ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಪ್ಯಾಕೇಜ್‌ ಏಕಿಲ್ಲ: ಲಾಕ್‌ಡೌನ್‌ನಿಂದ ಕಂಗಾಲಾದ ಶ್ರಮಿಕ ವರ್ಗದ ಪ್ರಶ್ನೆ

Last Updated 10 ಮೇ 2021, 15:13 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಹಾವಳಿ ತಡೆಗೆ ರಾಜ್ಯ ಸರ್ಕಾರ ಘೋಷಿಸಿರುವ ಸೆಮಿ ಲಾಕ್‌ಡೌನ್, ಕಠಿಣ ಲಾಕ್‌ಡೌನ್‌ಗಳು ದುಡಿದು ತಿನ್ನುವ ಶ್ರಮಿಕ ವರ್ಗವನ್ನು ಕಂಗಾಲು ಮಾಡಿವೆ. ತಿಂಗಳಾನುಗಟ್ಟಲೇ ಉದ್ಯೋಗ ಮಾಡಲೂ ಅವಕಾಶ ನೀಡದೇ, ಮತ್ತೊಂದೆಡೆ ಪರಿಹಾರವನ್ನೂ ಕೊಡದೇ ಇರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಸೆಮಿ ಲಾಕ್‌ಡೌನ್‌ನಲ್ಲಿ ಆಟೊ, ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶವಿತ್ತು. ಆದರೆ, ಸೋಮವಾರ ಆರಂಭವಾದ 14 ದಿನಗಳ ಕಠಿಣ ಲಾಕ್‌ಡೌನ್‌ನಲ್ಲಿ ಆಟೊ, ಟ್ಯಾಕ್ಸಿಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಅಲ್ಲದೇ, 14 ದಿನಗಳ ಬಳಿಕವೂ ಲಾಕ್‌ಡೌನ್‌ ಮುಗಿಯಲಿದೆ ಎಂಬ ಭರವಸೆಯೂ ಇಲ್ಲ. ಮತ್ತೊಂದೆಡೆ ಕ್ಷೌರಿಕ ಸಮಾಜದವರು ತಮ್ಮ ಹೇರ್‌ ಕಟಿಂಗ್ ಶಾಪ್ ಹಾಗೂ ಸ್ಪಾಗಳನ್ನು ಬಂದ್ ಮಾಡಿದ್ದಾರೆ. ಹೀಗಾಗಿ, ಅಂಗಡಿ ಬಾಡಿಗೆ ಕಟ್ಟಲು ಆಗುತ್ತಿಲ್ಲ ಎಂಬುದು ಅವರ ಅಳಲು.

ಆಟೊ, ಟ್ಯಾಕ್ಸಿಯವರದ್ದು ಇನ್ನೊಂದು ಬಗೆಯ ಗೋಳು. ಮೊದಲೇ ಕೊರೊನಾ ಹೆಚ್ಚಾಗುತ್ತಿರುವುದರಿಂದ ಟ್ಯಾಕ್ಸಿಗಳನ್ನು ಬಾಡಿಗೆಗೆ ಒಯ್ಯುವುದೇ ಕಡಿಮೆಯಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಟ್ಯಾಕ್ಸಿ ದರಗಳನ್ನು ಹೆಚ್ಚಿಸಿದ್ದರೂ ಹೆಚ್ಚಿನ ದರ ಹೇಳಿದರೆ ಗ್ರಾಹಕರು ಬರುವುದಿಲ್ಲ ಎಂಬ ಕಾರಣಕ್ಕೆ ಮೊದಲಿನ ದರವನ್ನೇ ನಿಗದಿ ಮಾಡಲಾಗಿದೆ. ಆದರೂ, ಬರುತ್ತಿಲ್ಲ.

‘ನಮ್ಮ ಬಳಿ ಮೂರು ಕಾರುಗಳಿದ್ದು, ನಿತ್ಯ ಬಾಡಿಗೆಗೆ ಕರೆ ಬರುವುದೇ ಇಲ್ಲ. ಬಂದರೂ ಗ್ರಾಹಕರು ಚಾಲಕನ ಭತ್ಯೆ ಹಿಂಜರಿಯುತ್ತಾರೆ. ಮೊದಲೇ ಪ್ರತಿ ದಿನ ಡೀಸೆಲ್‌ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೇವೆ. ತಿಂಗಳು ಮುಗಿದರೆ, ಕಾರಿನ ಕಂತು ಕಟ್ಟಬೇಕು. ಫೈನಾನ್ಸ್‌ನವರು ಸಾಲ ವಸೂಲಾತಿಗೆ ಮನೆಗೇ ಬಂದು ಹೆದರಿಸುತ್ತಾರೆ’ ಎಂದು ಟ್ಯಾಕ್ಸಿ ಚಾಲಕರಾದ ರಮೇಶ್ ಮತ್ತು ಅಕ್ಷಯ್ ತಿಳಿಸಿದರು.

‘ಕೆಲವರು ಬೆಂಗಳೂರಿನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದರು. ಅಲ್ಲಿಯೂ ಲಾಕ್‌ಡೌನ್ ಜಾರಿಯಾಗಿದ್ದರಿಂದ ಕಾರಿನ ಸಹಿತ ಇಲ್ಲಿಗೇ ಬಂದಿದ್ದಾರೆ. ಗ್ರಾಹಕರು ಟ್ಯಾಕ್ಸಿಗಳನ್ನು ಒಯ್ಯಲು ಹಿಂಜರಿಯುತ್ತಾರೆ. ಹೀಗಾದರೆ ಕಂತು ಕಟ್ಟಿ ಸಂಸಾರ ನಿಭಾಯಿಸುವುದು ಹೇಗೆ’ ಎಂದು ಅಳಲು ತೋಡಿಕೊಂಡರು.

‘ಆಟೊ ಚಾಲಕರ ಬವಣೆ ಇದಕ್ಕಿಂತ ಭಿನ್ನವಿಲ್ಲ. ಆಸ್ಪತ್ರೆಗೆ ರೋಗಿಗಳು, ಅವರ ಸಂಬಂಧಿಗಳನ್ನು ಕರೆದೊಯ್ಯಲು ಆಟೊಗಳನ್ನು ಬಳಸುತ್ತಾರೆ. ಪೊಲೀಸರು ದಾರಿ ಮಧ್ಯೆ ನಿಲ್ಲಿಸಿ ಅನಗತ್ಯ ಕಿರುಕುಳ ನೀಡುತ್ತಾರೆ. ದಂಡ ವಿಧಿಸುತ್ತಾರೆ. ದಿನದ ದುಡಿಮೆಯೂ ಮನೆಗೆ ಒಯ್ಯಲು ಆಗುತ್ತಿಲ್ಲ’ ಎಂದು ಆಟೊ ಚಾಲಕ ಅಶೋಕ್ ತಿಳಿಸಿದರು.

‘ನಿತ್ಯ ರೈಲು ನಿಲ್ದಾಣ, ಖರ್ಗೆ ಪೆಟ್ರೋಲ್ ಪಂಪ್‌ ಬಳಿ ಉದ್ಯೋಗಕ್ಕಾಗಿ ನಿಲ್ಲುತ್ತಿದ್ದ ಕಾರ್ಮಿಕರಿಗೂ ಕೆಲಸ ಸಿಗುತ್ತಿಲ್ಲ. ಗ್ರಾಮಗಳಲ್ಲಾದರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವಾದರೂ ಸಿಗುತ್ತಿತ್ತು. ಶಹರದಲ್ಲಿ ಆ ಉದ್ಯೋಗವೂ ಸಿಗುತ್ತಿಲ್ಲ. ಜನರೂ ತಮ್ಮ ಕೆಲಸ ಕಾರ್ಯಗಳಿಗಾಗಿ ಮನೆಗಳಿಗೆ ಕರೆಯುತ್ತಿಲ್ಲ’ ಎಂದು ತಾರಫೈಲ್‌ನ ನಿವಾಸಿ ನೀಲಮ್ಮ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT