ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿಗೆ ಮೂಲವಾದ ರಾಜಕೀಯ ವೈಷಮ್ಯ

ಜೈನಾಪುರ: ಅತಿರೇಕಕ್ಕೆ ಪಂಚಾಯಿತಿ ರಾಜಕೀಯ, ಕಾಳ್ಗಿಚ್ಚಿನಂತೆ ಹಬ್ಬಿದ ಬಾಲಕಿ ಸಾವು,, ಪೊಲೀಸ್‌ ಬಂದೋಬಸ್ತ್‌
Last Updated 3 ಜನವರಿ 2021, 2:43 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನಆಂದೋಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೈನಾಪುರ ಗ್ರಾಮದ ಕಾಂಗ್ರೆಸ್‌ ಹಾಗೂ ಬಿಜೆಪಿಯ ‘ರಾಜಕೀಯ ವೈಷಮ್ಯ’ ಒಂದು ಮುಗ್ದ ಕಂದಮ್ಮನನ್ನೇ ‘ಬಲಿ’ ಪಡೆದಿದೆ. ಮಗುವಿನ ಸಾವು ಕಾಳ್ಗಿಚ್ಚಿನಂತೆ ಸುತ್ತಲಿನ ಗ್ರಾಮಗಳಿಗೂ ಹಬ್ಬಿದೆ. ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಪರಿಸ್ಥಿತಿ ತ್ವೇಷಮಯವಾಗಿದೆ.

ಜೈನಾಪುರದ ರವಿ ತಳವಾರ ಅವರ ಪುತ್ರಿ ಭಾರತಿ (3) ಕೇಂದ್ರ ಕಾರಾಗೃಹದಲ್ಲಿ ಇರುವಾಗಲೇ ತೀವ್ರ ಅಸ್ವಸ್ಥಗೊಂಡಳು. ಶನಿವಾರ ನಸುಕಿನಲ್ಲಿ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಮಗುವಿನ ಸಾವಿನ ಹಿಂದೆಯೇ ಮತ್ತೆ ರಾಜಕೀಯ ವೈಷಮ್ಯ ಹೆಡೆ ಎತ್ತಿದೆ. ಮುಖಂಡರು ಒಬ್ಬರ ಮೇಲೊಬ್ಬರು ದೂರುವ ಚಾಳಿ ಆರಂಭಿಸಿದ್ದಾರೆ.

‘ಮೃತಪಟ್ಟ ಮಗುವಿನ ಚಿಕ್ಕಪ‍್ಪ ಸಂತೋಷ ತಳವಾರ ಎಂಬುವವರು ಈ ಹಿಂದಿನ ಅವಧಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ಈ ಬಾರಿ ಕೂಡ ಕಾಂಗ್ರೆಸ್‌ ಬೆಂಬಲಿತರಾಗಿ ಕಣಕ್ಕೆ ಇಳಿದಿದ್ದರು. ಅವರ ವಿರುದ್ಧ, ದೂರದ ಸಂಬಂಧಿಯೇ ಆದ ರಾಜು ಅವರು ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ರಾಜು ಗೆಲುವು ಸಾಧಿಸಿದ್ದರಿಂದ ಅವರ ಬೆಂಬಲಿಗರ ಸಮೇತ ವಿಜಯೋತ್ಸವ ಮಾಡುತ್ತಿದ್ದರು. ಪರಾಭವಗೊಂಡ ಸಂತೋಷ ಅವರ ಮನೆಯ ಮುಂದೆ ಬಂದು ಪಟಾಕಿ ಸಿಡಿಸುವುದು, ಹಾಡುವುದು, ಕುಣಿಯುವುದು ಆರಂಭಿಸಿದರು. ಆಗ ಹೊರಗೆ ಬಂದ ಸಂತೋಷ, ಅವರ ಅಣ್ಣ ರವಿ ಹಾಗೂ ಮನೆಯ ಹೆಣ್ಣುಮಕ್ಕಳು ಪ್ರಶ್ನಿಸಿದರು. ‘ನೀವು ಗೆದ್ದ ಮೇಲೆ ಇನ್ನೇಕೆ ಹೀಗೆ ಮೂದಲಿಸುತ್ತೀರಿ. ಚುನಾವಣೆ ಮುಗಿಯಿತಲ್ಲ’ ಎಂದು ಸಂತೋಷ ತಕರಾರು ತೆಗೆದರು. ಈ ಸಂದರ್ಭ ಎರಡೂ ಕಡೆಯ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಮಧ್ಯೆ ಹೊಡೆದಾಟ ಆರಂಭವಾಯಿತು. ಇಬ್ಬರು ಹಿರಿಯರ ತಲೆಗೂ ಪೆಟ್ಟಾಗಿದೆ’ ಎಂದು ಗ್ರಾಮದ ಮುಖಂಡರು ತಿಳಿಸಿದರು.

‘ಘಟನೆ ಬಗ್ಗೆ ಮೊದಲು ರಾಜು ಅವರೇ 22 ಜನರ ವಿರುದ್ಧ ದೂರು ನೀಡಿದರು. ಬಳಿಕ ಸಂತೋಷ ಕೂಡ 12 ಮಂದಿ ವಿರುದ್ಧ ಪ್ರತಿ ದೂರು ದಾಖಲಿಸಿದರು. ಪರಸ್ಪರ ದೂರು ದಾಖಲಾಗಿದ್ದರೂ ಪೊಲೀಸರು ಎರಡೂ ಕಡೆಯವರನ್ನು ಕರೆಸಿಲ್ಲ. ಬದಲಾಗಿ ಹೊಡೆತ ತಿಂದ ಸಂತೋಷ, ಅವರ ಕುಟುಂಬದ ಮಹಿಳೆಯರು ಹಾಗೂ ಮಕ್ಕಳನ್ನು ಕರೆದೊಯ್ದಿದ್ದಾರೆ. ಇದಕ್ಕೆ ಬಿಜೆಪಿ ಮಾಜಿ ಶಾಸಕರೊಬ್ಬರು ‘ಒತ್ತಡ’ ಹೇರಿದ್ದಾರೆ’ ಎಂದೂ ಮುಖಂಡರು ದೂರಿದರು.

‘ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಮನೆಯ ಮುಂದೆ ನಡೆದ ಜಗಳ ನೋಡಿ ಎದೆಗುಂದಿತು. ಇದರಿಂದ ಆರೋಗ್ಯ ಮತ್ತಷ್ಟು ಕೆಟ್ಟುಹೋಗಿತ್ತು. ಠಾಣೆಯಲ್ಲಿ ಪೊಲೀಸರು ನನ್ನನ್ನು ಹೊಡೆಯುವುದನ್ನು ನೋಡಿ ಭಾರತಿ ಕಿರಿಚಾಡಿದಳು. ನಮ್ಮನ್ನು ಕೇಂದ್ರ ಕಾರಾಗೃಹಕ್ಕೆ ಹಾಕಿದ ಮೇಲೆ ಮಗಳ ಆರೋಗ್ಯ ತೀವ್ರ ಹದಗೆಟ್ಟು ಹೋಯಿತು’ ಎಂದು ತಾಯಿ ಸಂಗೀತಾ ಮಾಧ್ಯಮದವರ ಮುಂದೆ ದುಃಖ ತೋಡಿಕೊಂಡರು.

ಸಮಾಜದ ಮುಖಂಡರ ತರಾಟೆ: ಬಾಲಕಿ ಮರಣೋತ್ತರ ಪರೀಕ್ಷೆ ಮಾಡಲು ಶನಿವಾರ ಸಂಜೆ ಜಿಮ್ಸ್‌ ಹಿಂಭಾಗದ ಕೊಠಡಿಗೆ ತರಲಾಯಿತು. ಕೋಲಿ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಸೇರಿದರು. ವಿಚಾರಣೆಗಾಗಿ ಸ್ಥಳಕ್ಕೆ ಬಂದ ಡಿವೈಎಸ್ಪಿ ಟಿ.ಜಿ. ದೊಡಮನಿ ಹಾಗೂ ಇತರ ಪೊಲೀಸ್‌ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ ಮುಖಂಡರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಅವರೂ ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದರು.

ನಗರ ಪೊಲೀಸ್‌ ಕಮಿಷನರ್‌ ಎನ್‌.ಸತೀಶಕುಮಾರ, ಡಿಸಿಪಿ ಕಿಶೋರಬಾಬು, ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್ ತಮ್ಮರಾಯ ಪಾಟೀಲ, ಗ್ರಾಮೀಣ ಡಿಎಸ್ಪಿ ಟಿ.ಜಿ. ದೊಡ್ಡಮನಿ, ಸಿಪಿಐ ಶಂಕರಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು.

ಮಗು ಸತ್ತ ಬಗ್ಗೆ ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT