ರಷ್ಟು ವಂತಿಕೆ ನೀಡಿದರೆ ಸಾಕು. ಅದರ ಜೊತೆ ಸಾಲದ ರೂಪದಲ್ಲಿ ಹಣ ಭರಿಸಬೇಕು. ಉಳಿದ ಹಣ ಕೇಂದ್ರ, ರಾಜ್ಯ ಸರ್ಕಾರ ಭರಿಸುತ್ತವೆ. ಇದರಲ್ಲಿ ಸ್ಲಂ ಬಡಾವಣೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಂತಿಮ ಆದೇಶ ಬಂದ ನಂತರ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುವುದು ಎಂದರು.

ಪಟ್ಟಣದಲ್ಲಿ ನಾಯಿ, ಹಂದಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಶರಣು ನಾಟೇಕಾರ, ರಾಜೇಶ ಅಗರ್ವಾಲ ಒತ್ತಾಯಿಸಿದರು.

ಉಪಾಧ್ಯಕ್ಷ ತಿಮ್ಮಯ್ಯ ಪವಾರ, ಸದಸ್ಯರಾದ ಮರಗಪ್ಪ ಕಲಕುಟಗಿ, ಮೈನಾಬಾಯಿ ಗೋಪಾಲ, ಪ್ರಕಾಶ ನಾಯಕ, ರಾಜೇಶ ಅಗರ್ವಾಲ, ಮಹ್ಮದ್ ಗೌಸ್, ಮಲ್ಲಯ್ಯ ಗುತ್ತೇದಾರ, ಸುಶೀಲಾಬಾಯಿ ಮೊಸಳಗಿ, ಶರಣು ನಾಟೇಕಾರ, ಅಫ್ಸರಾ ಬೇಗಂ, ಸುಗಂಧಾ ಜೈಗಂಗಾ, ಹಸೀನಾ ಬೇಗಂ ಖುರೇಶಿ, ಪೃಥ್ವಿರಾಜ ಸೂರ್ಯವಂಶಿ, ಗಂಗಾ ತುಕರಾಮ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT