ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದಿಂದ ಬೇರ್ಪಟ್ಟು ಅಸ್ಸಾಂನಲ್ಲಿದ್ದ ರಾಜ್ಯದ ಬಾಲಕನ ಪತ್ತೆಗೆ ನೆರವಾದ ಆಧಾರ್‌

ಕಾಣೆಯಾಗಿದ್ದ ಬಾಲಕ ಯಲ್ಲಾಲಿಂಗ ಅಸ್ಸಾಂನಿಂದ ಮರಳಿ ತಾಯಿಯ ಮಡಿಲಿಗೆ
Last Updated 4 ಫೆಬ್ರುವರಿ 2022, 11:29 IST
ಅಕ್ಷರ ಗಾತ್ರ

ಗುವಾಹಟಿ: ಕುಟುಂಬದಿಂದ ಬೇರ್ಪಟ್ಟು ನಾಲ್ಕು ವರ್ಷಗಳ ಕಾಲ ದೂರದ ಅಸ್ಸಾಂನ ರಾಜಧಾನಿ ಗುವಾಹಟಿಯ ಸರ್ಕಾರಿ ಸ್ವಾಮ್ಯದ ಮತ್ತು ಎನ್‌ಜಿಒದ ಮಕ್ಕಳ ಆಶ್ರಯ ತಾಣದಲ್ಲಿದ್ದ ಕಲಬುರಗಿ ಬಳಿಯ ಚಿತ್ತಾಪುರದ 14 ವರ್ಷದ ಬುದ್ಧಿಮಾಂದ್ಯ ಬಾಲಕ ಯಲ್ಲಾಲಿಂಗ, ಮತ್ತೆ ತಾಯಿಯ ಮಡಿಲು ಸೇರಲು ಆಧಾರ್‌ ಸಂಖ್ಯೆ ನೆರವಿಗೆ ಬಂದಿರುವ ಅಪರೂಪದ ಘಟನೆ ಇಲ್ಲಿ ನಡೆದಿದೆ.

2018ರ ಆಗಸ್ಟ್‌ನಲ್ಲಿ ತಾಯಿ ಲಕ್ಷ್ಮಿಯೊಂದಿಗೆ ಪಡಿತರ ಅಂಗಡಿಗೆ ತೆರಳಿದ್ದ ಯ‌ಲ್ಲಾಲಿಂಗ, ತಾಯಿ ಧಾನ್ಯ ಖರೀದಿಸಿ ಹಿಂತಿರುಗಿ ನೋಡುವಷ್ಟರಲ್ಲಿ ಕಾಣೆಯಾಗಿದ್ದ. ಪಾಲಕರು ಆತನಿಗಾಗಿ ಹುಡುಕಾಡಿದರೂ ಸಿಗದೆ ಪ್ರಯತ್ನ ಕೈಬಿಟ್ಟಿದ್ದರು. ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ಅದರಿಂದಲೂ ಯಾವುದೇ ಫಲ ಸಿಕ್ಕಿರಲಿಲ್ಲ.

ತಾಯಿಯಿಂದ ಬೇರ್ಪಟ್ಟಿದ್ದ ಯಲ್ಲಾಲಿಂಗನು ಆಕಸ್ಮಿಕವಾಗಿ ರೈಲು ಹತ್ತಿ 3,000 ಕಿ. ಮೀ ದೂರದಲ್ಲಿನ ಅಸ್ಸಾಂನ ಕಾಮರೂಪ ಜಿಲ್ಲೆ ತಲುಪಿದ್ದ. ಸ್ಥಳೀಯ ಪೊಲೀಸ್‌ ಪೇದೆಯೊಬ್ಬರು ಆತನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು. ಬುದ್ಧಿಮಾಂದ್ಯತೆ ಮತ್ತು ಭಾಷೆಯ ತೊಡಕಿನಿಂದ ಬಾಲಕನ ಪೂರ್ವಾಪರ ತಿಳಿದುಕೊಳ್ಳಲು ಪೊಲೀಸರು ಮತ್ತು ಸಮಿತಿಯ ಸದಸ್ಯರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆತನನ್ನು ಗುವಾಹಟಿಯ ಸರ್ಕಾರಿ ಸ್ವಾಮ್ಯದ ಬಾಲ ಮಂದಿರದ ಆಶ್ರಯಕ್ಕೆ ಒಪ್ಪಿಸಲಾಗಿತ್ತು.

ಆನಂತರ ಆತನನ್ನು ಗುವಾಹಟಿಯ ಕಹಿಲ್‌ಪಾರಾದಲ್ಲಿ ಇರುವ ಸರ್ಕಾರಿಯೇತರ ಸ್ವಯಂ ಸೇವಾ ಸಂಘಟನೆ ‘ಡೆಸ್ಟಿನೇಷನ್‌‘ ನಡೆಸುವ ವಿಶೇಷ ಮಕ್ಕಳಿಗಾಗಿಯೇ ಇರುವ ರಿಷಿ ಹಜಾರಿಕಾ ಸ್ಮಾರಕ ಮಂದಿರಕ್ಕೆ ಸೇರಿಸಲಾಗಿತ್ತು. ಯಲ್ಲಾಲಿಂಗನನ್ನು ಕಾಡುತ್ತಿದ್ದ ಮೂರ್ಛೆರೋಗಕ್ಕೆ ಅಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು.

‘ಕ್ರಮೇಣ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಾರಂಭಿಸಿತ್ತು. ಇತರ ಮಕ್ಕಳೊಂದಿಗೆ ಬೆರೆಯಲು ಆರಂಭಿಸಿದ್ದ. ಆದರೆ ಭಾಷಾ ತೊಡಕು, ಮಾನಸಿಕ ಅಸ್ವಸ್ಥತೆ ಕಾರಣಕ್ಕೆ ಆತನ ಕುಟುಂಬ, ಊರು ಮತ್ತಿತರ ವಿವರಗಳನ್ನು ಪಡೆಯಲು ನಮ್ಮಿಂದ ಸಾಧ್ಯವಾಗಿರಲಿಲ್ಲ‘ ಎಂದು ಮಂದಿರದ ಸೂಪರಿಂಟೆಂಡೆಂಟ್‌ ಚುಮ್ಕಿ ಬೋರಾ ಅವರು ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಯಲ್ಲಾಲಿಂಗನನ್ನು ಆತನ ಹೆತ್ತವರ ಮಡಿಲಿಗೆ ಮರಳಿಸಲು ವಿಳಾಸ ತಿಳಿದುಕೊಳ್ಳಲು ಎನ್‌ಜಿಒ ಸಿಬ್ಬಂದಿ ಹೆಣಗಾಡಿದ್ದರೂ ಅವರಿಗೆ ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿಯೂ ಆಧಾರವಾಗುತ್ತದೆ ಎಂಬಂತೆ, ಆಧಾರ್‌ಗೆ ದಾಖಲಿಸುವ ಪ್ರಯತ್ನದಲ್ಲಿ ಆತನ ವಿಳಾಸ ಪವಾಡ ಎಂಬಂತೆ ಪತ್ತೆಯಾಗಿ ಬಾಲಕನ ನಾಪತ್ತೆ ಪ್ರಕರಣವೊಂದು ಕೊನೆಗೂ ಸುಖಾಂತ್ಯದಲ್ಲಿ ಮುಕ್ತಾಯಗೊಂಡಿದೆ.

‘2020ರ ಫೆಬ್ರುವರಿಯಲ್ಲಿ ಬಾಲ ಮಂದಿರದ ಎಲ್ಲ ಮಕ್ಕಳ ಜೊತೆ ಯಲ್ಲಾಲಿಂಗನನ್ನೂ ಆಧಾರ್‌ ನೋಂದಣಿಗಾಗಿ ಕರೆದೊಯ್ದು, ಆತನ ಬಯೊಮೆಟ್ರಿಕ್‌ ವಿವರಗಳನ್ನು ಸಲ್ಲಿಸಲಾಗಿತ್ತು. ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಈ ಪ್ರಯತ್ನ ಅರ್ಧಕ್ಕೆ ಮೊಟಕುಗೊಂಡಿತ್ತು. ಇದೇ ವರ್ಷದ ಜನವರಿಯಲ್ಲಿ ಆಧಾರ್‌ ಕಾರ್ಡ್‌ ಸಂಗ್ರಹಿಸಲು ಹೋದಾಗ, ಯಲ್ಲಾಲಿಂಗನ ಜೈವಿಕ ಮಾಹಿತಿಯು ಈ ಮೊದಲೇ ದಾಖಲಾಗಿರುವುದು ಬೆಳಕಿಗೆ ಬಂದಿತ್ತು. ಆನಂತರ ವಿಶೇಷ ಪ್ರಯತ್ನ ನಡೆಸಿ ಯಲ್ಲಾಲಿಂಗ ಸೇರಿದಂತೆ ಮೂವರು ಮಕ್ಕಳ ಆಧಾರ್‌ ವಿವರಗಳನ್ನು ಪಡೆದುಕೊಳ್ಳುವಲ್ಲಿ ಸಿಬ್ಬಂದಿ ಸಫಲಗೊಂಡಿದ್ದರು‘ ಎಂದು ಬೋರಾ ಹೇಳಿದ್ದಾರೆ.

ಈ ವರ್ಷದ ಜನವರಿ 28 ರಂದು, ಬೋರಾ ಅವರು ಮೂರು-ನಾಲ್ಕು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಕೊನೆಗೆ ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿದರು. ಈ ಪ್ರಯತ್ನ ಕೊನೆಗೂ ಫಲ ನೀಡಿತು. ಮುಂದಿನ 24 ಗಂಟೆಗಳಲ್ಲಿ ಯಲ್ಲಾಲಿಂಗನ ಕುಟುಂಬವನ್ನು ಸಂಪರ್ಕಿಸಲಾಯಿತು.

‘ಜನವರಿ 31 ರಂದು, ಯಲ್ಲಾಲಿಂಗನ ತಾಯಿ ಸಂಬಂಧಿಕರ ಜೊತೆ ಗುವಾಹಟಿ ತಲುಪಿದರು. ಹೆತ್ತಮ್ಮಳನ್ನು ಕಾಣುತ್ತಿದ್ದಂತೆ ಯಲ್ಲಾಲಿಂಗ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿ ತಾಯಿ ಅಪ್ಪಿಕೊಂಡಿದ್ದ. ನಾಲ್ಕು ವರ್ಷಗಳ ನಂತರ ಯಲ್ಲಾಲಿಂಗ ಮತ್ತೆ ತಾಯಿ ಮಡಿಲು ಸೇರಿದ ಅಪರೂಪದ ಕ್ಷಣ ಅದಾಗಿತ್ತು. ಅವಿರತ ಪ್ರಯತ್ನ ಕೈಗೂಡಿದ್ದಕ್ಕೆ ಮತ್ತು ಆಧಾರ್‌ ಸಂಖ್ಯೆಯು ಬಾಲಕನನ್ನು ದೂರದ ಕರ್ನಾಟಕದಲ್ಲಿನ ಕುಟುಂಬಕ್ಕೆ ಮರಳಿಸಲು ನೆರವಾಗಿದ್ದಕ್ಕೆ ಬಾಲಮಂದಿರದ ಸಿಬ್ಬಂದಿ ಹರ್ಷಪಟ್ಟಿದ್ದರು.

‘ಇದು ನಮಗೆಲ್ಲರಿಗೂ ತುಂಬ ಸಂತೋಷದ ಮತ್ತು ತೃಪ್ತಿಯ ಕ್ಷಣವಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ನಾವು ಇನ್ನೂ ಕೆಲವು ಬುದ್ಧಿಮಾಂದ್ಯ ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಸೇರಿಸಿದ್ದೇವೆ‘ ಎಂದು ಕಾಮರೂಪ್ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಾಲಾಬಿಕಾ ಕಲಿತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT