ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ರಕ್ಷಣೆಗಾಗಿ ಅಲೋವೆರಾ, ಸೌತೆಕಾಯಿ ಜೆಲ್; ಸಿಯುಕೆಯಿಂದ ಅಭಿವೃದ್ಧಿ

Published 5 ಅಕ್ಟೋಬರ್ 2023, 16:04 IST
Last Updated 5 ಅಕ್ಟೋಬರ್ 2023, 16:04 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳು ಸೂರ್ಯನ ಬೆಳಕಿನ ವಿಕಿರಣಗಳಿಂದ ಚರ್ಮದ ರಕ್ಷಣೆಗಾಗಿ ಅಲೋವೆರಾ (ಲೋಳೆಸರ) ಮತ್ತು ಸೌತೆಕಾಯಿ ಜೆಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಜೆಲ್‌ನ ವೈಜ್ಞಾನಿಕ ವಿವರಗಳು, ಅದರ ಪ್ರಯೋಜನಗಳು, ಸುರಕ್ಷತೆ ಮತ್ತು ಅಡ್ಡ ಪರಿಣಾಮಗಳ ಕುರಿತು ಮಾಹಿತಿ ನೀಡಿದ ‍ಪ್ರಾಧ್ಯಾಪಕ ಕೊಂಕಲ್ಲು ಹನುಮೇಗೌಡ, ‘ಎನ್–ಅಸೆಟೈಲ್ಸಿಸ್ಟೈನ್ ಮತ್ತು ಗ್ಲುಟಾಥಿಯೋನ್ ಅವೊಬೆನ್‌ಜೋನ್‌ಗೆ ಶೇ 96ರಷ್ಟು ಫೋಟೊಪ್ರೊಟೆಕ್ಷನ್ ನೀಡುತ್ತವೆ. ಇದರಿಂದಾಗಿ ಸೂರ್ಯನ ಬೆಳಕಿನ ಗರಿಷ್ಠ ಪ್ರಮಾಣದ ವಿಕಿರಣವನ್ನು ಚರ್ಮಕ್ಕೆ ತಲುಪದಂತೆ ಮಾಡುತ್ತದೆ. ಚರ್ಮದ ಹಾನಿ, ಸನ್‌ಬರ್ನ್‌ಗೆ ಕಾರಣವಾಗುವ ಫಿಲ್ಟರ್ ಮಾಡದ ವಿಕಿರಣವನ್ನು ಜೆಲ್‌ನಲ್ಲಿರುವ ಎನ್–ಅಸಿಟೈಲ್‌ಸಿಸ್ಟೈನ್‌ನಿಂದ ತಕ್ಷಣವೇ ಚಿಕಿತ್ಸೆ ನೀಡಬಹುದಾಗಿದೆ. ಜೆಲ್‌ನಲ್ಲಿರುವ ಚರ್ಮದ ಹೊಳಪು, ಬಿಳುಪುಗೊಳಿಸುವ ಏಜೆಂಟ್ ಗ್ಲುಟಾಥಿಯೋನ್ ಸನ್‌ಬರ್ನ್‌ನಿಂದ ಸಂಗ್ರಹವಾಗುವ ಗಾಯದ ರಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ’ ಎಂದರು.

ಮಾರುಕಟ್ಟೆಯಲ್ಲಿ ಅವೊಬೆನ್‌ಜೋನ್ ಎನ್–ಅಸಿಟೈಲ್ ಸಿಸ್ಟೀನ್ ಮತ್ತು ಗ್ಲುಟಾಥಿಯೋನ್‌ಗಳ ಸಂಯೋಜನೆ ಇರುವ ಅಗ್ಗದ ಮತ್ತು ದೀರ್ಘಕಾಲೀನ ರಕ್ಷಣೆ ನೀಡುವ ಕಾಸ್ಮೆಟಿಕ್ ಜೆಲ್ ಇದಾಗಿದೆ.
ಪ್ರೊ.ಕೊಂಕಲ್ಲು ಹನುಮೇಗೌಡ, ಪ್ರಾಧ್ಯಾಪಕ, ಸಿಯುಕೆ

‘ಸೂರ್ಯನ ಬೆಳಕಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಚರ್ಮದ ಮೇಲೆ ಕಪ್ಪು ತೇಪೆಗಳ ರಚನೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಹೊಸದಾಗಿ ತಯಾರಾದ ಅಲೋವೆರಾ–ಸೌತೆಕಾಯಿ ಜೆಲ್, ಸೂರ್ಯನ ವಿಕಿರಣವನ್ನು ಫಿಲ್ಟರ್ ಮಾಡಲಿದೆ. ಬಿಸಿಲಿನ ಬೇಗೆಯ ಚಿಕಿತ್ಸೆ ಮತ್ತು ಸನ್‌ಬರ್ನ್‌ನಿಂದ ಚರ್ಮದ ಮೇಲೆ ಕಪ್ಪು ಕಲೆಗಳ ರಚನೆಯನ್ನು ಕಡಿಮೆ ಮಾಡುವ ಮೂರು ಆಯಾಮಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಚರ್ಮಕ್ಕೆ ಸಮಗ್ರ ರಕ್ಷಣೆ ನೀಡುತ್ತದೆ’ ಎಂದು ಹೇಳಿದರು.

‘ಪಿಎಚ್‌.ಡಿ ವಿದ್ಯಾರ್ಥಿ ದೀಪಕ್ ಕುಮಾರ್ ಸಾಹೂ ಮತ್ತು ಎಂಎಸ್ಸಿ ವಿದ್ಯಾರ್ಥಿನಿ ಪೂಜಾ ನನ್ನ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದಾರೆ. ಇದನ್ನು ಪ್ರತಿಷ್ಠಿತ ಜರ್ನಲ್ ಜೆ. ಫೋಟೊಕೆಮ್‌ನಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆ ಭಾರತ ಸರ್ಕಾರದ ಆಯುಷ್ ಯೋಜನೆಯ ಆಶಯದಂತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT