ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಕೆರೆ ನಿರ್ವಹಣೆ ಕೊರತೆ: ಸುಸಜ್ಜಿತ ಮೀನು ಮಾರುಕಟ್ಟೆಯೂ ಇಲ್ಲ

ಕಲಬುರಗಿ ಜಿಲ್ಲೆಯ 82 ಕೆರೆಗಳಲ್ಲಿ 10,500 ಮಂದಿ ಮೀನುಗಾರಿಕೆಯಲ್ಲಿ ಭಾಗಿ
ಲಕ್ಷ್ಮಣ ಟಿ. ನಾಯ್ಕ
Published : 26 ಆಗಸ್ಟ್ 2024, 5:28 IST
Last Updated : 26 ಆಗಸ್ಟ್ 2024, 5:28 IST
ಫಾಲೋ ಮಾಡಿ
Comments

ಕಲಬುರಗಿ: ಒಳನಾಡು ಮೀನುಗಾರಿಕೆಯನ್ನೇ ಪ್ರಧಾನವಾಗಿ ನೆಚ್ಚಿಕೊಂಡಿರುವ ಕಲಬುರಗಿ ಜಿಲ್ಲೆಯಲ್ಲಿ ಕೆರೆಗಳ ನಿರ್ವಹಣೆ ಸಮಸ್ಯೆಯಿಂದ ಮೀನು ಉತ್ಪಾದನೆಯೂ ತುಸು ಕಡಿಮೆಯಾಗಿದೆ.

ಇದರ ಜತೆ ಎರಡು ವರ್ಷಗಳಿಂದ ಮಳೆ ಕೈಕೊಟ್ಟಿದ್ದರಿಂದ ಮೀನು ಕೃಷಿ ಲಾಭದಾಯಕವಾಗಿದೆ ಎಂಬ ಸ್ಥಿತಿಯಲ್ಲಿ ಇಲ್ಲ. ಇದರೊಂದಿಗೆ ಮಾರುಕಟ್ಟೆಯ ವಿಸ್ತರಣೆಯೂ ನಿಧಾನಗತಿಯಲ್ಲಿರುವುದು ಮೀನುಗಾರಿಕೆ ನಡೆಸುವ ಹಾಗೂ ಮಾರುವವರಿಗೆ ’ಮೀನು’ ರುಚಿಕರವಾಗಿಲ್ಲ.

ಜಿಲ್ಲೆಯಲ್ಲಿ ಅಂದಾಜು 10,500 ಮೀನುಗಾರರಿದ್ದಾರೆ. ಸರಿಸುಮಾರು 300ಕ್ಕೂ ಹೆಚ್ಚು ಮೀನು ಮಾರಾಟ ಮಾಡುವ ಮಹಿಳೆ ಹಾಗೂ ಪುರುಷರಿದ್ದಾರೆ. ಸಣ್ಣೂರು, ಕಣ್ಣಿ ಮಾರುಕಟ್ಟೆ, ಶನಿವಾರದಂದು ಬಹಮನಿ ಕೋಟೆ ಎದುರಿನ ರಸ್ತೆಯಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಮಹಿಳೆಯರು ಬಿಸಿಲು, ಮಳೆಯನ್ನದೇ ಮೀನು ಮಾರಾಟ ಮಾಡುತ್ತಿದ್ದಾರೆ.

ಮೀನುಗಾರಿಕೆ ಇಲಾಖೆಯು 82 ಕೆರೆಗಳು ಹಾಗೂ 6 ಜಲಾಶಯಗಳಿಗೆ ಪರವಾನಗಿ ನೀಡುವ ಅಧಿಕಾರ ಹೊಂದಿದೆ. ಈಗಾಗಲೇ 74 ಕೆರೆ ಹಾಗೂ 6 ಜಲಾಶಯಗಳನ್ನು ಗುತ್ತಿಗೆ ನೀಡಿದೆ. ಐದು ವರ್ಷಕ್ಕೊಮ್ಮೆ ಟೆಂಡರ್‌ ಪ್ರಕ್ರಿಯೆ ನವೀಕರಣವಾಗುವುದರಿಂದ ಇನ್ನಷ್ಟೇ ಅದರ ಹರಾಜು ಪ್ರಕ್ರಿಯೆ ನಡೆಯಬೇಕಿದೆ. ಕಳೆದ ವರ್ಷ ಮೀನುಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈ ವರ್ಷವೂ ಇದೇ ಆಶಾಭಾವ ಇದೆ.

ಜಿಲ್ಲೆಯಲ್ಲಿ ಮೀನುಗಾರರು 22 ಸಹಕಾರ ಸಂಘಗಳನ್ನು ರಚಿಸಿಕೊಂಡಿದ್ದಾರೆ. ಇಲಾಖೆಯ ಚಿಂಚೋಳಿ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಏಳು ಸಂಘಗಳಿವೆ. ಸೇಡಂ, ಚಿತ್ತಾಪುರ, ಕಾಳಗಿ ಮತ್ತು ಶಹಾಬಾದ್‌ ತಾಲ್ಲೂಕುಗಳು ಈ ಕಚೇರಿ ವ್ಯಾಪ್ತಿಗೆ ಬರುತ್ತವೆ.

ಕಲಬುರಗಿ ಕಚೇರಿ ವ್ಯಾಪ್ತಿಯಲ್ಲಿ 15 ಸಂಘಗಳಿವೆ. ಅಫಜಲಪುರ, ಆಳಂದ, ಜೇವರ್ಗಿ, ಕಮಲಾಪುರ ಹಾಗೂ ಯಡ್ರಾಮಿ ಇದರ ವ್ಯಾಪ್ತಿಗೆ ಬರುತ್ತವೆ. ಪ್ರತಿ ಸಂಘವೂ 100ರಿಂದ 200 ಜನ ಸದಸ್ಯರನ್ನು ಹೊಂದಿದೆ. ಅವರು ಜಿಲ್ಲೆಯ ಕೆಲ ಕೆರೆಗಳನ್ನು ಗುತ್ತಿಗೆ ಪಡೆದು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ 2023–24ರಲ್ಲಿ 11,600 ಟನ್‌ಗಳಷ್ಟು ಮೀನು ಹಿಡಿಯಲಾಗಿದೆ. ಅಫಜಲಪುರದಲ್ಲಿ 1100 ಟನ್‌, ಆಳಂದಲ್ಲಿ 2,665 ಟನ್, ಚಿಂಚೋಳಿಯಲ್ಲಿ 2,452 ಟನ್‌, ಚಿತ್ತಾಪುರದಲ್ಲಿ 488 ಟನ್‌, ಕಲಬುರಗಿಯಲ್ಲಿ 1115 ಟನ್‌, ಜೇವರ್ಗಿಯಲ್ಲಿ 415 ಟನ್‌, ಕಾಳಗಿಯಲ್ಲಿ 1212 ಟನ್‌, ಕಮಲಾಪುರದಲ್ಲಿ 788, ಸೇಡಂ 814, ಶಹಾಬಾದ್‌ನಲ್ಲಿ 352 ಹಾಗೂ ಯಡ್ರಾಮಿಯಲ್ಲಿ 88 ಟನ್‌ ಮೀನು ಉತ್ಪಾದನೆ ಮಾಡಲಾಗಿದ್ದು, ಜಿಲ್ಲೆಯಲ್ಲಿ 13 ಮೀನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲವು ಕೆರೆಗಳಲ್ಲಿಯೇ ಮಾರಾಟ ಮಾಡುವ ಪ್ರಕ್ರಿಯೆಯೂ ನಡೆಯುತ್ತದೆ. ಜಿಲ್ಲೆಯಲ್ಲಿ 50 ಐಸ್‌ ಪ್ಲಾಂಟ್‌ಗಳಿವೆ. ಆದರೆ, ಒಂದೇ ಒಂದು ಶೀಥಲೀಕರಣ ಘಟಕ ಇಲ್ಲ. ಕಲಬುರಗಿ ಜಿಲ್ಲೆಯಲ್ಲಿ 2658 ಕುಟುಂಬಗಳು ಪೂರ್ಣಕಾಲಿಕವಾಗಿ ಮೀನುಗಾರಿಕೆಯನ್ನೇ ಮಾಡುತ್ತಿವೆ. ಇನ್ನೂ 940 ಕುಟುಂಬಗಳು ಅರೆಕಾಲಿಕವಾಗಿ ಮೀನುಗಾರಿಕೆ ಮಾಡುತ್ತಾ ಬಂದಿವೆ. ಈ ವರ್ಷ ಮೀನುಗಾರಿಕೆ ಇಲಾಖೆಯಿಂದ 1.11 ಕೋಟಿಯಷ್ಟು ಮೀನು ಮರಿಗಳನ್ನು ಕೆರೆ ಹಾಗೂ ಪಾಂಡ್‌ಗಳಿವೆ ಬಿಡಲಾಗಿದೆ.

ಗುತ್ತಿಗೆ ವಿಧಾನ: ಇಲಾಖೆಯು ಕೆರೆ ಹಾಗೂ ಜಲಾಶಯಗಳನ್ನು ನೇರ ಹಾಗೂ ಹರಾಜು ಪ್ರಕ್ರಿಯೆಯ ಮೂಲಕ 5 ವರ್ಷದ ಅವಧಿಗೆ ಗುತ್ತಿಗೆ ನೀಡುತ್ತದೆ. ಮೊದಲ ವರ್ಷ ಹೊರತುಪಡಿಸಿ ಉಳಿದ ಅವಧಿಗೆ ಪ್ರತಿ ವರ್ಷ ಗುತ್ತಿಗೆ ಹಣ ಶೇ 5ರಷ್ಟು ಹೆಚ್ಚಳವಾಗುತ್ತದೆ. ವಿಶೇಷವಾಗಿ ಸಂಘಗಳಿಗೆ ಸದ್ಯ ಒಂದು ಎಕರೆ ಕೆರೆ ಹಾಗೂ ಜಲಾಶಯ ಪ್ರದೇಶಕ್ಕೆ ₹ 300 ನಿಗದಿ ಮಾಡಲಾಗಿದೆ. ಇದನ್ನು ಸರ್ಕಾರ ₹ 500ಕ್ಕೆ ಹೆಚ್ಚಿಸಿದೆ.

ಸಾಮಗ್ರಿ ಕಿಟ್‌ ವಿತರಣೆ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದಲ್ಲಿ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀನುಗಾರರಿಗೆ ಮೀನುಗಾರಿಕಾ ಸಾಮಗ್ರಿ ಕಿಟ್‌ ವಿತರಿಸಲಾಗುತ್ತದೆ. ಅದು ಮೀನಿನ ಬಲೆ, ಜೀವರಕ್ಷಕ ಜಾಕೆಟ್ ಹಾಗೂ ತಕ್ಕಡಿ ಹೊಂದಿರುತ್ತದೆ. ಈಗಾಗಲೇ ಪರಿಶಿಷ್ಟ ಜಾತಿಯ 30 ಹಾಗೂ ಪರಿಶಿಷ್ಟ ಪಂಗಡದ 20 ಜನ ಮೀನುಗಾರರಿಗೆ ಕಿಟ್‌ ವಿತರಿಸಲಾಗಿದೆ.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಇದರಡಿ ಮೀನು ಕೊಳ ನಿರ್ಮಾಣಕ್ಕೆ ಒಂದು ಹೆಕ್ಟೇರ್‌ಗೆ ಸಾಮಾನ್ಯ ವರ್ಗದವರಿಗೆ ಶೇ 40 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ 60ರಷ್ಟು ಸಹಾಯಧನ ನೀಡಲಾಗುತ್ತದೆ. ಯೋಜನೆಯಡಿ 2023–24ನೇ ಸಾಲಿನಲ್ಲಿ 35 ಮೀನುಗಾರರು ಕೊಳ ನಿರ್ಮಿಸಿಕೊಂಡಿದ್ದಾರೆ. 24 ಹೆಕ್ಟೇರ್‌ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.

ಮೀನು ಕೊಳ ನಿರ್ಮಿಸಿದ ಬಳಿಕ ಮೀನು ಸಾಕಾಣಿಕೆಗಾಗಿ ಒಂದು ಹೆಕ್ಟೇರ್‌ಗೆ ₹ 4 ಲಕ್ಷದವರೆಗೂ ಹಣ ನೀಡಲಾಗುತ್ತದೆ. ಒಳನಾಡು ಮೀನು ಕೃಷಿ ಪ್ರೋತ್ಸಾಹ ಯೋಜನೆಯಡಿ ಸಹಕಾರ ಸಂಘಗಳು ಗುತ್ತಿಗೆ ಪಡೆದ ಕೆರೆ ಹಾಗೂ ಜಲಾಶಯಗಳಲ್ಲಿ ಒಂದು ಹೆಕ್ಟೇರ್‌ ಪ್ರದೇಶದಲ್ಲಿ 40 ಸಾವಿರ ಮೀನು ಮರಿಗಳನ್ನು ಇಲಾಖೆ ವತಿಯಿಂದ ಉಚಿತವಾಗಿ ಬಿಡಲಾಗುತ್ತದೆ.

’ಸಂಚಾರ ಹಾಗೂ ಚಿಲ್ಲರೆ ಮೀನು ಖಾದ್ಯಗಳ ಕ್ಯಾಂಟೀನ್‌ ತೆಗೆಯಲು ಇಲಾಖೆ ಧನಸಹಾಯ ನೀಡುತ್ತಿದೆ. ಪ್ರಸ್ತುತ ವರ್ಷ 9 ಸಂಚಾರ ಮೀನುಗಾರಿಕಾ ಕ್ಯಾಂಟೀನ್‌ ತೆರೆಯಬೇಕು ಎಂಬ ಪ್ರಸ್ತಾವ ಇದೆ. ಆ ನಿಟ್ಟಿನಲ್ಲಿ ಕೆಲಸಗಳು ಆಗುತ್ತಿವೆ’ ಎಂದು ಮೀನುಗಾರಿಕೆ ಇಲಾಖೆಯ ಕಲಬುರಗಿ ಜಿಲ್ಲಾ ಉಪ ನಿರ್ದೇಶಕ ಎಸ್‌.ಆರ್‌. ನಾಗರಾಜ್‌ ಮಾಹಿತಿ ನೀಡಿದರು.

160 ಮಂದಿಗೆ ಸೂರು ಮಂಜೂರು: ಮತ್ಯ್ಸ ಆಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆಗಳನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ₹ 1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ₹ 1.70 ಲಕ್ಷ ಹಣ ನೀಡಲಾಗುತ್ತದೆ. 2024–25ರಲ್ಲಿ 160 ಫಲಾನುಭವಿಗಳಿಗೆ ಮನೆ ನೀಡಲಾಗಿದೆ. ಆ ಪೈಕಿ ಅಫಜಲಪುರ 15, ಚಿತ್ತಾಪುರ 25, ಜೇವರ್ಗಿ 20 ಹಾಗೂ ಸೇಡಂ ತಾಲ್ಲೂಕಿನ 100 ಮೀನುಗಾರರಿಗೆ ಮನೆಗಳು ಮಂಜೂರಾಗಿವೆ. ಕೆಲವರು ಈಗಾಗಲೇ ಅಡಿಪಾಯ ಹಾಕಿದ್ದಾರೆ. ಇನ್ನೂ ಕೆಲವರ ಮನೆಗಳು ನಿರ್ಮಾಣ ಹಂತದಲ್ಲಿವೆ.

ಮಾರುಕಟ್ಟೆ ಕೊರತೆ: ಜಿಲ್ಲೆಯಲ್ಲಿ ಮೀನು ಮಾರಾಟಕ್ಕೆ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕೆಲ ಮೀನುಗಾರರು ರಸ್ತೆ ಬದಿ ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ವಾಹನ ಮಾಡಿಕೊಂಡು ಗ್ರಾಮಗಳಿಗೆ ತೆರಳಿ ಮಾರಾಟ ಮಾಡುತ್ತಾರೆ. ಕಲಬುರ್ಗಿಯಲ್ಲಿಯೂ ಮೀನು ಮಾರಾಟಕ್ಕೆ ಪ್ರತ್ಯೇಕವಾದ ಮಾರುಕಟ್ಟೆ ಇಲ್ಲ. ಇಲಾಖೆ ವಾಡಿಯಲ್ಲಿ ತಾಜಾ ಮೀನು ಮಾರಾಟ ಮಳಿಗೆ (ಕಿಯೋಸ್ಕ್‌) ಸ್ಥಾಪನೆಗೆ ಯೋಜಿಸಿದೆ. ಈಗಾಗಲೇ ಯೋಜನಾ ವರದಿ ಸಲ್ಲಿಸಲಾಗಿದೆ. ಅದನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಬೇಕಿದೆ. ಅನುದಾನ ಕೊರತೆ ಕಾರಣ ವಿಳಂಬವಾಗುತ್ತಿದೆ.

ಜೇವರ್ಗಿ ತಾಲುಕಿನಲ್ಲಿ ಒಟ್ಟು ಆರು ಕೆರೆಗಳಿವೆ. ಹಾಲಗಡ್ಲಾ, ಕೋಳಕೂರ, ಬುಟ್ನಾಳ, ಅವರಾದ, ಜೇವರಗಿ ಕೆ, ಹೆಗ್ಗನಾಳ ಕೆರೆಗಳ ಸ್ಥಿತಿಗತಿ ಚೆನ್ನಾಗಿವೆ. ಇನ್ನು ಕೆಲವು ಕೆರೆಗಳ ನಿರ್ವಹಣೆ ಸರಿ ಇಲ್ಲ. ಕೆರೆಗಳ ನಿರ್ವಣೆ ವ್ಯವಸ್ಥಿತವಾಗಿಲ್ಲದ ಪರಿಣಾಮ ಮೀನುಗಾರಿಕೆ ನಡೆಯುತ್ತಿಲ್ಲ.

ಹೈದರಾಬಾದ್‌ಗೆ ಮೀನು ಸಾಗಣೆ: ಸಾಮಾನ್ಯವಾಗಿ ಇಲ್ಲಿ ಕಾಟ್ಲಾ, ರೋಹು, ಮೃಗಾಲ್‌, ಸಾಮಾನ್ಯ ಗೆಂಡೆ, ಗೊದಲೆ, ಹಾವು ಮೀನು ಹಾಗೂ ಜಿಲೇಬಿ ಮೀನು ದೊರಕುತ್ತವೆ. ಇವುಗಳನ್ನು ಸ್ಥಳೀಯವಾಗಿ ಮಾರಲಾಗುತ್ತದೆ. ಹೆಚ್ಚಿನ ದರ ಸಿಗುವ ಕಾರಣಕ್ಕೆ ಕೆಲವರು ಸೋಲಾಪುರ ಹಾಗೂ ಹೈದರಾಬಾದ್‌ ಮಾರುಕಟ್ಟೆಗೆ ಮೀನುಗಳನ್ನು ಸಾಗಿಸುತ್ತಾರೆ.

ಜಿಲ್ಲೆಯ ಹರಸೂರು ಜಲಾಶಯದ ಪಕ್ಕದಲ್ಲಿ ಶ್ರೀಸಾಯಿ ರಾಘವೇಂದ್ರ ಮೀನುಮರಿ ಪಾಲನಾ ಕೇಂದ್ರವಿದ್ದು, ಅಲ್ಲಿ ಮೀನುಮರಿಗಳನ್ನು ಸಾಕಲಾಗುತ್ತದೆ. ಶಿವಮೊಗ್ಗದ ಭದ್ರಾ ಹಾಗೂ ಹೊಸಪೇಟೆಯ ತುಂಗಭದ್ರಾ ಜಲಾಶಯಗಳಿಂದ ಮೀನುಮರಿಗಳನ್ನು ತರಲಾಗುತ್ತದೆ.

ಪೂರಕ ವರದಿ: ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾರ, ವೆಂಕಟೇಶ ಹರವಾಳ

ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದಲ್ಲಿ ಮೀನುಗಾರರೊಬ್ಬರು ಮೀನುಗಾರಿಕೆಯಲ್ಲಿ ತೊಡಗಿರುವುದು
ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದಲ್ಲಿ ಮೀನುಗಾರರೊಬ್ಬರು ಮೀನುಗಾರಿಕೆಯಲ್ಲಿ ತೊಡಗಿರುವುದು
ಕಲಬುರಗಿಯ ಬಹಮನಿ ಕೋಟೆಯ ಬಳಿ ಶನಿವಾರ ಸಂತೆಯಲ್ಲಿ ಮಹಿಳೆಯರು ಮೀನು ಮಾರಾಟ ಮಾಡುತ್ತಿರುವುದು
–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಬಹಮನಿ ಕೋಟೆಯ ಬಳಿ ಶನಿವಾರ ಸಂತೆಯಲ್ಲಿ ಮಹಿಳೆಯರು ಮೀನು ಮಾರಾಟ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಮಳೆಗಾಲದಲ್ಲಿ ಕೆರೆಗಳಲ್ಲಿ ನೀರು ತುಂಬಿಕೊಂಡಾಗ ಮೀನುಗಾರಿಕೆ ಮಾಡಲು ಸರ್ಕಾರ ಸಹಾಯ ಮಾಡಬೇಕು. ಅದರ ಬಗ್ಗೆ ತರಬೇತಿ ರೈತರಿಗೆ ನೀಡಬೇಕು
ಸಿದ್ದು ಧಣ್ಣೂರು ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ
ಜಯಲಕ್ಷ್ಮಿ ಮೀನುಗಾರರ ಸಹಕಾರ ಸಂಘದಲ್ಲಿ 91 ಜನ ಸದಸ್ಯರಿದ್ದೇವೆ. ನಮಗೆ ಮೀನುಗಾರಿಕೆ ಬಿಟ್ಟರೆ ಬೇರೆ ಉದ್ಯೋಗ ಬರುವುದಿಲ್ಲ. ನಾಗರಾಳ ಜಲಾಶಯ ನಮ್ಮ ಕುಟುಂಬಗಳಿಗೆ ಆಧಾರವಾಗಿದೆ
ಈಶ್ವರ್ ನರನಾಳ ಅಧ್ಯಕ್ಷರು ಜಯಲಕ್ಷ್ಮಿ ಮೀನುಗಾರರ ಸಹಕಾರ ಸಂಘ
ಕೆರೆಗಳಲ್ಲಿನ ಹೂಳು ತೆಗೆಯದಿರುವುದೇ ಸಮಸ್ಯೆ
ಅಫಜಲಪುರ ತಾಲೂಕಿನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಮತ್ತು ಸಣ್ಣ ನೀರಾವರಿ ಇಲಾಖೆ ಮುಖಾಂತರ ಕೆರೆ ನಿರ್ಮಾಣ ಮಾಡಲಾಗಿದೆ. ಕರಜಗಿ ಆತನೂರು ಅಫಜಲಪುರ ಸಂಪರ್ಕ ಕೇಂದ್ರಗಳಲ್ಲಿಯೂ ಕೆರೆಗಳಿದ್ದು ಅದರಲ್ಲಿ ಗೊಬ್ಬೂರು (ಕೆ) ಕೆರೆಯಲ್ಲಿ ಮಾತ್ರ ನಿರಂತರವಾಗಿ ನೀರು ಸಂಗ್ರಹವಾಗುತ್ತದೆ. ಉಳಿದ ಕೆರೆಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಇದರಿಂದ ಮೀನುಗಾರಿಕೆ ಮಾಡುವುದು ಕಷ್ಟವಾಗುತ್ತಿದೆ. ತಾಲ್ಲೂಕಿನ ಬಡದಾಳ ಬಳೂರ್ಗಿ ನಿಲೂರ ರೇವೂರ (ಬಿ) ಮಾಶಾಳ ಮಣ್ಣೂರ ಬಿದನೂರ ನಂದರಗಾದಲ್ಲಿ ಕಳೆದ ಎಂಟು ವರ್ಷದಲ್ಲಿ ತಾಲ್ಲೂಕಿನಲ್ಲಿ 9 ಕೆರೆಗಳನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಯ ಅಡಿ ಹೂಳೆತ್ತುವ ಕೆಲಸ ಮಾಡಲಾಗುತ್ತಿದೆ. ‘ಕೆರೆಗಳ ಅಭಿವೃದ್ಧಿ ಮಾಡುವುದರಿಂದ ಮಳೆಗಾಲದಲ್ಲಿ ನೀರು ನಿಲ್ಲುವಂತಾಗಿದೆ. ಮಂದಿನ ವರ್ಷ ಬಡದಾಳ ಗ್ರಾಮದಲ್ಲಿ ಇನ್ನೊಂದು ಕೆರೆ ಹೂಳೆತ್ತುವ ಯೋಜನೆ ಹಾಕಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 35 ಕೆರೆ ಹೂಳೆತ್ತುವ ಕೆಲಸ ಮಾಡಲಾಗುವುದು’ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಅಧಿಕಾರಿ ಶಿವಾರಾಜ ಅಚಾರ್ಯ. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಾಂತಪ್ಪ ಜಾಧವ್ ಮಾತನಾಡಿ ಸಣ್ಣ ನೀರಾವರಿ ಇಲಾಖೆ ಮುಖಾಂತರ ತಾಲೂಕಿನಲ್ಲಿ ಗೊಬ್ಬೂರು (ಕೆ) ಗ್ರಾಮದ ಕೆರೆಯಲ್ಲಿ ಮಾತ್ರ 12 ತಿಂಗಳು ನೀರು ಸಂಗ್ರವಿರುತ್ತದೆ. ಉಳಿದ ಕೆರೆಗಳು ನೀರು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಉಡಚಣ ಗ್ರಾಮದಲ್ಲಿ ಮಾತ್ರ ನದಿಯಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ನಿರಂತರವಾಗಿ ನೀರು ಸಂಗ್ರವಾದರೆ ಮೀನುಗಾರಿಕೆ ಮಾಡಲು ಅನುಕೂಲವಾಗುತ್ತದೆ’ ಎಂದು ಹೇಳುತ್ತಾರೆ.
14 ಕೆರೆಗಳಲ್ಲಿ ಮೀನುಗಾರಿಕೆ
ಚಿಂಚೋಳಿ: ಅರೆಮಲೆನಾಡು ಪ್ರದೇಶದಲ್ಲಿ ಬರುವ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶಗಳಿವೆ. ತಾಲ್ಲೂಕಿನಲ್ಲಿ ಬೃಹತ್ ನೀರಾವರಿ ಯೋಜನೆಯ ಎರಡು ಜಲಾಶಯಗಳು ಮತ್ತು 14 ಸಣ್ಣ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. ನಾಗರಾಳ ಜಲಾಶಯದಲ್ಲಿ ಮೀನುಗಾರಿಕೆ ನಡೆಸಲು ನರನಾಳ ಗ್ರಾಮದ ಜಯಲಕ್ಷ್ಮಿ ಸಹಕಾರ ಸಂಘಕ್ಕೆ ಸಣ್ಣ ನೀರಾವರಿ ಇಲಾಖೆಯ ಚಂದನಕೇರಾ ಮತ್ತು ಹುಲ್ಸಗೂಡ ಕೆರೆಯ ಮೀನುಗಾರಿಕೆ ಬೆಡಸೂರಿನ ಮೀನುಗಾರರ ಸಂಘಕ್ಕೆ ನೇರಗುತ್ತಿಗೆ ನೀಡಲಾಗಿದೆ. ಚಂದ್ರಂಪಳ್ಳಿ ಜಲಾಶಯ ಹಾಗೂ ಇನ್ನಿತರ ಸಣ್ಣ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆಗೆ ಟೆಂಡರ್ ಕರೆದು ಗುತ್ತಿಗೆ ನೀಡುವ ಪದ್ಧತಿ ಜಾರಿಯಲ್ಲಿದೆ. ಮೀನುಗಾರಿಕೆಯಿಂದ ಸರ್ಕಾರಕ್ಕೆ ₹ 31 ಲಕ್ಷ ರೂಪಾಯ ವಾರ್ಷಿಕ ವರಮಾನ ಬರುತ್ತಿದೆ. ಕೋಡ್ಲಿ ಬಳಿಯ ಅಲ್ಲಾಪುರ ಕೆರೆಯ ಮೀನುಗಾರಿಕೆಗೆ ಹೆಚ್ಚಿನ ಬೇಡಿಕೆ ಇದೆ. ಈ ಒಂದೇ ಕೆರೆಯಿಂದ ವಾರ್ಷಿಕ ₹ 5 ಲಕ್ಷ ವರಮಾನ ಹರಿದು ಬರುತ್ತಿದೆ. ಬೃಹತ್ ನೀರಾವರಿ ಯೋಜನೆಯ ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯದ ಮೀನುಗಾರಿಕೆಯ ಟೆಂಡರ್ ಮೊತ್ತ ಕಡಿಮೆಯಿದೆ.
ಇಲಾಖೆ ವ್ಯಾಪ್ತಿಯ ಪ್ರಮುಖ ಕೆರೆಗಳು
ಶರಣಬಸವೇಶ್ವರ ಕೆರೆ ಹಾಗರಗುಂಡಗಿ ಕೆರೆ ಭೈರಾಮಡಗಿ ಕೆರೆ ಕೋಡ್ಲಿ ಅಲ್ಲಾಪುರ ಕೆರೆ ಅಲಿಪುರ ಕೆರೆ ಓಕಳಿ ಕೆರೆ ನವನಿಹಾಳ ಕೆರೆ ಗೊಬ್ಬೂರು ಕೆರೆ ಖಾಜಾ ಕೋಟನೂರು ಕೆರೆ ವೈಜಾಪುರ ಕೆರೆ ** ಜಲಾಶಯಗಳು ಬೆಣ್ಣೆತೊರಾ ಜಲಾಶಯ ಗಂಡೋರಿ ಜಲಾಶಯ ಅಮರ್ಜಾ ಜಲಾಶಯ ಸೊನ್ನ ಭೀಮಾ ಬ್ಯಾರೇಜ್ ಚಂದ್ರಂಪಳ್ಳಿ ಜಲಾಶಯ ನಾಗರಾಳ ಜಲಾಶಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT