ಕಲಬುರಗಿ: ‘ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ರಾಜ್ಯ ಮಟ್ಟದ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನವನ್ನು ಸೆಪ್ಟೆಂಬರ್ 13 ಮತ್ತು 14ರಂದು ನಗರದ ವೀರಶೈವ ಕಲ್ಯಾಣ ಮಂಟಪ ಮುಂಭಾಗದ ಸಾರ್ವಜನಿಕ ಉದ್ಯಾನದಲ್ಲಿ ಆಯೋಜಿಸಲಾಗುವುದು’ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದರು.
‘13ರ ಬೆಳಿಗ್ಗೆ 11ಕ್ಕೆ ಕಲಬುರಗಿ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ನಡೆಯುವ ಸಮ್ಮೇಳನದ ಮೆರವಣಿಗೆಗೆ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಅವರು ಚಾಲನೆ ನೀಡುವರು. ಮಧ್ಯಾಹ್ನ 12ಕ್ಕೆ ಸಾರ್ವಜನಿಕ ಉದ್ಯಾನದಲ್ಲಿ ನಡೆಯುವ ಬಹಿರಂಗ ಅಧಿವೇಶನದಲ್ಲಿ ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮೆಡಿಕಲ್ ಸರ್ವೀಸ್ ಸೆಂಟರ್‌ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಸುಧಾ ಕಾಮತ್, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಶಿವಗಂಗಾ ರುಮ್ಮಾ, ಎಐಎಂಎಸ್‌ಎಸ್ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸುವರು. 14ರಂದು ಪ್ರತಿನಿಧಿ ಅಧಿವೇಶನ ನಡೆಯಲಿದೆ’ ಎಂದರು.
‘ರಾಜ್ಯದ 31 ಜಿಲ್ಲೆಗಳಿಂದ ನೂರಾರು ಆಶಾ ಪ್ರತಿನಿಧಿಗಳು ಹಾಗೂ ಬಹಿರಂಗ ಅಧಿವೇಶನದಲ್ಲಿ ಸುಮಾರು 6 ಸಾವಿರ ಆಶಾ ಕಾರ್ಯಕರ್ತೆಯರು ಪಾಲ್ಗೊಳ್ಳುವರು. ಪ್ರತಿನಿಧಿ ಅಧಿವೇಶನದಲ್ಲಿ 600ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸುವರು. ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಇರಿಸಲಾಗುವುದು’ ಎಂದು ತಿಳಿಸಿದರು.
‘ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸಾಮಾಜಿಕ ಭದ್ರತೆ, ಮಾಸಿಕ ಕನಿಷ್ಠ ₹15 ಸಾವಿರ ಪ್ರೋತ್ಸಾಹ ಧನ ನೀಡಬೇಕು. 60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ₹3 ಲಕ್ಷ ನೀಡಬೇಕು ಎಂಬುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುರಾದ ವಿ.ಜಿ. ದೇಸಾಯಿ, ರಾಘವೇಂದ್ರ ಎಂ.ಜಿ., ಎಸ್.ಎಂ. ಶರ್ಮಾ, ಶಿವಲಿಂಗಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.