ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡುಗರ ಮನಸೂರೆಗೊಳಿಸಿದ ದಾಸಪರ್ವ ನಾಟ್ಯೋತ್ಸವ

Published 28 ಜನವರಿ 2024, 4:52 IST
Last Updated 28 ಜನವರಿ 2024, 4:52 IST
ಅಕ್ಷರ ಗಾತ್ರ

ಕಲಬುರಗಿ: ಪಿಲಾರು ಕೃಷ್ಣ ಭಟ್ ಸೇವಾ ಟ್ರಸ್ಟ್ ಇಲ್ಲಿಯ ಡಾ.ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ದಾಸಪರ್ವ ನಾಟ್ಯೋತ್ಸವ ಭರತನಾಟ್ಯ ಹಾಗೂ ಜಾನಪದ ಸಾಂಸ್ಕೃತಿಕ ನೃತ್ಯೋತ್ಸವದಲ್ಲಿನ ಕಲಾವಿದರ ಭರತನಾಟ್ಯ ನೋಡುಗರನ್ನು ಮನಸೂರೆಗೊಳಿಸಿತು.

ಜಿಲ್ಲೆಯಲ್ಲಿನ ಶಾಸ್ತ್ರೀಯ ನೃತ್ಯ ಕಲಾವಿದರ ಪ್ರತಿಭೆಯ ಪ್ರದರ್ಶನಕ್ಕಾಗಿ ಕಲ್ಪಿಸಿದ್ದ ವೇದಿಕೆಯಲ್ಲಿ ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಿರುವ 6 ವರ್ಷದಿಂದ 25 ವರ್ಷಗಳ ವರೆಗಿನ 60 ಮಕ್ಕಳು ತಮ್ಮ ಪ್ರತಿಭೆಯನ್ನು ಅಮೋಘವಾಗಿ ವ್ಯಕ್ತಪಡಿಸಿದರು.

ಹರ್ಷಿತಾ ಮತ್ತು ವಿದ್ಯಾಶ್ರೀ ತಂಡದವರು ‘ನಟರಾಜ’ನಿಗೆ ಆರತಿ ಎತ್ತುವುದರಿಂದಿಗೆ ನೃತ್ಯ ಸಂಭ್ರಮ ಶುರುವಾಯಿತು. ದುಷ್ಟ ಸಂಹಾರಣಿ ದುರ್ಗಾ ಮಾತೆಯ ಸ್ತುತಿಯೊಂದಿಗೆ ಮೊದಲ ಹೆಜ್ಜೆ ಹಾಕಿದರು. ವೇದಿಕೆಯ ಬಲಭಾಗದಲ್ಲಿ ನಿಂತು ನಿಧಾನ ಗತಿಯಲ್ಲಿ ಆರಂಭವಾದ ನೃತ್ಯ ಮಧ್ಯದಲ್ಲಿ ಚುರುಕು ಪಡೆಯಿತು. ಅಂತ್ಯದಲ್ಲಿನ ದುಷ್ಟ ಸಂಹಾರದಲ್ಲಿನ ಕಲಾವಿದರ ಭಾವಕ್ಕೆ ನೆರೆದವರು ತಲೆದೂಗಿದರು.

ಪಾಂಡುರಂಗ ವಿಠಲನ ಸ್ಮರಣೆಯ ‘ಬೃಂದಾವನ’ ಭಕ್ತಿ ಕೃತಿಯ ರಾಗ ಮತ್ತು ಲಯದ ಹರಿವಿನೊಂದಿಗೆ ಸಾಗಿದ ನೃತ್ಯಬಂಧ ನೋಡುಗರ ಮನ ಸೆಳೆಯಿತು. ಸಂಗೀತ, ಲಯ ಮತ್ತು‌ ನೃತ್ಯ ಮೂರು ಪ್ರಕಾರಗಳು ಮೋಡಿ ಮಾಡಿದವು. 6 ವರ್ಷದ ಎಳೆಯ ಮಕ್ಕಳು ‘ಜಯ ಜಾನಕಿ ಕಥಾ’ ಕೃತಿಗೆ ತುಂಟತನದಿಂದ ಹೆಜ್ಜೆ ಹಾಕುತ್ತಿದ್ದರೆ ಅವರ ಪೋಷಕರು ಸಂತಸದಲ್ಲಿ ತೇಲಿದರು. ಕೆಲವರು ನೃತ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ವರನಟ ಡಾ. ರಾಜ್‌ಕುಮಾರ್‌ ಕಂಠದಲ್ಲಿ ಮೂಡಿಬಂದ ಸಾಹಿತಿ ಕುವೆಂಪು ರಚಿತ ‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಗೀತೆಯ ಆಶಯವನ್ನು ಕಲಾವಿದರು ನೃತ್ಯದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟರು. ಭಾವ–ಅಭಿನಯವನ್ನು ಸುಲಲಿತವಾಗಿ ಅಭಿವ್ಯಕ್ತಪಡಿಸಿದರು.

ದಾಸಪರ್ವ ನಾಟ್ಯೋತ್ಸವದಲ್ಲಿ ದಾಸರ 16 ಕೃತಿಗಳಿಗೆ ಕಲಾವಿದರು ಪ್ರದರ್ಶನ ನೀಡಿದರು. ‘ಪಿಳ್ಳಾರಿ ಗೀತೆ’, ಮೆಲ್ಲ ಮೆಲ್ಲನೆ’, ‘ಪಿಳಂ ಗೋವಿ’, ‘ತೋಳು ತೋಳು’, ‘ವೆಂಕಟಚಲ ನಿಲಯ’, ‘ ಚಂದ್ರಚೂಡ’, ‘ಭಾಗ್ಯ ಲಕ್ಷ್ಮಿ’, ‘ಜಗನ ಮೋಹನ ಕೃಷ್ಣ’, ‘ಹನುಮಂತ ದೇವ’, ‘ತಾರಕ ಬಿಂದಿಗೆ’, ‘ತಂಬೂರಿ ಮೀಟಿದವ’, ‘ಶರಣು ಸಿದ್ಧಿ ವಿನಾಯಕ’ ಹಾಗೂ ‘ಬುದ್ಧಿ ಮೂರು’ ಕೃತಿಗಳ ನೃತ್ಯೋತ್ಸವ ಸಂಪನ್ನಗೊಂಡಿತ್ತು.

ವಿಶಾಲ ರಂಗವೇದಿಕೆ, ನೆರಳು–ಬೆಳಕು, ವರ್ಣಮಯ ದೀಪಗಳು, ವಸ್ತ್ರ ವಿನ್ಯಾಸ ಪೂರಕವಾಗಿದ್ದವು. ಮುಖದಲ್ಲಿ ನಿರೀಕ್ಷೆ, ಹಾಸ್ಯ, ಭಯಾನಕ, ಕರುಣ, ರೌದ್ರ, ಭೀಭತ್ಸ, ಶಾ೦ತರಸದ ಹಾವಭಾವಗಳ ಅಭಿನಯ ಕಂಡುಬಂತು.

ಕಾರ್ಯಕ್ರಮದಲ್ಲಿ ವಕೀಲರಾದ ವಿದ್ಯಾರಾಣಿ ಭಟ್, ಸಂಧ್ಯಾ ಪಿ. ಭಟ್, ಪುರಂದರ ಭಟ್ ಉಪಸ್ಥಿತರಿದ್ದರು.

‘ಮಕ್ಕಳಿಗೆ ಭರತನಾಟ್ಯ ಕಲಿಸಿ’
ನೃತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಯ ಪರಿಹಾರ ಆಯೋಗದ ಉಸ್ತುವಾರಿ ಅಧ್ಯಕ್ಷೆ ಮಾಲತಿ ಎಸ್‌. ರಷ್ಮಿ ‘ಮಕ್ಕಳಿಗೆ ಅಂಕಗಳ ಗಳಿಕೆಯ ಶಿಕ್ಷಣದ ಜತೆಗೆ ನಮ್ಮ ಪರಂಪರೆಯನ್ನು ಪ್ರತಿನಿಧಿಸುವ ಭರತನಾಟ್ಯದಂತಹ ಶಿಕ್ಷಣ ಅವಶ್ಯವಿದೆ’ ಎಂದರು. ಸೋಲಾಪುರದ ಕಥಕ್ ನೃತ್ಯ ಕಲಾವಿದ ಮಹೇಶ ಪಾಟ್ಕೂಲ್ಕರ್ ಅವರಿಗೆ ‘ನ್ಯಾಟ್ಯಾಂಜಲಿ’ ಹಾಗೂ ತಬಲವಾದಕ ವಿಶ್ವಜಿತ್ ಜೋಗ್ದಂಡ್ ಅವರಿಗೆ ‘ವಾದ್ಯ ಸಮ್ಮಾನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT