ಶುಕ್ರವಾರ, ಫೆಬ್ರವರಿ 28, 2020
19 °C
ತಂಗುದಾಣ, ಶೌಚಾಲಯವಿಲ್ಲ; ಬಸ್ ನಿಲ್ದಾಣ ನಿರ್ಮಿಸಲು ಜನರ ಆಗ್ರಹ

ಅವ್ಯವಸ್ಥೆಯ ತಾಣ; ಬಂಬೂ ಬಜಾರ್ ಬಸ್ ನಿಲ್ದಾಣ

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಡಾಂಬರು ಕಾಣದ ಆವರಣ, ಕಾಣಸಿಗದ ಬಸ್ ವೇಳಾಪಟ್ಟಿ, ಹಾಳಾದ ಬೀದಿ ದೀಪಗಳು, ತಂಗುದಾಣವಿಲ್ಲದೇ ಬಿರು ಬಿಸಿಲಿನಲ್ಲಿ ಪರದಾಡುವ ಜನ, ದೂಳಿನ ಮಜ್ಜನದಲ್ಲಿ ಮುಳುಗುವ ಬೀದಿ ಬದಿ ವ್ಯಾಪಾರಿಗಳು, ಶೌಚಾಲಯ ಇಲ್ಲವೇ ಇಲ್ಲ... 

ಇವು ಇಲ್ಲಿನ ಫಿಲ್ಟರ್‌ಬೆಡ್‌ ರಸ್ತೆಯ ಬಂಬೂ ಬಜಾರ್‌ನಲ್ಲಿರುವ ಬಸ್ ನಿಲ್ದಾಣದಲ್ಲಿ ಕಂಡು ಬರುವ ದೃಶ್ಯಗಳು.

ಇಲ್ಲಿ ಬಸವಕಲ್ಯಾಣ, ಗಣಜಲಖೇಡ, ಕೇರಿ ಅಂಬಲಗಾ, ನರೋಣ, ಕಮಲಾಪುರ, ಲಿಂಗನ ವಾಡಿ, ಸಯ್ಯದ್ ಚಿಂಚೋಳಿ, ಝಮಗಾ, ಅಷ್ಟಗಾ,  ಕುಮಸಗಿ, ಹಂಗರಗಿ, ಧರುಣಾ ಸೇರಿ 30ಕ್ಕೂ ಹೆಚ್ಚು ಊರುಗಳಿಗೆ ಹೋಗುವ ಬಸ್‌ಗಳು ಇಲ್ಲಿ ಬಂದು ನಿಲ್ಲುತ್ತವೆ. ಪ್ರತಿ ದಿನ ವ್ಯಾಪಾರ, ಶಿಕ್ಷಣ, ಆಸ್ಪತ್ರೆ, ಸರ್ಕಾರಿ ಕಚೇರಿ ಕೆಲಸ ಹೀಗೆ ವಿವಿಧ ಕಾರಣಗಳಿಗಾಗಿ ಓಡಾಡುವ ಈ ಗ್ರಾಮಗಳ ಜನರಿಂದ ಈ ಬಸ್ ನಿಲ್ದಾಣ ಸದಾ ಗಿಜಿಗುಡುತ್ತಿರುತ್ತದೆ. ಆದರೆ ಇಲ್ಲಿ ಪ್ರಯಾಣಿಕರಿಗಾಗಿ ಕನಿಷ್ಠ ಸೌಲಭ್ಯಗಳೂ ಇಲ್ಲ.

ಅಸಲಿಗೆ, ಇದು ಸರ್ಕಾರದ ಅಧಿಕೃತ ಬಸ್ ನಿಲ್ದಾಣವಲ್ಲ. ಇಲ್ಲಿನ ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಜಾಗದ ಮಾಲೀಕರು ಬಸ್‌, ಆಟೊ ಮತ್ತು ಟೆಂಪೊಗಳಿಗೆ ಇಲ್ಲಿ ನಿಲ್ಲಲು ಅನುವು ಮಾಡಿ ಕೊಟ್ಟಿದ್ದಾರೆ. ನಿತ್ಯ ನೂರಾರು ಜನರು ಓಡಾಡುವ ಈ ಬಸ್ ನಿಲ್ದಾಣದಲ್ಲಿ ಸೌಕರ್ಯ ಒದಗಿಸುವ ಉತ್ಸುಕತೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಯಾರೂ ತೋರಿಲ್ಲ. 

‘ಎಪಿಎಂಸಿ, ಸೂಪರ್ ಮಾರ್ಕೆಟ್ ಸಮೀಪ ಇರುವುದರಿಂದ ಗ್ರಾಮಸ್ಥರು ಇಲ್ಲಿಯೇ ಇಳಿದು ಕೊಳ್ಳುತ್ತಾರೆ. ಒಂದು ವೇಳೆ ಈ ಜಾಗವು ಕಟ್ಟಡ ನಿರ್ಮಾಣಕ್ಕೆ ಅಥವಾ ಬೇರೆ ಕಾರ್ಯಕ್ಕೆ ಬಳಕೆಯಾದರೆ, ಇಲ್ಲಿ ಬಸ್‌ ನಿಲುಗಡೆ ಮಾಡಲು ಅವಕಾಶ ಸಿಗುವುದಿಲ್ಲ. ಆಗ ಬಸ್‌ನ್ನು ರಸ್ತೆಯಲ್ಲೇ ನಿಲುಗಡೆ ಮಾಡಬೇಕಾಗುತ್ತದೆ. ಈ ಭಾಗದಲ್ಲಿ ಶಾಶ್ವತವಾಗಿ ಬಸ್ ನಿಲ್ದಾಣ ನಿರ್ಮಿಸಿದರೆ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ’ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಅಧಿಕಾರಿ.  

ಡಾಂಬರೀಕರಣ ಇಲ್ಲದ ಇಲ್ಲಿನ ಆವರಣವು ಮಳೆಯಾದಾಗಲೆಲ್ಲ, ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ವಾಹನಗಳ ಸಂಚಾರದಿಂದಾಗಿ ದೂಳು ಎದ್ದು, ಸುತ್ತಮುತ್ತಲಿನ ವ್ಯಾಪಾರಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. 

ತಂಗುದಾಣವಿಲ್ಲ

ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಒಂದು ತಂಗುದಾಣ ನಿರ್ಮಿಸಿಲ್ಲ. ಇದರಿಂದಾಗಿ ಜನರು ಬಿರು ಬಿಸಿಲಿನಲ್ಲಿ ನಿಂತು ಕೊಂಡು ಬಸ್‌ಗಳಿಗೆ ಕಾಯುವ ಪರಿಸ್ಥಿತಿ ಬಂದೊದಗಿದೆ. ವಿಶ್ರಾಂತಿಗಾಗಿ ನಿಲ್ದಾಣದ ಸುತ್ತಮುತ್ತ ಇರುವ ವಾಣಿಜ್ಯ ಸಂಕೀರ್ಣಗಳ ಆವರಣ ಅವಲಂಬಿಸಬೇಕಾಗಿದೆ. ಶುದ್ಧ ನೀರಿನ ಘಟಕವಿಲ್ಲದೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. 

ಶೌಚಾಲಯ ವ್ಯವಸ್ಥೆಯಿಲ್ಲ

ಇಲ್ಲಿ ಶೌಚಾಲಯ ಇಲ್ಲದ ಕಾರಣ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ತೊಂದರೆ ಅನುಭವಿಸು ವಂತಾಗಿದೆ. ಬಸ್ ನಿಲ್ದಾಣದ ಸುತ್ತಮುತ್ತಲಿನ ವಾತಾವರಣವೇ ಬಯಲು ಶೌಚವಾಗಿ ಮಾರ್ಪಟ್ಟಿದೆ. ಇಲ್ಲಿನ ಗಬ್ಬು ವಾಸನೆಯಿಂದಾಗಿ ಬಸ್ ಚಾಲಕರು, ಪ್ರಯಾಣಿಕರು ಸಂಕಟ ಅನುಭವಿಸುವಂತಾಗಿದೆ. 

ಹದಗೆಟ್ಟ ರಸ್ತೆಗಳು

ಇಲ್ಲಿನ ರಸ್ತೆಗಳು ಸಂಪೂರ್ಣ ವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರದಿಂದ ಉಂಟಾಗುವ ದೂಳಿನಿಂದ ಜನರು ಬೇಸತ್ತು ಹೋಗಿದ್ದಾರೆ. ಬಂಬೂ ಬಜಾರ್‌ನಿಂದ ತಾಜ್‌ ಸುಲ್ತಾನಪುರ ಮತ್ತು ಗಂಜ್‌ಗೆ ಹೋಗುವ ರಸ್ತೆಗಳು ಸಂಪೂರ್ಣವಾಗಿ ತಗ್ಗು ಗುಂಡಿಗಳಿಂದ ತುಂಬಿ ಹೋಗಿದೆ. ಅವೈಜ್ಞಾನಿಕ ರಸ್ತೆ ಉಬ್ಬು ಗಳಿಂದ ವಾಹನ ಸವಾರರು ತೊಂದರೆ ಅನುಭ ವಿಸುತ್ತಿದ್ದಾರೆ.  ಇತ್ತೀಚೆಗೆ ಬಸ್ ನಿಲ್ದಾಣದ ಸಮೀಪ ಸಿಸಿ ರಸ್ತೆ ಕಾಮಗಾರಿ ನಡೆದದ್ದು ಬಿಟ್ಟರೆ ಇಲ್ಲಿ ಯಾವ ಕಾಮಗಾರಿಯೂ ನಡೆದಿಲ್ಲ.

ಸುತ್ತಮುತ್ತಲಿನ ಬೀದಿ ದೀಪಗಳು ಹಾಳಾಗಿದ್ದು, ರಾತ್ರಿ ಆಗುತ್ತಿದ್ದಂತೆಯೇ ದಟ್ಟ ಕತ್ತಲೆ ಯಿಂದ ನಿಲ್ದಾಣದ ಸುತ್ತಮುತ್ತ ಜನರು ಓಡಾಡಲು ಹೆದರು ವಂತಾಗಿದೆ. ಅಲ್ಲದೇ ಬೀದಿ ನಾಯಿಗಳು ಇಲ್ಲಿ ಬೀಡು ಬಿಟ್ಟಿ ರುತ್ತವೆ. ಸದ್ಯಕ್ಕೆ ಇಲ್ಲಿ ಶೌಚಾಲಯ, ತಂಗು ದಾಣ, ಶುದ್ಧ ನೀರಿನ ಘಟಕವಾದರೂ ನಿರ್ಮಿಸ ಬೇಕು ಎಂಬುದು ಜನರ ಒತ್ತಾಯ.  

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಈ ಭಾಗದ ಲ್ಲೊಂದು ಸುಸಜ್ಜಿತ ಬಸ್ ನಿಲ್ದಾಣ ಆಗಬೇಕಿತ್ತು. ಆದರೆ, ನಿರ್ಲಕ್ಷ್ಯದಿಂದ ಅದು ಸಾಧ್ಯವಾಗಿಲ್ಲ. ಸರ್ಕಾರ ಕೂಡಲೇ ಈ ಭಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಿ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು