ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳೂರ್ಗಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ: ಸೌಲಭ್ಯಗಳಿಲ್ಲದೆ ಜನರ ನಿತ್ಯ ಪರದಾಟ

ಸರಿಯಾಗಿ ಬಳಕೆಯಾಗದ ಅನುದಾನ
Last Updated 18 ಫೆಬ್ರುವರಿ 2020, 10:38 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಗಡಿ ಗ್ರಾಮವಾದ ಬಳೂರ್ಗಿ ಗ್ರಾಮವು ಪಂಚಾಯತಿ ಕೇಂದ್ರ ಸ್ಥಾನವಾಗಿದೆ. ಗ್ರಾಮಸ್ಥರು ಮೂಲ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಸಾರ್ವಜನಿಕ ಶೌಚಾಲಯ ನಿರ್ಮಿಸಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನೀಡಿರುವ ಅನುದಾನ ಸರಿಯಾಗಿ ಬಳಕೆ ಆಗಿಲ್ಲ.

ಗ್ರಾಮದ ನಂದಿ ಬಸವೇಶ್ವರ ಕಲ್ಯಾಣ ಮಂಟಪ ಹಿಂದಿನ ಭಾಗದ ರಸ್ತೆ ಸಂಪೂರ್ಣ ಹಾಳಾಗಿದೆ. ಇದು ಗ್ರಾಮದ ಪ್ರಮುಖ ರಸ್ತೆಯಾಗಿದೆ. ಸಂಚರಿಸಲು ಸಾಧ್ಯವಾಗದಷ್ಟು ಹಾಳಾಗಿರುವುದರಿಂದ ದೇವಸ್ಥಾನಕ್ಕೆ ಹೋಗಿ ಬರಲು ಜನರಿಗೆ ತೊಂದರೆ ಆಗುತ್ತಿದೆ. ರಸ್ತೆಯಲ್ಲಿ ಅಲ್ಲಲ್ಲಿ ಚರಂಡಿ ನೀರು ತುಂಬಿಕೊಂಡಿದೆ. ಅದರಲ್ಲಿಯೇ ಹಂದಿಗಳು ವಾಸ ಮಾಡುತ್ತವೆ. ರೋಗ ಹರಡುವ ಭೀತಿ ಉಂಟಾಗಿದೆ.

ಹಾಗೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಅಗಸಿಯವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಲ್ಲಿ ನಡೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಬಳೂರ್ಗಿ ಗ್ರಾಮವು ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಆಯ್ಕೆಯಾಗಿತ್ತು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೆ ಅನುದಾನ ಎತ್ತಿ ಹಾಕಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಾರೆ.

ಗ್ರಾಮದ ಕೆರೆಯಲ್ಲಿ ಮತ್ತು ಫಲಲಾಲ್ ಸಿಂಗ್ ತಾಂಡಾಕ್ಕೆ ತೆರಳುವ ರಸ್ ತೆಬದಿಯಲ್ಲಿ ಸುಮಾರು ₹8 ಲಕ್ಷ ಮತ್ತು ಹೊಸಕೆರೆಯಲ್ಲಿ ₹4 ಲಕ್ಷ ದಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅವು ಉದ್ಘಾಟನೆ ಆಗಿಲ್ಲ ಮತ್ತು ಅವುಗಳಿಗೆ ಬೀಗ ಜಡಿಯಲಾಗಿದೆ.

ಈ ಕುರಿತು ಜಿಲ್ಲಾ ಪಂಚಾಯತಿ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನಬಿಲಾಲ ಗಬಸಾವಳಗಿ ಅವರನ್ನು ವಿಚಾರಿಸಿದಾಗ, ‘ಆ ಗ್ರಾಮದ ಸಹಾಯಕ ಎಂಜಿನಿಯರ್ ಮೋಗರೆ ಅವರನ್ನು ವಿಚಾರಿಸಿ ನೋಡಿ, ನಾನು ಹೊಸದಾಗಿ ಬಂದಿದ್ದೇನೆ’ ಎಂದು ಹೇಳಿ ಜಾರಿಕೊಂಡರು. ಮೋಗರೆ ಅವರಿಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ ಆಫ್ ಆಗಿತ್ತು.

ಗ್ರಾಮದ ಹಳೆಯ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಪರಿಕರಗಳನ್ನು ತಂದು ಇಟ್ಟು ಎರಡು ವರ್ಷಗಳಾದರೂ ಉಪಯೋಗಿಸದೆ ಇರುವುದರಿಂದ ಸಂಪೂರ್ಣ ಹಾಳಾಗಿ ಹೋಗಿದೆ. ಹೀಗಾಗಿ ಸರ್ಕಾರಕ್ಕೆ₹5 ಲಕ್ಷ ಹಾನಿಯಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ಲಿಯಾಖತ್ ಅವರನ್ನು ವಿಚಾರಿಸಿದಾಗ, ‘ತಾಲ್ಲೂಕಿನಲ್ಲಿ ಒಟ್ಟು 23 ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿ ಹೋಗಿದ್ದು, ದುರಸ್ತಿಗಾಗಿ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ’ ಎಂದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಹೊಸ ಕೋಣೆ ಕಳಪೆಯಾಗಿದೆ ಎಂದು ಶಾಲೆಗೆ ಇನ್ನೂ ಹಸ್ತಾಂತರ ಆಗಿಲ್ಲ. ಹೀಗಾಗಿ ಮಕ್ಕಳಿಗೆ ತೊಂದರೆ ಆಗುತ್ತದೆ.

ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿ ಸರಿಪಡಿಸಬೇಕು. ಅಕ್ರಮ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಅಣವೀರಯ್ಯಾ ಮಠಪತಿ ಹಾಗೂ ಗಣಪತಿ ಪುಲಾರಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT