ಕಲಬುರಗಿ: ‘ಭಾರತದ ದೃಷ್ಟಿಕೋನ ಇಟ್ಟುಕೊಂಡು ನವದೆಹಲಿಯಲ್ಲಿ ದೊಡ್ಡ–ದೊಡ್ಡವರನ್ನು ಸೇರಿಸಿ ಮೂರು ದಿನಗಳ ಕಾಲ ಬಸವ ಸಮ್ಮೇಳನ ಆಯೋಜಿಸಿದರೆ ಅದೊಂದು ಐತಿಹಾಸಿಕ ಕಾರ್ಯವಾಗುತ್ತದೆ. ಅದಕ್ಕೆ ಅರವಿಂದ ಜತ್ತಿ ಮನಸ್ಸು ಮಾಡಬೇಕು’ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಸಲಹೆ ನೀಡಿದರು.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ‘ಡಾ.ಬಿ.ಡಿ.ಜತ್ತಿ ಸಂಶೋಧನಾ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಈ ಸಮ್ಮೇಳನ ಅರವಿಂದ ಜತ್ತಿ ಅವರಿಂದ ಸಾಕಾರವಾಗಬಲ್ಲದು. ಅರವಿಂದರ ಬೆನ್ನಿಗೆ ಬಿ.ಡಿ.ಜತ್ತಿ ಮಗ ಎಂಬ ಬಲವಿದೆ. ಅದರಿಂದ ಪ್ರಧಾನಿ, ರಾಷ್ಟ್ರಪತಿ ಭವನದ ಪ್ರವೇಶ ಸುಲಭವಾಗತ್ತದೆ. ಈ ಸಮ್ಮೇಳನ ನಡೆದರೆ ಬಿ.ಡಿ.ಜತ್ತಿ ಅವರಿಗೂ ಗೌರವ ಸಲ್ಲಿದಂತಾಗುತ್ತದೆ’ ಎಂದರು.
ಬಸವಲಿಂಗ ಪಟ್ಟದ್ದೇವರ ಆಶಯದ ಕುರಿತು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾಡಿ, ‘ಈ ವರ್ಷ ಬಸವ ಸಮಿತಿಯ ವಜ್ರಮಹೋತ್ಸವ ಆಚರಿಸಲಾಗುತ್ತಿದೆ. ವರ್ಷವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ದೆಹಲಿಯಲ್ಲಿ ಬಸವ ಸಮ್ಮೇಳನ ರೂಪಿಸಲಾಗುವುದು. ಅಲ್ಲಿ 10 ವಿದೇಶಿ ಭಾಷೆಗಳಿಗೆ ಅನುವಾದವಾಗಿರುವ ವಚನಗಳ ಕೃತಿಗಳನ್ನು ಆ ರಾಷ್ಟ್ರಗಳ ಪ್ರತಿನಿಧಿಗಳನ್ನು ಆಹ್ವಾನಿಸಿ, ರಾಷ್ಟ್ರಪತಿ ಎದುರಲ್ಲಿ ಬಿಡುಗಡೆ ಮಾಡುವ ಚಿಂತನೆ ಇದೆ. ಈ ಸಂಬಂಧ ನಿಮ್ಮ ಮಾರ್ಗದರ್ಶನ ಪಡೆಯುವೆ’ ಎಂದರು.
ಸಂಗೀತ ಕಲಾವಿದ ಬಾಪು ಪದ್ಮನಾಭ ಆಶಯ ನುಡಿಗಳನ್ನಾಡಿದರು.
ಭಾಲ್ಕಿಯ ಹಿರೇಮಠದ ಬಸವಲಿಂಗ ಪಟ್ಟದ್ದೇವರ ಅವರಿಗೆ 2024ನೇ ಸಾಲಿನ ಡಾ.ಬಿ.ಡಿ.ಜತ್ತಿ ಸಂಶೋಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ವೀರಣ್ಣ ದಂಡೆ, ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಜಯಶ್ರೀ ದಂಡೆ ವೇದಿಕೆಯಲ್ಲಿದ್ದರು.
ಕಲ್ಲಪ್ಪ ವಾಲಿ, ಉದ್ದಂಡಯ್ಯ ಬಂಡಪ್ಪ ಕೇಸೂರು, ಗುರುಶಾಂತಮ್ಮ, ಧರೆಪ್ಪ ಹಾಜರಿದ್ದರು. ಆನಂದ ಸಿದ್ದಾಮಣಿ ವಂದಿಸಿದರು.
ಬಸವಣ್ಣನಿಗಾಗಿ ಇಡೀ ಜೀವನವನ್ನೆ ಸವೆಸಿದ ಅವರನ್ನು ಅಂತರಂಗದಲ್ಲಿ ಆಧರಿಸಿದ ಬಿ.ಡಿ.ಜತ್ತಿ ಅವರ ಹೆಸರಿನ ಪ್ರಶಸ್ತಿಯನ್ನು ಬಸವ ಪ್ರಸಾದವೆಂದು ಸ್ವೀಕರಿಸಿರುವೆ
-ಬಸವಲಿಂಗ ಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನ
ಬಸವತತ್ವ ಎಲ್ಲ ಮಠಗಳಲ್ಲೂ ಉಳಿದಿಲ್ಲ. ಕೆಲವರು ಇದ್ದಕ್ಕಿದ್ದಂತೆಯೇ ನಾವು ಹಿಂದೂಗಳು ಎನ್ನುತ್ತಾರೆ. ಸಮಾಜ ಒಡೆದು ಚಿಂದಿ ಮಾಡುತ್ತಿದ್ದಾರೆ. ಬಸವಣ್ಣನವರ ಮುಂದೆ ಯಾರೂ ಇಲ್ಲ
-ಅರವಿಂದ ಜತ್ತಿ ಬೆಂಗಳೂರು ಬಸವ ಸಮಿತಿ ಅಧ್ಯಕ್ಷ
‘ವಚನಗಳ ಪಚನ ಅಗತ್ಯ’ ‘ಹೇಗೆ ಜೀವನದಲ್ಲಿ ಅಂಗವೈಕಲ್ಯದಿಂದ ಪಾರಾಗಲು ಎರಡು ಹನಿ ಪೋಲಿಯೊ ಲಸಿಕೆ ಹಾಕಲಾಗುತ್ತದೆ. ಅದೇ ರೀತಿ ಬಸವಣ್ಣನವರ ಶರಣರ ವಚನಗಳನ್ನು ಅಂತರಂಗಕ್ಕೆ ಇಳಿಸಿಕೊಂಡರೆ ಮಾನಸಿಕ ಅಂಗವಿಕಲತೆ ಬರಲ್ಲ. ನಾವೆಲ್ಲ ಭವಿಷ್ಯದಲ್ಲಿ ಹುಚ್ಚರಾಗದಿರಲು ಹುಚ್ಚಾಸ್ಪತ್ರೆ ಸೇರದಿರಲು ಒಂದೇ ಔಷಧವಿದೆ. ವಚನಗಳನ್ನು ಜೀವನದಲ್ಲಿ ಪಚನ ಮಾಡಿಕೊಂಡರೆ ಅಂಥ ಸಮಸ್ಯೆಯಿಂದ ಪಾರಾಗಬಹುದು’ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.