ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದುಳಿದ ವರ್ಗಗಳು ಸಿದ್ದರಾಮಯ್ಯರ ಬೆನ್ನಿಗೆ ನಿಲ್ಲಬೇಕಿದೆ: ತಿಪ್ಪಣಪ್ಪ ಕಮಕನೂರ

ಡಿ.ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ
Published : 20 ಆಗಸ್ಟ್ 2024, 15:24 IST
Last Updated : 20 ಆಗಸ್ಟ್ 2024, 15:24 IST
ಫಾಲೋ ಮಾಡಿ
Comments

ಕಲಬುರಗಿ: ‘ಭೂ ಸುಧಾರಣೆ ಕಾಯ್ದೆ ಜಾರಿ ಸಂದರ್ಭದಲ್ಲಿ ಡಿ.ದೇವರಾಜ ಅರಸು ಅವರಿಗೆ ತೊಂದರೆ ಕೊಟ್ಟವರೇ ಇಂದು ಹಿಂದುಳಿದ ವರ್ಗಗಳ ನಾಯಕ, ಸಿಎಂ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಆರೋಪಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಗರದ ಎಸ್‌.ಎಂ.ಪಂಡಿತ ರಂಗ ಮಂದಿರದಲ್ಲಿ ಮಂಗಳವಾರ ನಡೆದ ಡಿ.ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಸು ನಂತರ ಸಿದ್ದರಾಮಯ್ಯನವರು ರಾಜ್ಯದ ಹಿಂದುಳಿದ ವರ್ಗಗಳ ಬಹುದೊಡ್ಡ ನಾಯಕರಾಗಿದ್ದಾರೆ. ಸಿದ್ದರಾಮಯ್ಯನವರು ಅರಸು ಅವರ ದಾರಿಯಲ್ಲಿಯೇ ನಡೆದು ಈ ನೆಲದ ತಬ್ಬಲಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಪರ ಕೆಲಸ ಮಾಡುತ್ತಿರುವುದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಕಾರಣ ಅವರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಇಡೀ ಹಿಂದುಳಿದ ವರ್ಗ ಅವರ ಬೆನ್ನಿಗೆ ನಿಲ್ಲಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕಾರ್ಮಿಕರ, ಹಿಂದುಳಿದವರ ಪರ ಕೆಲಸ ಮಾಡಿದ ನಮ್ಮ ಕಲಬುರಗಿಯ ಎಸ್‌.ಕೆ.ಕಾಂತಾ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ,‘ಅರಸು ಮೈಸೂರು ರಾಜ ಮನೆತನಕ್ಕೆ ಹತ್ತಿರದ ಸಂಬಂಧಿಯಾಗಿದ್ದರು. ಆದರೂ ಆ ಯಾವ ಅಹಂಕಾರವೂ ಅವರಲ್ಲಿರಲಿಲ್ಲ. ಸದಾ ಹಿಂದುಳಿದ ವರ್ಗಗಳ ಏಳಿಗೆಯ ಕುರಿತು ಚಿಂತನೆ ಮಾಡುತ್ತಿದ್ದರು. ಕ್ರಾಂತಿಕಾರಕ ಸಾಮಾಜಿಕ ಬದಲಾವಣೆಗಳನ್ನು ತಂದರು’ ಎಂದು ಹೇಳಿದರು.

‘ಅರಸು ಅವರ ಮೇಲೆ ಇಂದಿರಾಗಾಂಧಿ ಅವರ ಪ್ರಭಾವ ಗಾಢವಾಗಿತ್ತು. ಹಲವರ ವಿರೋಧ ಲೆಕ್ಕಿಸದೇ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಭೂರಹಿತರಿಗೆ ಆಶಾಕಿರಣವಾಗಿದ್ದಾರೆ. ಅವರು ಹಾವನೂರು ಆಯೋಗ ರಚಿಸದಿದ್ದರೆ ಹಲವು ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ’ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭು ದೊರೆ ಮಾತನಾಡಿ, ‘ಇಲಾಖೆಗೆ ಸೇರಿದ ಜಿಲ್ಲೆಯ ವಸತಿ ನಿಲಯಗಳಲ್ಲಿ 15 ಸಾವಿರ ವಿದ್ಯಾರ್ಥಿಗಳಿದ್ದಾರೆ. ನೇರ ನಗದು ವರ್ಗಾವಣೆ ವ್ಯವಸ್ಥೆಯ ಮೂಲಕ 50 ಸಾವಿರ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನ ಜಮಾ ಮಾಡಲಾಗಿದೆ’ ಎಂದು ತಿಳಿಸಿದರು.

ಲೇಖಕಿ ಚಂದ್ರಕಲಾ ಬಿದರಿ ಉಪನ್ಯಾಸ ನೀಡಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ಮೇಯರ್ ಯಲ್ಲಪ್ಪ ನಾಯ್ಕೋಡಿ, ಜೆಸ್ಕಾಂ ಪ್ರಧಾನ ವ್ಯವಸ್ಥಾಪಕ ಆಶಪ್ಪ ಪೂಜಾರಿ, ಸೇಡಂ ಉಪವಿಭಾಗಾಧಿಕಾರಿ ಪ್ರಭು ರೆಡ್ಡಿ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಸಮಿತಿ ಅಧ್ಯಕ್ಷ ಮಹಾಂತೇಶ ಎಸ್.ಕೌಲಗಿ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಆನಂದ ವಾರಿಕ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಕುಮಾರ ಕೆ.ಯಾದವ ಹಾಜರಿದ್ದರು.

ದೇವರಾಜ ಅರಸು ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ದೇವರಾಜ ಅರಸು ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಭಾವಚಿತ್ರದ ಮೆರವಣಿಗೆಯಲ್ಲಿ ನೃತ್ಯ ಪ್ರದರ್ಶಿಸಿದ ಗೋಂಧಳಿ ಸಮಾಜ ಸುಧಾರಣಾ ಸಂಘದ ಕಲಾವಿದರು
ಭಾವಚಿತ್ರದ ಮೆರವಣಿಗೆಯಲ್ಲಿ ನೃತ್ಯ ಪ್ರದರ್ಶಿಸಿದ ಗೋಂಧಳಿ ಸಮಾಜ ಸುಧಾರಣಾ ಸಂಘದ ಕಲಾವಿದರು
ಅದ್ದೂರಿ ಮೆರವಣಿಗೆ
ಜಯಂತಿ ಪ್ರಯುಕ್ತ ನಗರದ ಎಸ್‌ವಿಪಿ ವೃತ್ತದಿಂದ ಎಸ್‌.ಎಂ.ಪಂಡಿತ ರಂಗ ಮಂದಿರದವರೆಗೂ ಡಿ.ದೇವರಾಜ ಅರಸುರವರ ಭಾವಚಿತ್ರದ ಮೆರವಣಿಗೆ ನಡೆಯಿತು. ಸಾರೋಟದಲ್ಲಿ ಅರಸುರವರ ಭಾವಚಿತ್ರ ಇರಿಸಲಾಗಿತ್ತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಬಾಜಾ–ಭಜಂತ್ರಿ ಡೊಳ್ಳು ಕುಣಿತ ಲಂಬಾಣಿ ಮಹಿಳೆಯರ ನೃತ್ಯ ಗಮನಸೆಳೆಯಿತು. ಗೋಂಧಳಿ ಸಮಾಜದವರು ನೃತ್ಯ ಪ್ರದರ್ಶಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆ ಉದ್ದಕ್ಕೂ ಕೋಲೆ ಬಸವ ಪೋತುರಾಜರು ಕಲೆ ಪ್ರದರ್ಶಿಸಿದರು. ದರ್ವೇಶಿಗಳು ಗಜಲ್‌ಗಳನ್ನು ಹಾಡುತ್ತ ಸಾಗಿದರು. ವಸತಿ ಶಾಲೆ ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತಮಟೆಯ ಲಯಕ್ಕೆ ಹೆಜ್ಜೆ ಹಾಕಿದರು. ದೇವರಾಜ ಅರಸು ಪರ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT