ಅಫಜಲಪುರ: ‘ಸೆ.3ರಂದು ಪಟ್ಟಣದ ಪುರಸಭೆಯ ಹತ್ತನೇ ಅವಧಿಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲಾಗುತ್ತದೆ’ ಎಂದು ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರರಾಗಿರುವ ಸಂಜು ಕುಮಾರ್ ದಾಸರ್ ಹಾಗೂ ಪುರಸಭೆಯ ಮುಖ್ಯ ಅಧಿಕಾರಿ ವಿಜಯಮಹಾಂತೇಶ ಹೂಗಾರ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ‘ಬ’ (ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಿದೆ.
ಸೆ.3ರಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆ ಒಳಗೆ ನಾಮಪತ್ರ ಸ್ವೀಕರಿಸಲಾಗುವುದ, ಮಧ್ಯಾಹ್ನ 1 ಗಂಟೆಯಿಂದ 1.15ರ ವರೆಗೆ ಪರಿಶೀಲನೆ ಮಾಡಲಾಗುವುದು. 1.30 ಗಂಟೆ ರವರೆಗೆ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಸಮಯ ಇರುತ್ತದೆ. 1.30ಕ್ಕೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಪುರಸಭೆ ಸದಸ್ಯರು, ಮತಕ್ಷೇತ್ರದ ವಿಧಾನಸಭಾ ಸದಸ್ಯರು, ಕಲಬುರಗಿ ಲೋಕಸಭಾ ಸದಸ್ಯರು ಸೆ.3 ರಂದು ಪುರಸಭೆ ಕಾರ್ಯಾಲಯದಲ್ಲಿ ಹಾಜರಿರಲು ಕೋರಲಾಗಿದೆ. ಸದಸ್ಯರು ಚುನಾವಣೆಗೆ ಬರುವಾಗ ಚುನಾಯಿತ ಪ್ರಮಾಣ ಪತ್ರ ತರಬೇಕು ಎಂದು ಅವರು ತಿಳಿಸಿದರು.