ಖರ್ಗೆ ಹಿಂದುಳಿದ ವರ್ಗಗಳ ವಿರೋಧಿ: ಶಾಸಕ ಕೆ.ಎಸ್.ಈಶ್ವರಪ್ಪ ಆರೋಪ

ಶುಕ್ರವಾರ, ಏಪ್ರಿಲ್ 26, 2019
35 °C
ಹಿಂದುಳಿದ ವರ್ಗಗಳ ಸಮಾವೇಶ

ಖರ್ಗೆ ಹಿಂದುಳಿದ ವರ್ಗಗಳ ವಿರೋಧಿ: ಶಾಸಕ ಕೆ.ಎಸ್.ಈಶ್ವರಪ್ಪ ಆರೋಪ

Published:
Updated:
Prajavani

ಕಲಬುರ್ಗಿ: ‘ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆ ನೀಡುವ ಪ್ರಸ್ತಾವವನ್ನು ವಿರೋಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದಾರೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪ ಮುಂಭಾಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಖರ್ಗೆ ಅವರು ಎಲ್ಲರನ್ನೂ ತುಳಿಯುವ ಕೆಲಸ ಮಾಡಿದ್ದಾರೆ. ಇದರಿಂದಾಗಿ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಡಾ.ಎ.ಬಿ.ಮಾಲಕರಡ್ಡಿ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಂದಿದ್ದಾರೆ. ಹೀಗಾಗಿಯೇ ಇಂದು ಕಾಂಗ್ರೆಸ್‌ನಲ್ಲಿ ಅಪ್ಪ ಮತ್ತು ಮಗ ಇಬ್ಬರೇ ಉಳಿದಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂಬಿಗರ ಚೌಡಯ್ಯನವರ ಸ್ಮಾರಕಕ್ಕೆ ₹1 ಕೋಟಿ ಅನುದಾನ ನೀಡಲಾಗಿದೆ. ಸವಿತಾ ಸಮಾಜ, ಮಾದಾರ ಚನ್ನಯ್ಯ ಸಮಾಜ, ವಾಲ್ಮೀಕಿ ಸಮಾಜ, ಬಂಜಾರ, ಭೋವಿ ಸಮಾಜಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಹೀಗಾಗಿ ರಾಜ್ಯದಲ್ಲಿ 22 ಹಾಗೂ ಕೇಂದ್ರದಲ್ಲಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಮಾತನಾಡಿ, ‘ದೇಶ ಬಲಿಷ್ಠ ಹಾಗೂ ಶ್ರೇಷ್ಠವಾಗಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ತಾವೇ ಅಭ್ಯರ್ಥಿ ಎಂದು ಭಾವಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ’ ಎಂದರು.

ಶಾಸಕರಾದ ಬಿ.ಜಿ.ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ಕೆ.ಪಿ.ನಂಜುಂಡಿ, ಎನ್.ರವಿಕುಮಾರ್, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡರಾದ ಶಶೀಲ್ ಜಿ.ನಮೋಶಿ, ವಾಲ್ಮೀಕಿ ನಾಯಕ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಶರಣಪ್ಪ ಉದನೂರ, ಚಂದ್ರಕಾಂತ ಪಾಟೀಲ, ಅವ್ವಣ್ಣ ಮ್ಯಾಕೇರಿ, ನಿತಿನ್ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಧರ್ಮಣ್ಣ ದೊಡ್ಡಮನಿ, ಶರಣಬಸಪ್ಪ ಸೂರ್ಯವಂಶಿ, ಬಸವರಾಜ ಇಂಗಿನ, ಆರ್.ಭೀಮರಾವ, ಅಶೋಕ ಹೂಗಾರ, ಲಿಂಗರಾಜ ಬಿರಾದಾರ, ಶರಣಪ್ಪ ತಳವಾರ ಇದ್ದರು.

ಸ್ವಾರ್ಥದಿಂದ ಕೈತಪ್ಪಿದ ಸಿಎಂ ಹುದ್ದೆ

‘ಸ್ವಾರ್ಥದಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಮಂತ್ರಿ ಹುದ್ದೆ ತಪ್ಪಿದೆ. ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಸಿದ್ದರಾಮಯ್ಯ ಅವರು ಯಾವುದು ಆಗುವುದಿಲ್ಲ ಎಂದು ಹೇಳುತ್ತಾರೋ ಅದೆಲ್ಲವೂ ಆಗುತ್ತದೆ. ಈ ಹಿಂದೆ ನರೇಂದ್ರ ಮೋದಿ ಪ್ರಧಾನಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದರು. ಅವರಿಬ್ಬರೂ ಪ್ರಧಾನಿ, ಮುಖ್ಯಮಂತ್ರಿ ಆದರು. ಈಗ ಕಲಬುರ್ಗಿಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ’ ಎಂದು ತಿಳಿಸಿದರು.

ಯಮ ಬಂದರೂ ತಡೆಯುತ್ತೇನೆ!

‘ಕೋಲಿ ಮತ್ತು ಗೊಂಡ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವವರೆಗೆ ನಾನು ಸಾಯುವುದಿಲ್ಲ. ಒಂದು ವೇಳೆ ನನ್ನನ್ನು ಕರೆದೊಯ್ಯಲು ಯಮ ಬಂದರೂ ಅವನನ್ನು ತಡೆಯುತ್ತೇನೆ’ ಎಂದು ಬಿಜೆಪಿ ಮುಖಂಡ ಬಾಬುರಾವ ಚಿಂಚನಸೂರ ಹೇಳಿದರು.

‘ಜಾಧವ ಅಭ್ಯರ್ಥಿ ಆದಾಗಿನಿಂದ ಖರ್ಗೆ ಅವರಿಗೆ ನಡುಕ ಹುಟ್ಟಿದೆ. ಚಳಿ ಬರಲಾರಂಭಿಸಿದೆ. ಖರ್ಗೆ ಹಳೆ ಎತ್ತು, ಈಶ್ವರಪ್ಪ ಕಿಲಾಡಿ ಎತ್ತು. ಖರ್ಗೆ ಅವರು ಹಿಂದುಳಿದ ವರ್ಗಗಳಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಹೀಗಾಗಿ ಅವರನ್ನು ಸೋಲಿಸಿಯೇ ತೀರುತ್ತೇನೆ’ ಎಂದು ಹೇಳಿದರು.

‘ಸಿಎಂ ಬಿಟ್ಟು ಎಲ್ಲಾ ಆಗಿದ್ದಾರೆ’

‘ಖರ್ಗೆ ಅವರು ಮುಖ್ಯಮಂತ್ರಿ ಹುದ್ದೆಯೊಂದನ್ನು ಬಿಟ್ಟು ಎಲ್ಲಾ ಇಲಾಖೆಗಳ ಮಂತ್ರಿಗಳಾಗಿದ್ದಾರೆ. ಆದಾಗ್ಯೂ ಅವರ ಕೊಡುಗೆ ಶೂನ್ಯವಾಗಿದೆ’ ಎಂದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಆರೋಪಿಸಿದರು.

‘ಅಭಿವೃದ್ಧಿ ನೋಡಿ ಮತ ಕೊಡಿ ಎಂದು ಕೇಳುತ್ತಾರೆ. ಆದರೆ, ಅವರು 8 ಬಾರಿ ಆಯ್ಕೆಯಾಗಿರುವ ಗುರುಮಠಕಲ್‌ನಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ಬಾಬುರಾವ ಚಿಂಚನಸೂರ ಬರಬೇಕಾಯಿತು. 371 (ಜೆ) ಕಾಯ್ದೆ ಜಾರಿಯಲ್ಲಿ ಎಲ್ಲರ ಕೊಡುಗೆ ಇದೆ. ಸೋಲಿನ ಭಯದಿಂದಾಗಿ ಖರ್ಗೆ ಅವರು ಮಠ, ದರ್ಗಾಗಳಿಗೆ ಭೇಟಿ ನೀಡುತ್ತಿದ್ದಾರೆ’ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಯಾರು ಏನೆಂದರು?

* ಖರ್ಗೆ ಅವರಿಂದ ಹಿಂದುಳಿದ ವರ್ಗಗಳಿಗೆ ಬಹಳ ಅನ್ಯಾಯವಾಗಿದೆ. ಹೈದರಾಬಾದ್ ಕರ್ನಾಟಕ ಭಾಗ ಹಿಂದುಳಿಯಲು ಖರ್ಗೆ, ಧರ್ಮಸಿಂಗ್ ಅವರೇ ಕಾರಣ. ಖರ್ಗೆ ಅವರಿಗೆ ಇದು ಕೊನೆಯ ಚುನಾವಣೆ.
–ಸೂರ್ಯಕಾಂತ ಕದಮ್
ಮರಾಠ ಸಮಾಜದ ಮುಖಂಡ

* ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಚುನಾವಣೆ ದೇಶದ ಗಮನ ಸೆಳೆದಿದೆ. ದೇಶದ ಪ್ರಮುಖ 10 ಕ್ಷೇತ್ರಗಳಲ್ಲಿ ಗುಲಬರ್ಗಾ ಕೂಡ ಒಂದಾಗಿದೆ. ಮೋದಿ ಮಾತು ಉಳಿಸಿಕೊಳ್ಳಬೇಕಾದರೆ ಖರ್ಗೆ ಅವರನ್ನು ಸೋಲಿಸಬೇಕು.
–ಆರ್.ಭೀಮರಾವ್
ಗಾಣಿಜ ಸಮಾಜದ ಮುಖಂಡ

* ಕಾಂಗ್ರೆಸ್ 60 ವರ್ಷ ಪಾಳೇಗಾರಿಕ ನಡೆಸಿದೆ. ಖರ್ಗೆ ಅವರು ಲಾಡ್ಜ್‌ನಲ್ಲಿ ಕದ್ದು ಮುಚ್ಚಿ ಸಭೆಗಳನ್ನು ನಡೆಸುತ್ತಿದ್ದಾರೆ. ನಾವು ಬಹಿರಂಗವಾಗಿ ಸಮಾವೇಶ ನಡೆಸಿ, ಬಿಜೆಪಿ ಬೆಂಬಲಿಸುತ್ತಿದ್ದೇವೆ.
–ಶೋಭಾ ಬಾಣಿ
ಜಿ.ಪಂ. ಮಾಜಿ ಸದಸ್ಯೆ

* ಅಪ್ಪ–ಮಗ ಕೆಲಸ ಮಾಡಿಲ್ಲ. ಬರೀ ಸುಳ್ಳು ಹೇಳುತ್ತಿದ್ದಾರೆ. ಆದ್ದರಿಂದ ಹಿಂದುಳಿದವರು ಒಂದಾಗಬೇಕು. ಕಾಂಗ್ರೆಸ್‌ನ ಆಮಿಷಕ್ಕೆ ಬಲಿಯಾಗದೆ ಬಿಜೆಪಿಗೆ ಮತ ಹಾಕಬೇಕು.
–ಸುಭಾಷ ಆರ್.ಗುತ್ತೇದಾರ
ಶಾಸಕ

* 50 ವರ್ಷ ಅಧಿಕಾರದಲ್ಲಿದ್ದರೂ ಹೈದರಾಬಾದ್ ಕರ್ನಾಟಕ ಹಿಂದುಳಿಯಲು ಖರ್ಗೆ ಅವರೇ ಕಾರಣರಾಗಿದ್ದಾರೆ. ಆದ್ದರಿಂದ ಈ ಬಾರಿ ಡಾ.ಉಮೇಶ ಜಾಧವ ಅವರನ್ನು ಗೆಲ್ಲಿಸಬೇಕು.
–ಎನ್.ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

* 16 ವರ್ಷ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೂ ನಮ್ಮ ಸಮಾಜವನ್ನು ಅವರು ಗುರುತಿಸಲಿಲ್ಲ. 5 ವರ್ಷದಲ್ಲಿ ಮೋದಿ ದೇಶವನ್ನು ಮುಂದಕ್ಕೆ ಒಯ್ದರೆ, ಖರ್ಗೆ ಜಿಲ್ಲೆಯನ್ನು 5 ವರ್ಷ ಹಿಂದಕ್ಕೆ ಒಯ್ದಿದ್ದಾರೆ.
–ಕೆ.ಪಿ.ನಂಜುಂಡಿ
ಶಾಸಕ

* ಖರ್ಗೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆರು ಬಾರಿ ಶಾಸಕನಾಗಿದ್ದರೂ ಮಂತ್ರಿ ಸ್ಥಾನ ನೀಡಲಿಲ್ಲ. ಹೀಗಾಗಿ ಅವರನ್ನು ಈ ಬಾರಿ ಮನೆಗೆ ಕಳುಹಿಸಲೇಬೇಕು.
–ಮಾಲೀಕಯ್ಯ ಗುತ್ತೇದಾರ
ಬಿಜೆಪಿ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !