ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಳೆದ ಕಾಲ ನಡೆದ ದೂರ’ | ಅನುಭವ, ಅನುಭಾವದಿಂದ ಹೊರ ಬಂದ ಪುಸ್ತಕ-ನ್ಯಾ. ಫಣೀಂದ್ರ

ಶಿವರಾಜ ಪಾಟೀಲರ ಆತ್ಮಕಥನ ‘ಕಳೆದ ಕಾಲ ನಡೆದ ದೂರ’ ಬಿಡುಗಡೆ: ನ್ಯಾ. ಫಣೀಂದ್ರ ಹೇಳಿಕೆ
Published 1 ಏಪ್ರಿಲ್ 2024, 6:08 IST
Last Updated 1 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಕಲಬುರಗಿ: ‘ದೇಶ ಸುತ್ತಿ, ಕೋಶವನ್ನು ಓದಿ ಪಾಂಡಿತ್ಯ ಸಂಪಾದಿಸಿದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಅವರು ತಮ್ಮ ಅನುಭವ ಹಾಗೂ ಅನುಭಾವವನ್ನು ಮಸ್ತಕದಿಂದ ಪುಸ್ತಕಕ್ಕೆ ಸೊಗಸಾಗಿ ಇಳಿಸಿದ್ದಾರೆ’ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.

ಇಲ್ಲಿನ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಪ್ರತಿಷ್ಠಾನ ಆಯೋಜಿಸಿದ್ದ ಶಿವರಾಜ ವಿ.ಪಾಟೀಲ ಅವರ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಆತ್ಮಕಥನ ‘ಕಳೆದ ಕಾಲ ನಡೆದ ದೂರ’ ಮತ್ತು ‘ಟೈಮ್‌ ಸ್ಪೆಂಟ್‌ ಡಿಸ್ಟೆನ್ಸ್ ಟ್ರಾವೆಲ್ಡ್’ ಪುಸ್ತಕಗಳ ಎರಡನೇ ಮುದ್ರಣ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಶಿವರಾಜ ಪಾಟೀಲ ಅವರು ಹಳ್ಳಿಯ ಚಕ್ಕಡಿ ಬಂಡಿಯಿಂದ ಸುಪ್ರೀಂಕೋರ್ಟ್‌ನ ತಕ್ಕಡಿವರೆಗಿನ ಉನ್ನತ ಸ್ಥಾನಕ್ಕೆ ಏರಿ, ಜೀವನ ಸವೆಸಿದ್ದರೂ ತಾವು ಜನಿಸಿದ್ದ ಊರು ಮತ್ತು ತಂದೆ– ತಾಯಿಯನ್ನು ಎಂದಿಗೂ ಮರೆಯಲಿಲ್ಲ’ ಎಂದರು.

‘ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದ ಶಿವರಾಜ ಪಾಟೀಲರು, ಹೈಕೋರ್ಟ್ ವಕೀಲರಾಗಿ, ಮದ್ರಾಸ್, ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಕರ್ನಾಟಕ ಲೋಕಾಯುಕ್ತರಾಗಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಹಂತ ಹಂತವಾಗಿ ಬೆಳೆದರು. ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿ, ಸರಳ ಸಜ್ಜನಿಕೆಯಿಂದ ಲೋಕಪ್ರಿಯರಾದರು’ ಎಂದು ಹೇಳಿದರು.

‘ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ನ್ಯಾಯಾಂಗ ಕ್ಷೇತ್ರದಲ್ಲಿ ಅಗಾಧ ಪ್ರಮಾಣದ ಕೊಡುಗೆ ನೀಡಿ, ನೊಂದವರ ಬಾಳಿಗೆ ಬೆಳಕಾದವರು’ ಎಂದು ಬಣ್ಣಿಸಿದರು.

‘ನ್ಯಾಯಮೂರ್ತಿಗಳು ವಾದ-ಪ್ರತಿವಾದವನ್ನು ಸಮಚಿತ್ತದಿಂದ ಆಲಿಸಿ ಹೂವಿನಂತೆ ತೀರ್ಮಾನಿಸಿ, ವಜ್ರಕ್ಕಿಂತ ಕಠಿಣವಾದ ತೀರ್ಪು ನೀಡಬೇಕು’ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು, ಇಳಕಲ್‌ನ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನ್ಯಾ.ಶಿವರಾಜ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್‌.ನಾಗಶ್ರೀ, ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ.ರೆಡ್ಡಿ, ಕಾರ್ಯದರ್ಶಿ ಪ್ರೊ.ಚನ್ನಾರೆಡ್ಡಿ ಪಾಟೀಲ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT