ಮಂಗಳವಾರ, ಏಪ್ರಿಲ್ 20, 2021
24 °C
ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಅಮರನಾಥ ಮಾಟೀಲ ಬೇಸರ

‘ಹೈ–ಕ ಭಾಗದ ಅಭಿವೃದ್ಧಿಗೆ ಪ್ರಸ್ತಾವ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆದರೆ, ಆ ಬಗ್ಗೆ ಪ್ರಸ್ತಾವ ಮಾಡದಿರುವ ಮೂಲಕ ಈ ಭಾಗದ ಜನರಿಗೆ ನಿರಾಸೆ ಮಾಡಿದ್ದಾರೆ.

ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯ ಮಾದರಿಯಲ್ಲಿ ಕಲಬುರ್ಗಿಯಲ್ಲಿ ಒಂದು ಸಂಸ್ಥೆಯನ್ನು ಮಂಜೂರು ಮಾಡಿದ್ದರೆ ಈ ಭಾಗದ ಜನರಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತಿತ್ತು. ಇಎಸ್‌ಐ ಆಸ್ಪತ್ರೆಯ ಪಕ್ಕದಲ್ಲಿಯೇ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗವನ್ನು ಇದಕ್ಕಾಗಿ ಬಳಸಿಕೊಳ್ಳಬಹುದಿತ್ತು.

ರೈಲ್ವೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ಕಲಬುರ್ಗಿಗೆ ಈ ಬಾರಿಯೂ ಅನ್ಯಾಯವಾಗಿದೆ. ಕಲಬುರ್ಗಿ ಜನರಿಗೆ ಬೆಂಗಳೂರು ಅಥವಾ ಮುಂಬೈಗೆ ಹೋಗಲು ಹೆಚ್ಚಿನ ಕೋಟಾಗಳು ಇಲ್ಲ. ಬಸವ ಎಕ್ಸ್‌ಪ್ರೆಸ್‌ ರೈಲು ಕಲಬುರ್ಗಿಯಲ್ಲಿಯೇ ಭರ್ತಿಯಾಗುತ್ತದೆ. ಆದರೂ ಕೇವಲ 12 ಜನರಿಗೆ ಮುಂಗಡ ಟಿಕೆಟ್ ಕೋಟಾ ಇದೆ. ಕಲಬುರ್ಗಿ, ಬೀದರ್‌ ಮೂಲಕ ಹೆಚ್ಚು ರೈಲುಗಳನ್ನು ಓಡಿಸಿದರೆ ಮುಂಬೈ ಹಾಗೂ ಬೆಂಗಳೂರಿಗೆ ತೆರಳುವ ಸಮಯದಲ್ಲಿ ಸಾಕಷ್ಟು ಉಳಿತಾಯವಾಗಲಿದೆ.

ಐದು ವರ್ಷಗಳ ಹಿಂದೆಯೇ ಕಲಬುರ್ಗಿಯಲ್ಲಿ ರೈಲ್ವೆ ವಲಯವನ್ನಾಗಿ ಘೋಷಿಸಲಾಗಿತ್ತು. ರೈಲ್ವೆ ಮಂಡಳಿ ಅಧ್ಯಕ್ಷರೇ ಇಲ್ಲಿಗೆ ಬಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೂ, ವಲಯದ ರಚನೆಗೆ ಮುಂದಾಗದಿರುವುದು ಸರಿಯಲ್ಲ.

ಕಲಬುರ್ಗಿ ವಿಮಾನ ನಿಲ್ದಾಣವು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಸಜ್ಜಾಗಿದ್ದು, ರಾಜ್ಯ ಸರ್ಕಾರ ಮತ್ತು ಭಾರತೀಯ ವಿಮಾನಯಾನ ಪ್ರಾಧಿಕಾರದ ಮಧ್ಯೆ ಒಪ್ಪಂದ ಮಾಡಿಕೊಳ್ಳುವುದು ಮಾತ್ರ ಬಾಕಿ ಇದೆ. ಇದು ಏನು ದೊಡ್ಡ ವಿಚಾರವಲ್ಲ. ಅಲ್ಲದೇ, ವಿಮಾನಗಳಿಗೆ ಮೂರು ತಿಂಗಳ ಮುಂಗಡ ಬುಕಿಂಗ್‌ ತೆಗೆದುಕೊಳ್ಳುತ್ತೇವೆ ಎಂದೂ ಭರವಸೆ ನೀಡಿದ್ದೇವೆ. ಆದರೂ, ಒಪ್ಪಂದ ವಿಚಾರದಲ್ಲಿ ನಿರ್ಣಯಕ್ಕೆ ಬಂದಿಲ್ಲ. ಈ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿ ಉಡಾನ್ ಯೋಜನೆಯಡಿ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು.

ಇದರ ಮಧ್ಯೆಯೇ, ಎಂಎಸ್‌ಎಂಇ ಕ್ಷೇತ್ರದಲ್ಲಿ ಉದ್ಯಮಗಳನ್ನು ಆರಂಭಿಸಲು ₹ 350 ಕೋಟಿಯನ್ನು ಶೇ 2ರ ಬಡ್ಡಿದರದಲ್ಲಿ ನೀಡುವ ಪ್ರಸ್ತಾವ ಒಳ್ಳೆಯದು. ಸ್ಟಾರ್ಟಪ್‌ ಆರಂಭಿಸುವವರಿಗೆ ಅವರ ಬಂಡವಾಳದ ಮೂಲದ ಬಗ್ಗೆ ಕಠಿಣ ಷರತ್ತುಗಳನ್ನು ವಿಧಿಸದೇ ಇರುವುದು ಉದ್ಯಮದ ಒಟ್ಟಾರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

–ಅಮರನಾಥ ಪಾಟೀಲ

ಅಧ್ಯಕ್ಷರು, ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕಲಬುರ್ಗಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು