ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜ ವಿಘಟನೆಗೆ ಮಠಾಧಿಪತಿಗಳೂ ಕಾರಣ: ಸಾಹಿತಿ ಬಸವರಾಜ ಸಾದರ

ರಾಜಬೀದಿ, ರಾಜತೇಜ, ಭಕ್ತಿಪ‍ಕ್ಷ ತಾರಕ ಮಂತ್ರಗಳಾಗಲಿ: ಹಿರಿಯ ಸಾಹಿತಿ ಬಸವರಾಜ ಸಾದರ ಅಭಿಮತ
Published 14 ಮೇ 2024, 9:08 IST
Last Updated 14 ಮೇ 2024, 9:08 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜಬೀದಿ, ರಾಜತೇಜ ಹಾಗೂ ಭಕ್ತಿ ಪ‍ಕ್ಷ ಎಂಬ ಪದಗಳನ್ನು ಬಳಸಿ ಬಸವಣ್ಣವರು ವಚನಗಳ ಮೂಲಕ ಪ್ರಜಾತಾಂತ್ರಿಕ ವ್ಯವಸ್ಥೆ ಹೇಗಿರಬೇಕು ಎಂಬುದರ ಕಲ್ಪನೆ ಕೊಟ್ಟಿದ್ದಾರೆ. ಇಂದು ಹಾಳಾಗಿ ಹೋಗಿರುವ ಪ್ರಜಾತಾಂತ್ರಿಕ ವ್ಯವಸ್ಥೆ ಸುಧಾರಣೆಗೆ ಈ ಮೂರು ಶಬ್ದಗಳು ತಾರಕ ಮಂತ್ರಗಳಾಬಲ್ಲವು’ ಎಂದು ಸಾಹಿತಿ ಬಸವರಾಜ ಸಾದರ ಅಭಿಪ್ರಾಯಪಟ್ಟರು.

ನಗರದ ಜಗತ್‌ ವೃತ್ತದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳು ಮತ್ತು ಕಾಯಕ ಶರಣರ‌ ಒಕ್ಕೂಟದಿಂದ 891ನೇ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ‌ಅವರು ‘ವರ್ತಮಾನಕ್ಕೆ ಬಸವಣ್ಣ’ ಕುರಿತು ಅವರು ಮಾತನಾಡಿದರು.

‘ರಾಜಬೀದಿ ಎಂಬುದು ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವವೇ ಆಗಿದೆ. ‘ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟರೆ’ ವಚನದ ಸಾರವಾಗಿ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಕಲಿಸಿಕೊಟ್ಟಿದ್ದಾನೆ. ಪ್ರಜಾತಾಂತ್ರಿಕ ತತ್ವಗಳನ್ನು ಚಾಚೂತಪ್ಪದೇ ಜಾರಿಗೊಳಿಸುವ ಎದೆಗಾರಿಕೆಯನ್ನು ಬಸವಣ್ಣ ರಾಜತೇಜ ಎಂದು ಗುರುತಿಸಿದ್ದಾನೆ. ಭಕ್ತಿ ಪಕ್ಷ ಎಂಬುದು ಬಸವಣ್ಣನ ದೃಷ್ಟಿಯಲ್ಲಿ ಸಮಾಜ ಸೇವೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯಕ್ತಿ ನೆಲೆ, ಸಾಮಾಜಿಕ ನೆಲೆ ಹಾಗೂ ಪಕ್ಷದ ನೆಲೆಯಲ್ಲಿ ಹೇಗೆ ನಿರ್ವಹಿಸಬೇಕು ಎಂಬುದನ್ನು 12ನೇ ಶತಮಾನದಲ್ಲೇ ತಿಳಿಸಿದ್ದಾನೆ. ಅದರಂತೆ ನಡೆಯುವ ಕೆಲಸವಾಗಬೇಕಿದೆ’ ಎಂದು ಪ್ರತಿಪಾದಿಸಿದರು.

ಅಲ್ಲದೇ, ‘ರಾಜಬೀದಿಯಲ್ಲಿ ಒಳಗೊಳ್ಳುವಿಕೆಯ ಸಂಸ್ಕೃತಿ, ರಾಜತೇಜದಲ್ಲಿ ಹೇಳಿರುವ ನ್ಯಾಯ ನಿಷ್ಠುರತೆ, ದಾಕ್ಷಿಣ್ಯಕ್ಕೆ ಬಾಗದ, ಸಮಾಜಕ್ಕೆ ವಿರೋಧ ಎನಿಸಿದರೂ ಸತ್ಯ ಪಥದಲ್ಲಿ ನಡೆಯುವ ಕಾಠಿಣ್ಯ ಯಾವ ರಾಜಕಾರಣಿಗಳಲ್ಲಿದೆ?’ ಎಂದೂ ಅವರು ಪ್ರಶ್ನಿಸಿದರು.

ಮಠಾಧಿಪತಿಗಳೂ ಕಾರಣ

‘ನಮ್ಮ ಸಮಾಜ ಛಿದ್ರ–ವಿಛಿದ್ರವಾಗಲು ರಾಜಕಾರಣದಷ್ಟೇ ನಮ್ಮ ಕೆಲವು ಮಠಾಧಿಪತಿಗಳೂ ಕಾರಣ. ವಚನ ಸಾಹಿತ್ಯ ಓದದ, ಧಾರ್ಮಿಕ ಪ್ರವೃತ್ತಿ ಬೆಳೆಸಿಕೊಳ್ಳದ, ಪೀಠಕ್ಕೆ ಅಂಟಿ ಕುಳಿತ ಕೆಲವು ಸ್ವಾಮೀಜಿಗಳು ಸಮಾಜ ಕಂಟಕರಾಗಿದ್ದಾರೆ. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ ಅಂಥವರ ಎಲ್ಲ ಶ್ರಮಿಜೀವಿಗಳನ್ನು ಒಗ್ಗೂಡಿಸಿ ನಾವೆಲ್ಲ ಒಂದು ಎಂದು ಬಸವಣ್ಣ ಹೇಳಿದರು. ಆದರೆ ಇಂದು ಕೆಲವು ಮಠಾಧಿಪತಿಗಳು ಜಾತಿ–ಉಪಜಾತಿಗಳ ಹೆಸರಲ್ಲಿ ಒಡೆದು, ಒಂದೊಂದು ಮಠಕ್ಕೊಬ್ಬ ಸ್ವಾಮೀಜಿಗಳನ್ನು ಕೂರಿಸಿದರು. ಆ ಉಪಜಾತಿಗಳ ಮೂಲ ಮಠಾಧಿಪತಿಗಳು ಈಗ ವೈರಿಗಳಾಗಿ ಬಿಟ್ಟಿದ್ದಾರೆ. ಇನ್ನೊಬ್ಬ ಸ್ವಾಮೀಜಿ ಒಂದು ಪ್ರಮುಖ ಸಮಾಜಕ್ಕೆ ಮೀಸಲಾತಿಗಾಗಿ ರಾಜ್ಯದ ತುಂಬೆಲ್ಲ ಹೋರಾಟ ಮಾಡುತ್ತಾರೆ. ಇವೆಲ್ಲವೂ ಬಸವಣ್ಣ ಹೇಳಿದ್ದಕ್ಕೆ ವಿರುದ್ಧವಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯುವ ಜನರಿಗೆ ಹಣ, ಐಷಾರಾಮಿ ಸಂಸ್ಕೃತಿಯಷ್ಟೇ ಬೇಕಿದೆ. ವರ್ತಮಾನದ ಜಗತ್ತು ಅದನ್ನು ಪೂರೈಸುತ್ತಿದೆ. ಬಸವಣ್ಣ–ಬುದ್ಧ–ಮಹಾವೀರವೆಲ್ಲ ಯಾಕೆ ಬೇಕು ಎಂಬ ಮನೋಭಾವ ಬಂದಿದೆ. ಹೀಗಾಗಿ ನಾವೆಲ್ಲ ಸೇರಿ ಯುವಜನರನ್ನು ಜಾಗೃತಗೊಳಿಸಬೇಕಿದೆ. ಎಕ್ಸ್‌ಕ್ಲೂಸಿವ್‌ ಕ್ರೌರ್ಯಕ್ಕೆ ವಿರುದ್ಧವಾಗಿ ಒಳಗೊಳ್ಳುವ ಸಂಸ್ಕೃತಿಯನ್ನು ಬೆಳೆಸಿದ ಬಸವಣ್ಣನವರ ತತ್ವ ಇಂದು ನಾವೆಲ್ಲ ಆಚರಿಸಬೇಕಿದೆ. ನುಡಿದಂತೆ ಕನಿಷ್ಠ ಅರ್ಧದಷ್ಟಾದರೂ ನಡೆಯಬೇಕಿದೆ’ ಎಂದರು.

ಎಚ್.ಕೆ.ಇ. ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಕೆ.ಎ.ಕಲಬುರಗಿ ಷಟಸ್ಥಳ ಧ್ವಜಾರೋಹಣ ನಡೆಸಿದರು. ಭಾಲ್ಕಿಯ ಹಿರೇಮಠದ ಮಹಾಲಿಂಗ ‌ಸ್ವಾಮೀಜಿ ಸಾನ್ನಿಧ್ಯ‌ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆರ್‌.ಜಿ.ಶೆಟಗಾರ ಅಧ್ಯಕ್ಷತೆ ವಹಿಸಿದ್ದರು. ಶಾಮರಾವ ಪ್ಯಾಟಿ ಮಾತನಾಡಿದರು.

ಕಾಶೀರಾಯ ನಂದೂರಕರ, ನೀಲಕಂಠ ಜಮಾದಾರ, ಎಸ್.ಎ.ನಿಂಗಪ್ಪ, ಶೇಖರ‌ ಮಾಲೀಪಾಟೀಲ, ಚಿತ್ರಶೇಖರ ಕೇಸೂರ‌ ವೇದಿಕೆಯಲ್ಲಿದ್ದರು. ಲಕ್ಷ್ಮಣ ಹೂಗಾರ ಹಾಗೂ ಸಂಗಡಿಗರಿಂದ ವಚನ ಗಾಯನ ನಡೆಸಿಕೊಟ್ಟರು. ಶಾರದಾ ಜಂಬಲದಿನ್ನಿ ವಚನ ಹಾಡಿದರು. ಜಯಶ್ರೀ ಚಟ್ನಳ್ಳಿ ನಿರೂಪಿಸಿದರು. ಭಗವಂತರಾವ ವಂದಿಸಿದರು.

‘ಕಾಯಕ ವಿಶ್ವವಿದ್ಯಾಲಯ ಸ್ಥಾಪಿಸಲಿ’

‘ಬಸವಣ್ಣನವರನ್ನು ಪ್ರಧಾನಿ ಆದಿಯಾಗಿ ಎಲ್ಲ ರಾಜಕಾರಣಿಗಳೂ ಸ್ಮರಿಸುತ್ತಾರೆ. ಆದರೆ ಬಸವಣ್ಣನವರಿಗೆ ಅವರೆಲ್ಲ ಏನು ಮಾಡಿದ್ದಾರೆ? ಏನೂ ಇಲ್ಲ. ಬಸವಣ್ಣನ ಪ್ರತಿಮೆ ಬೇಡ ಮಂದಿರಗಳೂ ಬೇಡ. ಬಸವಣ್ಣ ಹಾಗೂ ಇತರ ಶರಣರು ಪ್ರತಿಪಾದಿಸಿದ ಒಂದು ಕಾಯಕ ವಿಶ್ವವಿದ್ಯಾಲಯವನ್ನು ಕಟ್ಟಬೇಕು. ಮೂಲ ಉದ್ಯೋಗಗಳನ್ನು ಯಥಾವತ್ ಕಲಿಸುವುದು ಅದರ ಆಶಯವಾಗಬೇಕು’ ಎಂದು ಬಸವರಾಜ ಸಾದರ ಪ್ರತಿಪಾದಿಸಿದರು. ‘ಸಮಾಜ ಒಗ್ಗೂಡಿಸುವುದು ಇಂದಿನ ತುರ್ತು’: ‘ರಾಜಕಾರಣದ ಪ್ರವೇಶದಿಂದ ಸಮಾಜ ಛಿದ್ರ–ಛಿದ್ರವಾಗಿದೆ. ನಮ್ಮ ಸಮಾಜದ ಸಂಸ್ಕೃತಿಯೇ ಕಳೆದು ಹೋಗಿದೆ. ಸಮಾಜ ಒಗ್ಗೂಡಿಸುವ ಹಾಗೂ ಸಮಾಜದ ಯುವಜನರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಲು ನಾವೆಲ್ಲ ಶ್ರಮಿಸಬೇಕಿದೆ’ ಎಂದು ಎಚ್‌.ಕೆ.ಇ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಪ್ರತಿಪಾದಿಸಿದರು. ‘ರಾಜಕೀಯ ಹಸ್ತಕ್ಷೇಪದಿಂದ ನಮ್ಮ ಸಮಾಜ ಕೆಡುತ್ತದೆ. ಅದು ಆಗದಂತೆ ನೋಡಿಕೊಳ್ಳಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT