ಮಂಗಳವಾರ, ಡಿಸೆಂಬರ್ 7, 2021
24 °C

‘ಐಎಎಸ್, ಐಪಿಎಸ್ ಮಾಡಲು ಮನೋಬಲ ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಐಎಎಸ್, ಐಪಿಎಸ್‌ ಮಾಡಲು ಮುಖ್ಯವಾಗಿ ಮನೋಬಲ ಮುಖ್ಯ. ಯುಪಿಎಸ್‌ಸಿ ಪರೀಕ್ಷೆ ಬರೆಯುವವರು ಎಷ್ಟು ಜನರಿದ್ದರೂ ಅವರಿಗಿಂತ ಹೆಚ್ಚು ಅಂಕಗಳನ್ನು ಪಡೆದು ಐಎಎಸ್‌ ಅಧಿಕಾರಿಯಾಗುತ್ತೇನೆ ಎಂಬ ಮಹತ್ವಾಕಾಂಕ್ಷೆ ಇರಬೇಕು’ ಎಂದು ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ವಿನಯಕುಮಾರ್‌ ಬಿ.ಜಿ. ತಿಳಿಸಿದರು.

ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌ ಆಶ್ರಯದಲ್ಲಿ, ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಐಎಎಸ್‌ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಾಲ ಕಾಲಕ್ಕೆ ಪರೀಕ್ಷಾ ಕ್ರಮ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪದವಿಯಲ್ಲಿ ಶೇ 35ರಷ್ಟು ಅಂಕ ಪಡೆದವರೂ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದು. ಇಷ್ಟೇ ಅಂಕಗಳನ್ನು ಪಡೆದವರು ಐಎಎಸ್‌ ಅಧಿಕಾರಿಗಳೂ ಆಗಿದ್ದಾರೆ. ಹೀಗಾಗಿ, ಜ್ಞಾನ ಯಾರೊಬ್ಬರ ಸ್ವತ್ತೂ ಅಲ್ಲ. ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಮುನ್ನುಗ್ಗುವ ಛಾತಿ ನಮ್ಮಲ್ಲಿರಬೇಕು. ನಾನು ಮುಂಚೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದೆ. ಕೆಎಎಸ್ ಓದುವುದಕ್ಕಾಗಿ ಮುಂಬೈನಲ್ಲಿ ಉನ್ನತ ಅಧ್ಯಯನದ ಅವಕಾಶವನ್ನು ಕಳೆದುಕೊಂಡೆ. ಆದರೆ, 2011ರಲ್ಲಿ ಕೆಪಿಎಸ್‌ಸಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಆ ಸಾಲಿನ ಆಯ್ಕೆಯನ್ನೇ ರದ್ದು ಮಾಡಿದರು. ಆಗ ಸಾಕಷ್ಟು ನಿರಾಸೆಯಾಯಿತು. ಆದರೂ ಛಲ ಬಿಡದೇ ಐಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸಿ ಪ್ರಿಲಿಮ್ಸ್, ಮೇನ್ಸ್‌ ಪಾಸಾಗಿ ಸಂದರ್ಶನಕ್ಕೂ ಹೋಗಿ ಬಂದಿದ್ದೆ’ ಎಂದರು.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಅಧ್ಯಯನ ನಡೆಸುವವರು ಎನ್‌ಸಿಇಆರ್‌ಟಿಯ 11 ಮತ್ತು 12ನೇ ತರಗತಿಯ ಪಠ್ಯಪುಸ್ತಕಗಳನ್ನು ಪ್ರಾಥಮಿಕ ಹಂತದಲ್ಲಿ ಅಧ್ಯಯನ ಮಾಡಬೇಕು. ಇವುಗಳನ್ನು ಆಧರಿಸಿಯೇ ಆಯೋಗದವರು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಓದಿ : ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವವರು ಪ್ರಜಾವಾಣಿಯ ಸಂಪಾದಕೀಯ ಹಾಗೂ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಹೊರತರುತ್ತಿರುವ ಎಕ್ಸಾಂ ಮಾಸ್ಟರ್‌ಮೈಂಡ್ ಪತ್ರಿಕೆಯನ್ನು ಓದಿರಿ ಎಂದು ವಿನಯಕುಮಾರ್‌ ಸಲಹೆ ನೀಡಿದರು.

 ‘ಇನ್‌ಸೈಟ್ಸ್‌ ಐಎಎಸ್‌’ ಶಾಖೆಯನ್ನು ಕಲಬುರಗಿಯಲ್ಲಿ ಆರಂಭಿಸಬೇಕು ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸ್ಮರ್ಧಾಕಾಂಕ್ಷಿಗಳು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿನಯಕುಮಾರ್‌, ಅಗತ್ಯ ಬಿದ್ದರೆ ನಾಳೆಯಿಂದಲೇ ಒಂದು ಶಾಖೆ ಆರಂಭಿಸುತ್ತೇವೆ. ಮೊದಲ ಹಂತದಲ್ಲಿ ಟೆಸ್ಟ್‌ಗಳನ್ನು ಇಲ್ಲಿಯೇ ನಡೆಸಲು ಯೋಜನೆ ರೂಪಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು