ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕ್ರಮ: ಈಶ್ವರ ಖಂಡ್ರೆ

ರಾಜ್ಯ ಮಟ್ಟದ ಅರಣ್ಯ ಇಲಾಖೆ ಕ್ರೀಡಾಕೂಟಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ
Published 4 ಜನವರಿ 2024, 16:04 IST
Last Updated 4 ಜನವರಿ 2024, 16:04 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅರಣ್ಯ ಇಲಾಖೆಯಿಂದ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾನದಂಡದ ಪ್ರಕಾರ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕು. ರಾಜ್ಯದಲ್ಲಿ ಶೇ 22ರಷ್ಟು ಇದ್ದರೆ, ಕಲ್ಯಾಣ ಕರ್ನಾಟಕದಲ್ಲಿ ಕೇವಲ ಶೇ 5ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದಾಗ ಈ ಭಾಗದಲ್ಲಿನ ಅರಣ್ಯ ಕ್ಷೇತ್ರವನ್ನು ರಾಜ್ಯದ ಸರಾಸರಿಗಾದರೂ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಕಾರ್ಯನಿರತರಾಗಿದ್ದೇವೆ’ ಎಂದರು.

‘ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಹೆಚ್ಚಿನ ಸಸಿಗಳನ್ನು ನೆಡಲಾಗಿದೆ. ಮುಂದಿನ ವರ್ಷ ಈ ಸಂಖ್ಯೆಯನ್ನು ಇನ್ನೂ ಹೆಚ್ಚು ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಅರಣ್ಯ ಸಂಪತ್ತನ್ನು ವೃದ್ಧಿಸುವುದು ಇಲಾಖೆ ಜವಾಬ್ದಾರಿ. ಕಾಡಿದ್ದರೆ ಮಾತ್ರ ನಾಡು ಇರುತ್ತದೆ. ಹಸಿರೇ ಉಸಿರಾಗಿದೆ. ಪರಿಸರ ಉಳಿದರೆ ನಾವೆಲ್ಲ ಉಳಿಯುತ್ತೇವೆ. ಹಾಗಾಗಿ, ವನ್ಯಜೀವಿಗಳು, ಮರಗಳನ್ನು ಸಂರಕ್ಷಣೆ ಮಾಡುವುದು, ಈ ಪ್ರಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ನಮ್ಮ–ನಿಮ್ಮೆಲ್ಲರ ಜವಾಬ್ದಾರಿ ಆಗಿದೆ’ ಎಂದು ಹೇಳಿದರು.

‘ಅರಣ್ಯ ಸಿಬ್ಬಂದಿ ಶಾರೀರಿಕವಾಗಿಯೂ ಸದೃಢವಾಗಿರಲು ಈ ಕ್ರೀಡಾಕೂಟ ಆಯೋಜಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ನಡೆದ 26 ಕ್ರೀಡಾಕೂಟಗಳಲ್ಲಿ ಕರ್ನಾಟಕ 8 ಸಲ ಪ್ರಥಮ ಸ್ಥಾನ ಪಡೆದಿದೆ’ ಎಂದು ತಿಳಿಸಿದರು.

‘ಕ್ರೀಡೆಗೆ ಉತ್ತೇಜನ ನೀಡುವ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತರಿದ್ದಾರೆ. ಅವರಿಗೆ ಶಾಲಾ–ಕಾಲೇಜು, ವೃತ್ತಿಪರ ಕೋರ್ಸ್‌ಗಳಲ್ಲಿ ಓದುವಾಗ ಅವಕಾಶ ಕೊಡಬೇಕು. ನಮ್ಮ ದೇಶದ ಯುವಶಕ್ತಿ ಅಣುಶಕ್ತಿ ಇದ್ದ ಹಾಗೆ. ಯುವ ಸಮುದಾಯ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಲು ಕ್ರೀಡಾಕೂಟಗಳು ಅವಶ್ಯಕ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಕಾಯಿಲೆಗಳಿಂದಲೂ ದೂರ ಇರಬಹುದು’ ಎಂದರು.

ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ್‌ ಜಿ.ನಮೋಶಿ, ಕಲಬುರಗಿ– ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಪರಿಸರ ಮಂಡಳಿ ಸದಸ್ಯ ಶರಣು ಮೋದಿ, ಕರ್ನಾಟಕ ಅರಣ್ಯ ಕ್ರೀಡಾ ಮಂಡಳಿ ಸೊಸೈಟಿ ಅಧ್ಯಕ್ಷ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥ) ಬ್ರಿಜೇಶ್‌ ಕುಮಾರ ದೀಕ್ಷಿತ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವಜ್ಯಜೀವಿ) ಸುಭಾಷ್‌ ಕೆ. ಮಾಲ್ಖಡೆ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್, ಪ್ರಧಾನ ಕಾರ್ಯದರ್ಶಿ (ಅರಣ್ಯ) ಸಂಜಯ್ ಎಸ್.ಬಿಜ್ಜೂರ್, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪಂವಾರ್‌ ಪಾಲ್ಗೊಂಡಿದ್ದರು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಬಲೂನ್‌ಗಳು ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಬಲೂನ್‌ಗಳು ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 

ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಕಮಿಷನರ್‌ ಚೇತನ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ, ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಡೆಕ್ಕಾ ಕಿಶೋರ ಬಾಬು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಹಾಜರಿದ್ದರು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಪುರಷರ ವಿಭಾಗದ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು        –ಪ್ರಜಾವಾಣಿ ಚಿತ್ರ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಪುರಷರ ವಿಭಾಗದ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು        –ಪ್ರಜಾವಾಣಿ ಚಿತ್ರ

ಅಂತರರಾಷ್ಟ್ರೀಯ ವಾಲಿಬಾಲ್‌ ಕ್ರೀಡಾಪಟು ಪ್ರಜ್ವಲ್‌ ಗೌಡ ಅವರಿಂದ ಸಚಿವರು ಕ್ರೀಡಾಜ್ಯೋತಿ ಸ್ವೀಕರಿಸಿ, ಕ್ರೀಡಾಕೂಟದ ಲಾಂಛನ ಬಿಡುಗಡೆ ಮಾಡಿದರು. ರಮೇಶ ಹಾಲಕೇರಿ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ನಂತರ 100 ಮೀಟರ್‌ ಓಟದ ಸ್ಪರ್ಧೆಗೆ ಸಚಿವರು ಚಾಲನೆ ನೀಡಿದರು.

ಸುನೀಲ್‌ಕುಮಾರ್‌ ಚವಾಣ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ಬೀದರ್‌ ಡಿಸಿಎಫ್‌ ಎ.ಬಿ.ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಅಣಜಗಿ ಮತ್ತು ಆರ್.ಜೆ. ವಾಣಿ ನಿರೂಪಿಸಿದರು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು  –ಪ್ರಜಾವಾಣಿ ಚಿತ್ರ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು  –ಪ್ರಜಾವಾಣಿ ಚಿತ್ರ

ಅರಣ್ಯ ಒತ್ತುವರಿ ತಡೆಗೆ ಸೂಚನೆ

‘ನಾಗರಿಕತೆ ಬೆಳೆದಂತೆ ಅರಣ್ಯ ಒತ್ತುವರಿ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಅರಣ್ಯ ಪ್ರದೇಶದ ಭೂಮಿಗೆ ಕಾಂಪೌಂಡ್‌ ಹಾಕಲು ಆಗುವುದಿಲ್ಲ. ಅಷ್ಟು ಅನುದಾನ ಸಿಗುವುದಿಲ್ಲ. ಹಾಗಾಗಿ ಇಲಾಖೆ ಅಧಿಕಾರಿಗಳು ಒತ್ತುವರಿ ಕಂಡುಬಂದರೆ ತಕ್ಷಣ ಕಾರ್ಯಪ್ರವೃತ್ತರಾಗಿ ತಡೆಯಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ‘ರಾಜ್ಯದಲ್ಲಿ ಮಾನವ– ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ. ಇದರಲ್ಲಿ ಕಳೆದ ಸಾಲಿನಲ್ಲಿ 51 ಜನ ಮೃತಪಟ್ಟರೆ ಪ್ರಸಕ್ತ ಸಾಲಿನಲ್ಲಿ 41 ಜನ ಸಾವನ್ನಪ್ಪಿದ್ದಾರೆ’ ಎಂದು ತಿಳಿಸಿದರು. ಮೊದಲ ಬಾರಿಗೆ ಆಯೋಜನೆ: ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟವು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಕರ್ನಾಟಕದ ಎಲ್ಲ 13 ವೃತ್ತಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 1234 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಅಥ್ಲೆಟಿಕ್ಸ್ ಒಳಾಂಗಣ–ಹೊರಾಂಗಣ ಹಾಗೂ ಇತರೆ ಕ್ರೀಡೆಗಳು ಸೇರಿ 271 ಸ್ಪರ್ಧೆಗಳು ನಡೆಯಲಿವೆ.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದ ಮಹಿಳೆಯರ ವಿಭಾಗದಲ್ಲಿ ನಿವೆತಾ ಟಿ. ಅವರು ಗುಂಡು ಎಸೆತದ ಪರಿ –ಪ್ರಜಾವಾಣಿ ಚಿತ್ರ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದ ಮಹಿಳೆಯರ ವಿಭಾಗದಲ್ಲಿ ನಿವೆತಾ ಟಿ. ಅವರು ಗುಂಡು ಎಸೆತದ ಪರಿ –ಪ್ರಜಾವಾಣಿ ಚಿತ್ರ

ಪ್ರಥಮ ಸ್ಥಾನದಲ್ಲಿ ಕೆನರಾ ವೃತ್ತ

ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಮೊದಲ ದಿನದ ಅಂತ್ಯಕ್ಕೆ ಕೆನರಾ ವೃತ್ತ 2 ಚಿನ್ನ 3 ಬೆಳ್ಳಿ ಹಾಗೂ 1 ಕಂಚಿನ ಪದಕ ಗಳಿಸಿ 21 ಪಾಯಿಂಟ್‌ಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಬೆಳಗಾವಿ ವೃತ್ತ 2(+1 ಕ್ರೀಡಾ ಕೋಟಾ) ಚಿನ್ನ 1 ಬೆಳ್ಳಿ ಹಾಗೂ 1 ಕಂಚಿನ ಪದಕ ಗಳಿಸಿದ್ದು 15 ಪಾಯಿಂಟ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಶಿವಮೊಗ್ಗ ವೃತ್ತ 2 ಚಿನ್ನ 2 ಕಂಚು ಗಳಿಸಿದ್ದು 14 ಪಾಯಿಂಟ್‌ಗಳೊಂದಿಗೆ ತೃತೀಯ ಸ್ಥಾನದಲ್ಲಿದೆ. ವಿವಿಧ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದವರ ಫಲಿತಾಂಶದ ವಿವರ ಇಲ್ಲಿದೆ. ಪುರುಷರ ವಿಭಾಗದ ಈಜು: 100 ಮೀ. ಬಟರ್‌ಫ್ಲೈ ಮತ್ತು 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಮಂಜುನಾಥ ಗೌಡ (ಬೆಳಗಾವಿ ವೃತ್ತ). 200 ಮೀ. ಮೆಡ್ಲೆ: ಪ್ರಕಾಶ ಕಂಕನವಾಡಿ (ಧಾರವಾಡ ವೃತ್ತ). 100 ಮೀ. ಬ್ಯಾಕ್‌ಸ್ಟ್ರೋಕ್‌: ಸಚಿನ್‌ ಪಾಟೀಲ (ಕೆನರಾ ವೃತ್ತ). 100 ಮೀ. ಫ್ರೀ ಸ್ಟೈಲ್‌: ಅನುದೀಪ ಎಸ್‌. (ಮೈಸೂರು ವೃತ್ತ). ಹೈಜಂಪ್‌(ಸೀನಿಯರ್‌ ವೆಟರನ್‌ ವಿಭಾಗ): ದಿವಾಕರ್‌ ಟಿ. (ಶಿವಮೊಗ್ಗ ವೃತ್ತ). ಹೈಜಂಪ್‌(ವೆಟರನ್‌): ದಿವಾಕರ್‌ ನಾಯ್ಕ್‌ (ಕೆನರಾ ವೃತ್ತ). ಹೈಜಂಪ್‌(ಓಪನ್‌): ಸಚಿನ್‌ ಕೆ.ಟಿ ಮತ್ತು ಕ್ರೀಡಾ ಕೋಟಾದಲ್ಲಿ ಸತ್ಯನಾರಾಯಣ ವಿ.(ಶಿವಮೊಗ್ಗ ವೃತ್ತ). ಮಹಿಳಾ ವಿಭಾಗದ ಹೈಜಂಪ್‌(ಓಪನ್‌): ವಿನುತಾ ನಾಯ್ಕ್‌ (ಹಾಸನ ವೃತ್ತ). ಪಥ ಸಂಚಲನದಲ್ಲಿ ಬಳ್ಳಾರಿ ವೃತ್ತ ಪ್ರಥಮ ಮಂಗಳೂರು ಮತ್ತು ಬೆಂಗಳೂರು ವೃತ್ತಗಳು ದ್ವಿತೀಯ ಸ್ಥಾನ ಹಂಚಿಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT