ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರಿನ ಹೆದ್ದಾರಿಯಲ್ಲಿ ಸಿಲುಕಿದ ಬಸ್‌

ಕಾಳಗಿ-–ಕೋಡ್ಲಿ ರಸ್ತೆ ಕಾಮಗಾರಿ ನನೆಗುದಿಗೆ; ಪರದಾಡಿದ ಪ್ರಯಾಣಿಕರು
Last Updated 20 ಅಕ್ಟೋಬರ್ 2022, 5:18 IST
ಅಕ್ಷರ ಗಾತ್ರ

ಕಾಳಗಿ: ಕಾಳಗಿ ಮತ್ತು ಕೋಡ್ಲಿ ನಡುವಿನ ರಾಜ್ಯಹೆದ್ದಾರಿ-125 (ಫಿರೋಜಾಬಾದ್‌- ಕಮಲಾಪುರ) ಕಾಮಗಾರಿ ಬಹುದಿನಗಳಿಂದ ಅರ್ಧಕ್ಕೆ ನಿಂತು ನನೆಗುದಿಗೆ ಬಿದ್ದಿದೆ. ಪರಿಣಾಮ ಬುಧವಾರ ಸರ್ಕಾರಿ ಬಸ್ಸೊಂದು ಸಿಲುಕಿದ್ದು, ಪ್ರಯಾಣಿಕರು ಪರದಾಡುವಂತಾಯಿತು.

‘ಕಾಳಗಿಯಲ್ಲಿ ಲೋಕೋಪಯೋಗಿ ಇಲಾಖೆ ಉಪವಿಭಾಗ ಹೊಂದಿದ್ದರೂ ಈ ಕಾಮಗಾರಿಯ ಸಂಪೂರ್ಣ ನಿರ್ವಹಣೆಯನ್ನು ಬೀದರ್ ಜಿಲ್ಲೆಯ ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿ ಉಪವಿಭಾಗಕ್ಕೆ ನೀಡಲಾಗಿದೆ’ ಎಂಬುದು ಸಾರ್ವಜನಿಕರ ಆರೋಪ.

ಕಾಳಗಿ-ಕೋಡ್ಲಿ ನಡುವೆ 5 ಕಿ.ಮೀ ಅಂತರವಿದೆ. ಚಿಂಚೋಳಿ-ಕಲಬುರಗಿ ಸಂಪರ್ಕ ಮಾರ್ಗ ಕೂಡ ಇದು. ಇಲ್ಲಿ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಕೆಲ ತಿಂಗಳ ಹಿಂದೆ ಕಾಳಗಿಯಿಂದ ಲಕ್ಷ್ಮಣನಾಯಕ ತಾಂಡಾದವರೆಗೆ 2.5 ಕಿ.ಮೀ ಮಾತ್ರ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ಇನ್ನುಳಿದ ಅಲ್ಲಲ್ಲಿ 6-8 ಅಡಿ ಎತ್ತರದಲ್ಲಿ ತಗ್ಗು ತೋಡಿ ಹಾಗೆ ಬಿಡಲಾಗಿದೆ.

ಚಿಂಚೋಳಿ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯ ಈ ರಸ್ತೆ ಮಾರ್ಗದಲ್ಲೇ ಓಡಾಡುತ್ತಾರೆ. ಇನ್ನು ಬೀದರ್‌ ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್‌ ತಾಲ್ಲೂಕುಗಳ ಪ್ರಯಾಣಿಕರಿಗೂ ಇದೇ ಮಾರ್ಗ ಅನುಕೂಲ. ಮಳೆ ಬಂದರೆ ಈ ಸ್ಥಳ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟು ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತದೆ. ಹಗಲು ಹೊತ್ತಿನಲ್ಲಿ ಹೇಗಾದರೂ ಪ್ರಯಾಣಿಸುವ ಜನರು, ರಾತ್ರಿ ವೇಳೆ ಇಲ್ಲದ ತೊಂದರೆಗಳನ್ನು ಅನುಭವಿಸುತ್ತಾರೆ. ಈ ಪರಿಸ್ಥಿತಿ ತಲೆದೋರಿ ಆರು ತಿಂಗಳು ಉರುಳುತ್ತಿದ್ದರೂ ಕಾಮಗಾರಿ ಮಾತ್ರ ಪ್ರಗತಿ ಕಾಣದೆ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.

ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ಯಾರೇ ಎನ್ನುತ್ತಿಲ್ಲ ಎಂದು ವಾಹನ ಸವಾರರು ದೂರಿದ್ದಾರೆ. ಆಗುವ ಅನಾಹುತಗಳಿಗೆ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT