ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘65 ವರ್ಷಗಳ ಆಡಳಿತದಲ್ಲಿ ವೃದ್ಧಿಯಾಗದ ತಲಾದಾಯ ’

ಸರ್ವಿಸ್ ರಸ್ತೆ ಕಾಮಗಾರಿಗೆ ಭೂಮಿಪೂಜೆ: ಸಂಸದ ಡಾ.ಉಮೇಶ ಜಾಧವ
Published 10 ಮಾರ್ಚ್ 2024, 15:02 IST
Last Updated 10 ಮಾರ್ಚ್ 2024, 15:02 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ 65 ವರ್ಷಗಳ ಕಾಲ ಆಡಳಿತ ನಡೆಸಿ, ಎಲ್ಲ ರೀತಿಯ ಅಧಿಕಾರ ಅನುಭವಿಸಿದರೂ ಜಿಲ್ಲೆಯ ಜನರ ತಲಾ ಆದಾಯದಲ್ಲಿ ಹೆಚ್ಚಳ ಮಾಡಲು ಸಾಧ್ಯವಾಗಲಿಲ್ಲ’ ಎಂದು ಸಂಸದ ಡಾ. ಉಮೇಶ ಜಾಧವ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಇಲ್ಲಿನ ಬಿಲಗುಂದಿ ವೃತ್ತ ಸಮೀಪದ ರಿಂಗ್ ರಸ್ತೆ ಬದಿಯ ₹ 57 ಕೋಟಿ ವೆಚ್ಚದ ಸರ್ವೀಸ್ ರಸ್ತೆ (ರಾಮಮಂದಿರ, ಬಿಲಗುಂದಿ ಕ್ರಾಸ್, ಹಾಗರಗಾ ಕ್ರಾಸ್, ಹುಮನಾಬಾದ್ ಕ್ರಾಸ್) ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕಲಬುರಗಿ ಜಿಲ್ಲೆಯ ಜನರ ತಲಾ ಆದಾಯ ದೇಶದ ಸರಾಸರಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಇದಕ್ಕೆ ಆರೂವರೆ ದಶಕಗಳ ಕಾಲ ನಡೆಸಿದ ಕಾಂಗ್ರೆಸ್ ನಾಯಕರ ಆಡಳಿತ ವೈಖರಿಗೆ ಸಾಕ್ಷಿ’ ಎಂದರು.

‘ಸ್ಥಳೀಯವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಸಲು ಮೆಗಾ ಜವಳಿ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ. ಪ್ರಥಮ ಬಾರಿಗೆ ಕಲಬುರಗಿಯಿಂದ ಬೆಂಗಳೂರಿಗೆ ನೇರ ರೈಲು ಓಡಿಸಲಾಗುತ್ತಿದೆ. ಚೆನ್ನೈ-ಸೂರತ್ ಭಾರತ್ ಮಾಲಾ ರಸ್ತೆಯು ಜಿಲ್ಲೆಯಲ್ಲಿ ಹಾದು ಹೋಗುತ್ತಿದ್ದು, ಈ ಭಾಗದ ಉದ್ಯಮಗಳಿಗೆ ಹಾಗೂ ಸಾರಿಗೆಗೆ ಬಹುದೊಡ್ಡ ಕೊಡುಗೆ ನೀಡಲಿದೆ. ಕಳೆದ ಏಳು ದಶಕದಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯಗಳು ಬಿಜೆಪಿ ಆಡಳಿತದಲ್ಲಿ ಆಗಿವೆ’ ಎಂದು ಹೇಳಿದರು.

‘ಹಾಗರಗಾ ಕ್ರಾಸ್ ಸಮೀಪದ ಅಸಮರ್ಪಕ ಸರ್ವಿಸ್ ರಸ್ತೆ ಹಾಗೂ ರಾಜಕಾರಣಿಗಳ ತಪ್ಪಿನಿಂದಾಗಿ ಅಮಾಯಕರು ಜೀವ ಕಳೆದುಕೊಂಡರು. ಮುಂದೆ ಅಂತಹ ಜೀವ ಹಾನಿ ಆಗುವುದಿಲ್ಲ. ಕೇಂದ್ರ ಸರ್ಕಾರವು ಸರ್ವಿಸ್ ರಸ್ತೆಗಳಿಗಾಗಿ ಅನುದಾನ ನೀಡಿದೆ. ಪಾಲಿಕೆ ಅಧಿಕಾರಿಗಳು ಮುಂದೆ ನಿಂತು ಒತ್ತುವರಿ ಜಾಗ ತೆರವುಗೊಳಿಸಿ, ರಸ್ತೆ ನಿರ್ಮಿಸಬೇಕು. ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹೆಚ್ಚುವರಿಯಾಗಿ ₹ 25 ಕೋಟಿ ನೀಡುವುದಾಗಿ ತಿಳಿಸಿದ್ದಾರೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿ, ‘ಸರ್ವಿಸ್ ರಸ್ತೆ ಹೆಸರಿಗಷ್ಟೇ ಇತ್ತು. ಓಡಾಟಕ್ಕೆ ಆಗುತ್ತಿರಲಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ನಿರಂತರ ಧ್ವನಿ ಎತ್ತಿ, ಪ್ರಬಲವಾಗಿ ಬೇಡಿಕೆ ಇಟ್ಟಿದ್ದರ ಫಲವಾಗಿ ಇವತ್ತು ಕಾಮಗಾರಿಗೆ ಚಾಲನೆ ಸಿಕ್ಕಿದೆ’ ಎಂದು ಹೇಳಿದರು.

ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ‘ಎಲ್ಲ ಕಡೆ ರಿಂಗ್ ರಸ್ತೆಗಿಂತ ಮೊದಲು ಸರ್ವಿಸ್ ರಸ್ತೆ ಮಾಡುತ್ತಾರೆ. ಆದರೆ, ಇಲ್ಲಿ ಹಾಗೆ ಮಾಡಲಿಲ್ಲ. ಹಾಗರಗಾ ಕ್ರಾಸ್‌ನಿಂದ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡಲು ಹೋದರೆ ಮುಖಂಡರೇ ವಿರೋಧಿಸಿದ್ದರು. ಇದೀಗ ಬಗೆಹರಿದಿದೆ’ ಎಂದರು.

ಮೇಯರ್ ವಿಶಾಲ್ ದರ್ಗಿ, ಪಾಲಿಕೆ ಸದಸ್ಯೆ ಶಾಂತಾಬಾಯಿ ಹಾಲ್ಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ಕೃಷ್ಣಾ ರೆಡ್ಡಿ, ದಿಗಂಬರ, ಬಸವರಾಜ, ಉಮೇಶ ಪಾಟೀಲ, ಸುನಿಲ್ ಬನಶೆಟ್ಟಿ, ಬಸವರಾಜ ಮುನ್ನಳ್ಳಿ, ರವಿ ಕೊರವಿ, ರಾಜಶೇಖರ ಮಾಗಾ, ವರದಾಶಂಕರ ಶೆಟ್ಟಿ, ವೈಜನಾಥ ಕಳಸ್ಕರ್, ದತ್ತನಗೌಡ, ರಾಜಶೇಖರ ಮಹಾಗಾಂವ ಉಪಸ್ಥಿತರಿದ್ದರು.

Quote - ಈಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಗಾಗಿ ಕಚೇರಿ ಎದುರು ಸುಮಾರು ನಾಲ್ಕು ಗಂಟೆ ಕುಳಿತಿದ್ದೆ. ಒಳಗೆ ಕರೆಯಲೇ ಇಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿ.ಎಲ್.ಸಂತೋಷ ಅವರ ಗಮನಕ್ಕೆ ತಂದ ಬಳಿಕ ಭೇಟಿ ಮಾಡಿದರು ಡಾ.ಉಮೇಶ ಜಾಧವ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT