ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಕಲ್ಯಾಣ ಕರ್ನಾಟಕ

Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಕಲ್ಯಾಣವೆಂಬ ಪದವೇ ಅತ್ಯಂತ ಅಪ್ಯಾಯಮಾನವಾದುದು. 12ನೇ ಶತಮಾನದಲ್ಲಿ ಜಾತಿ, ಪಂಥಗಳ ಸಂಕೋಲೆಗಳನ್ನು ಧಿಕ್ಕರಿಸಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಶರಣರೆಲ್ಲ ಒಂದಾಗಿ ಕಲ್ಯಾಣ ಕ್ರಾಂತಿಯನ್ನು ನೆರವೇರಿಸಿದ ನಾಡೇ ಕಲ್ಯಾಣ ಕರ್ನಾಟಕ.

ಕಲ್ಯಾಣ ನಾಡಿನ ಭಾಗವಾದ ಕಲಬುರ್ಗಿಯಲ್ಲಿ 33 ವರ್ಷಗಳ ಬಳಿಕ ಸಾಹಿತ್ಯ ಜಾತ್ರೆ ನಡೆಯುತ್ತಿರುವುದು ಈ ಭಾಗದ ಜನರ ಸಂಭ್ರಮವನ್ನು ನೂರ್ಮಡಿಗೊಳಿಸಿದೆ.ಶರಣರ ವಚನಗಳ ಕಂಪು, ಸೂಫಿ ಸಾಹಿತ್ಯದ ಇಂಪನ್ನು ಜೊತೆ ಜೊತೆಯಾಗೇ ಪೋಷಿಸಿಕೊಂಡು ಬಂದ ಈ ನೆಲದಲ್ಲಿ ಶರಣ ಪರಂಪರೆಯ ಹೆಜ್ಜೆಗಳುದಟ್ಟವಾಗಿ ಪಡಿಮೂಡಿವೆ.

ರಾಜ್ಯದ ಯಾವ ಜಿಲ್ಲೆಯಲ್ಲೂ ಕಾಣದಷ್ಟು ಬಹುಸಂಸ್ಕೃತಿಯ ಅನನ್ಯ ಸೊಗಡು ಕಲಬುರ್ಗಿ ಸೀಮೆಯ ವಿಶಿಷ್ಟ ಹೆಗ್ಗಳಿಕೆ. ಅಶೋಕ ಚಕ್ರವರ್ತಿಯ ಕಾಲದಲ್ಲಿ ಬೌದ್ಧ ಪರಂಪರೆ ದಟ್ಟವಾಗಿ ಹರಡಿದ್ದ ಸಂದರ್ಭ. ಆತನ ಹೆಜ್ಜೆಗುರುತುಗಳು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸನ್ನತಿಯವರೆಗೂ ಮೂಡಿವೆ. ಹೀಗಾಗಿ, ಅಂತರರಾಷ್ಟ್ರೀಯ ಭೂಪಟದಲ್ಲಿಯೂ ಐತಿಹಾಸಿಕ ಪ್ರಾಮುಖ್ಯವನ್ನು ಪಡೆದಿದೆ. ನಂತರ ಆಳಿದವರು ರಾಷ್ಟ್ರಕೂಟರು. ಜಿಲ್ಲೆಯ ಮಾನ್ಯಖೇಟ (ಸೇಡಂ ತಾಲ್ಲೂಕಿನ ಮಳಖೇಡ)ವನ್ನು ರಾಜಧಾನಿಯನ್ನಾಗಿಸಿಕೊಂಡು ಆಡಳಿತ ನಡೆಸಿದ ರಾಷ್ಟ್ರಕೂಟ ಅರಸ ಅಮೋಘವರ್ಷ ನೃಪತುಂಗ ತನ್ನ ಸಾಹಿತ್ಯ ಪ್ರೇಮದಿಂದಾಗಿ ಜಗದ ಪ್ರೀತಿಗೆ ಪಾತ್ರನಾಗಿದ್ದಾನೆ. ಆತನ ಆಸ್ಥಾನ ಕವಿಯಾಗಿದ್ದ ಶ್ರೀವಿಜಯ ರಚಿಸಿದ ಕವಿರಾಜಮಾರ್ಗವನ್ನು ಬಿಟ್ಟು ಕನ್ನಡ ಸಾಹಿತ್ಯ ಚರಿತ್ರೆ ಪೂರ್ಣಗೊಳ್ಳುವುದಾದರೂ ಹೇಗೆ?

ಕಲ್ಯಾಣಿ ಚಾಲುಕ್ಯರು, ಕಲಚೂರಿ ಬಿಜ್ಜಳರು, ಬಹಮನಿ ಸುಲ್ತಾನರು, ಅನ್ನದಾಸೋಹಿ, ಜ್ಞಾನದಾಸೋಹಿ ಶರಣಬಸವೇಶ್ವರರು, ಬಡವರ ರಾಜನೆಂದೇ (ಗೇಸುದರಾಜ) ಪ್ರಖ್ಯಾತನಾದ ಸೂಫಿ ಸಂತ ಖಾಜಾ ಬಂದಾನವಾಜ ಬಾಳಿ ಬದುಕಿದ, ಅನುಭಾವ ಹಂಚಿದ ಬಹುಮುಖಿ ಸಂಸ್ಕೃತಿಯ ನೆಲೆವೀಡು ಕಲಬುರ್ಗಿ ಸೀಮೆ.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಜಗತ್ತಿನ ಮೊಟ್ಟಮೊದಲ ಸಂಸತ್ತು ಎಂದೇ ಪ್ರತೀತಿ ಪಡೆದ ಅನುಭವ ಮಂಟಪ ತಲೆಯೆತ್ತಿತು. ಇದರಲ್ಲಿ ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳಲು ಕಾಶ್ಮೀರದ ರಾಜನಾಗಿದ್ದ ಮೋಳಿಗೆಯ ಮಾರಯ್ಯ, ಶಿವಮೊಗ್ಗದ ಉಡುತಡಿಯ ಅಕ್ಕಮಹಾದೇವಿ, ಉಳವಿಯ ಚನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಹಡಪದ ಅಪ್ಪಣ್ಣನಂಥ ನೂರಾರು ಶರಣರು ಸಮಾವೇಶಗೊಂಡರು. ಕರ್ಮಠ ಜಾತೀಯತೆಯಿದ್ದ ಸಂದರ್ಭದಲ್ಲಿಯೇ ಬಸವಣ್ಣನವರ ನೇತೃತ್ವದಲ್ಲಿ ಬ್ರಾಹ್ಮಣ ಮಧುವರಸನ ಮಗಳನ್ನು ದಲಿತ ಹರಳಯ್ಯನ ಮಗನಿಗೆ ಅಂತರ್ಜಾತಿ ಮದುವೆ ಮಾಡಿಸಿದ್ದೇ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಎಂಬ ಪ್ರತೀತಿ ಇದೆ. ಮಹಿಳಾ ಸಮಾನತೆಗೆ ಹೆಚ್ಚು ಅವಕಾಶ ನೀಡಿದ ಬಸವಣ್ಣ ಹಾಗೂ ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭುಗಳ ದೆಸೆಯಿಂದಾಗಿ ಅಕ್ಷರವರಿಯದ ಹೆಣ್ಣುಮಕ್ಕಳೂ ತಮ್ಮ ದಿನನಿತ್ಯದ ಆಗುಹೋಗುಗಳ ಬಗ್ಗೆ ವಚನಗಳನ್ನು ಬರೆಯುವಂತಾದ ಐತಿಹಾಸಿಕ ಕ್ಷಣಕ್ಕೆ ಕಲ್ಯಾಣ ಕರ್ನಾಟಕ ಸೀಮೆ ಸಾಕ್ಷಿಯಾಗಿದೆ.

ಬಜಾರುಗಳ ಬೀದಿಗಳಲ್ಲಿ ವಜ್ರ, ವೈಢೂರ್ಯ, ಮುತ್ತು ರತ್ನಗಳನ್ನು ಮಾರುತ್ತಿದ್ದರು ಎಂಬ ಪ್ರತೀತಿ ಹೊಂದಿರುವ ವಿಜಯ ನಗರ ಸಾಮ್ರಾಜ್ಯವಿದ್ದ ಹಂಪಿಯನ್ನು ಒಳಗೊಂಡ ಬಳ್ಳಾರಿ ಜಿಲ್ಲೆ ಕಲ್ಯಾಣ ಕರ್ನಾಟಕದ ಭಾಗವಾಗಿ ಸೇರ್ಪಡೆಯಾಗಿದೆ.‍ಪೌರಾಣಿಕ ಹಿನ್ನೆಲೆಯುಳ್ಳ ಅಂಜನಾದ್ರಿ ಬೆಟ್ಟ ಕೊಪ್ಪಳ ಜಿಲ್ಲೆಯಲ್ಲಿದ್ದರೆ, ದಾಸರು ನಡೆದಾಡಿದ ನೆಲ ರಾಯಚೂರು, ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದಿದ್ದ ಸುರಪುರದ ನಾಯಕರು ಯಾದಗಿರಿ ಜಿಲ್ಲೆಯಲ್ಲಿ ಅಚ್ಚಳಿಯದ ಹೆಜ್ಜೆಗಳನ್ನು ಮೂಡಿಸಿದ್ದಾರೆ.

ಸುರಪುರ ತಾಲ್ಲೂಕಿನ ಕೊಡೇಕಲ್ಲ ಬಸವಣ್ಣನವರಿಗೂ ಚಾಮರಾಜನಗರ ಜಿಲ್ಲೆಯ ಮಂಟೇಸ್ವಾಮಿ ಪರಂಪರೆಗೂ ಅವಿನಾಭಾವ ಸಂಬಂಧವಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಯಡ್ರಾಮಿ ತಾಲ್ಲೂಕಿಗೆ ಸೇರಿದ ಕಡಕೋಳ ಮಡಿವಾಳಪ್ಪನವರದು ಅಧ್ಯಾತ್ಮ ರಂಗದಲ್ಲಿ ಬಲುದೊಡ್ಡ ಹೆಸರು. ಕಡಕೋಳ ಮಡಿವಾಳಪ್ಪನವರಲ್ಲಿ ಹೆಚ್ಚು ನಡೆದುಕೊಳ್ಳುವವರು ಮುಸ್ಲಿಮರು. ಕಲಬುರ್ಗಿಯ ಸೂಫಿ ಸಂತ ಖಾಜಾ ಬಂದಾನವಾಜರ ದರ್ಗಾಕ್ಕೆ ಭೇಟಿ ನೀಡುವವರಲ್ಲಿ ಹೆಚ್ಚಿನವರು ಹಿಂದುಗಳು.

ಪರ್ಷಿಯಾ, ಇರಾಕ್‌, ಇರಾನ್‌, ಅರೆಬಿಕ್‌ನಿಂದ ಬಂದ ಸೂಫಿಗಳು ಕಲಬುರ್ಗಿಯ ಜ್ಞಾನಸಂಪತ್ತನ್ನು ವೃದ್ಧಿಸಿದ್ದಾರೆ. ಇಲ್ಲಿನ ಸಿಹಿ ತಿನಿಸುಗಳು, ಇರಾನಿ ಶೈಲಿಯ ಚಹಾದಲ್ಲಿ ಸೂಫಿ ತನದ ಘಮಲಿದೆ. ಸೂಫಿ ಚಿಂತನೆಯ ಜೊತೆಗೇ ಅಲ್ಲಿನ ಆಹಾರ ಕ್ರಮವೂ ಕಲಬುರ್ಗಿ ಜನರ ಹೊಟ್ಟೆಯನ್ನು ಸಮೃದ್ಧವಾಗಿಸಿದೆ. ಜಿಲ್ಲೆಯ ಸುಣ್ಣದ ಕಲ್ಲಿನ ಮಿಶ್ರಣವಿರುವ ನೆಲದಲ್ಲಿ ಬೆಳೆಯುವ ತೊಗರಿಗೆ ಇಡೀ ದೇಶದಲ್ಲಿಯೇ ಉತ್ತಮ ಬೇಡಿಕೆ ಇದೆ. ಕಮಲಾಪುರದ ಕೆಂಪು ಬಾಳೆ ಹಲವು ರೋಗಗಳಿಗೆ ಔಷಧಿಯಂತಿದೆ. ಇಂತಹ ಮಹತ್ವದ ಕಾರಣಕ್ಕೇ ಕೆಂಪು ಬಾಳೆ ಹಾಗೂ ತೊಗರಿಗೆ ಭೌಗೋಳಿಕ ವೈಶಿಷ್ಟ್ಯದ ಸ್ಥಾನಮಾನ ದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT