ಶುಕ್ರವಾರ, ನವೆಂಬರ್ 27, 2020
19 °C
ಮಣ್ಣಲ್ಲಿ ಮರೆಯಾದ ಮಾನ್ಪಡೆ; ಅಂಬಲಗಾದಲ್ಲಿ ಅಂತ್ಯಕ್ರಿಯೆ

ಹೋರಾಟಗಾರ ಮಾರುತಿ ಮಾನ್ಪಡೆಗೆ ಹೂ ಮಳೆಯ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ, ಹೋರಾಟಗಾರ ಮಾರುತಿ ಮಾನ್ಪಡೆಯವರ ಅಂತ್ಯಕ್ರಿಯೆ ತಾಲ್ಲೂಕಿನ ಅಂಬಲಗಾ ಗ್ರಾಮದಲ್ಲಿ ಬುಧವಾರ ನೆರವೇರಿತು. ಕೋವಿಡ್‌ ಸಂಬಂಧಿಸಿದಂತೆ ಸರ್ಕಾರ ಸೂಚಿಸಿರುವ ನಿಯಮಾವಳಿಗಳ ಅನುಸಾರ ಅಂತ್ಯಕ್ರಿಯೆ ಮಾಡಲಾಯಿತು.

ಕೋವಿಡ್‌ನಿಂದ ಮೃತಪಟ್ಟಿರುವ ಕಾರಣ ಮಾನ್ಪಡೆಯವರ ಪಾರ್ಥಿವ ಶರೀರವನ್ನು ಹಸ್ತಾಂತರಿಸಲು ಮಹಾರಾಷ್ಟ್ರ ಸರ್ಕಾರವು ನಿರಾಕರಿಸಿತು. ಆದರೆ, ಅವರ ಅಂತ್ಯಕ್ರಿಯೆಯೂ ಅಂಬಲಗಾದಲ್ಲೇ ನಡೆಯಬೇಕೆಂದು ಸಿಪಿಎಂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟ್ಟು ಹಿಡಿದರು. ಮಹಾರಾಷ್ಟ್ರದ ಸಿಪಿಎಂ ನಾಯಕರು ಅಲ್ಲಿನ ಸರ್ಕಾರಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು.

ಕಮಲಾಪುರ ತಹಶೀಲ್ದಾರ್‌ ಅವರ ಒಪ್ಪಿಗೆ ಪತ್ರ ದೊರೆತ ನಂತರವಷ್ಟೇ ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಯವರು ಮಾನ್ಪಡೆಯವರ ಪಾರ್ಥಿವ ಶರೀರ ಹಸ್ತಾಂತರಿಸಿದರು. ಬುಧವಾರ ಬೆಳಿಗ್ಗೆ 8ಕ್ಕೆ ಸೊಲ್ಲಾಪುರದಿಂದ ಹೊರಟ ಆಂಬುಲೆನ್ಸ್‌ ಅಂಬಲಗಾ ಗ್ರಾಮ 11.30ಕ್ಕೆ ತಲುಪಿತು.  ಅಂತ್ಯಕ್ರಿಯೆ ಸ್ಥಳದಲ್ಲಿ ಪಿಪಿಇ ಕಿಟ್ ಧರಿಸಿದ 20 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಬಸವರಾಜ, ಜಿಲ್ಲಾ ಘಟಕದ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಅವರು ಪಕ್ಷದ ಧ್ವಜ ಹೊದಿಸಿ ಅಂತಿಮ ವಿದಾಯ ಹೇಳಿದರು.

ದಾರಿಯುದ್ದಕ್ಕೂ ಗ್ರಾಮದ ಜನರು ಆಂಬುಲೆನ್ಸ್‌ಗೆ ಹೂಮಳೆಗೆರೆದರು. ಆಳಂದ, ಮುನ್ನಳ್ಳಿ, ತಡಕಲ್, ಬೆಳಮಗಿ, ವಿ.ಕೆ.ಸಲಗರ, ಮುಗಳಿ  ಮುಂತಾದ ಗ್ರಾಮಗಳ ಜನರು ಕಣ್ಣೀರು ಸುರಿಸಿದರು.

ಶಾಸಕ ಬಸವರಾಜ ಮತ್ತಿಮೂಡ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ಆರ್, ಶಾಮರಾವ ಸೂರ್ಯನ್, ಗುರುಶಾಂತಪ್ಪ ಪಟ್ಟೇದಾರ, ಭೀಮಾಶಂಕರ ಮಾಡಿಯಾಳ, ಶೌಕತ ಅಲಿ ಆಲೂರ, ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮೀ, ಗ್ರಾ.ಪಂ ನೌಕರರ ಸಂಘದ ಖಜಾಂಚಿ ಆರ್.ಎಸ್. ಬಸವರಾಜ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು