ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಹಾದಿ ಬರವಣಿಗೆಗೆ ಪ್ರೇರಣೆಯಾಗಲಿ: ಸಿದ್ಧರಾಮಯ್ಯ ಮಠಪತಿ

Published 5 ಮಾರ್ಚ್ 2024, 15:57 IST
Last Updated 5 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಕಲಬುರಗಿ: ‘ನಾವು ಬದುಕಿದ ರೀತಿ ನೋಡಿ ಬರಹಗಾರರು ನಮ್ಮ ಹುಡುಕಿಕೊಂಡು ಬಂದು ಜೀವನ ಚರಿತ್ರೆ ಪುಸ್ತಕ ಬರೆಯುವಂತೆ ಬಾಳಬೇಕು’ ಎಂದು ಬಾಗಲಕೋಟೆಯ ವಿಶ್ರಾಂತ ಸಂಗೀತ ಪ್ರಾಧ್ಯಾ‍ಪಕ ಸಿದ್ಧರಾಮಯ್ಯ ಮಠಪತಿ ಅಭಿಪ್ರಾಯಪಟ್ಟರು.

ಇಲ್ಲಿನ ಕಲಾ ಮಂಡಳದಲ್ಲಿ ಮಂಗಳವಾರ ಸಂಗೀತ ಸಾಧನಾ ಕೇಂದ್ರ ಮತ್ತು ಸಂಗಮೇಶ್ವರ ಮಹಿಳಾ ಮಂಡಳ ಆಯೋಜಿಸಿದ್ದ ಎರಡು ಪುಸ್ತಕ ಬಿಡುಗಡೆ ಹಾಗೂ ಸ್ವರ ಸಾಧ್ವಿ ಪ್ರಶಸ್ತಿ ಪ್ರಾದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ, ಉರ್ದು ಮತ್ತು ಹಿಂದಿ ಭಾಷೆಯ ಸಂಗಮವನ್ನು ಕಾಣಬಹುದು. ಕಲ್ಯಾಣ ಕರ್ನಾಟಕವು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿದೆ’ ಎಂದರು.

‘ಸಂಗೀತ ಕ್ಷೇತ್ರಕ್ಕೆ ಮಹಿಳೆಯರು ನೀಡಿದ ಕೊಡುಗೆ ಸಾಹಿತಿಗಳ ಕಣ್ಣಿಗೆ ಬೀಳುತ್ತಿಲ್ಲ. ಇದರಿಂದ ಹಲವು ಮಹಿಳಾ ಸಾಧಕರು ಚರಿತ್ರೆಯಲ್ಲಿ ದಾಖಲಾಗಿ ಉಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕಿ ಲಕ್ಷ್ಮಿಶಂಕರ ಜೋಶಿ ಮಾತನಾಡಿ, ‘ವಿದುಷಿ ತಾರಾ ಕುಲಕರ್ಣಿ ಅವರ ಶಿಸ್ತಿನ ಜೀವನ ಹಾಗೂ ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಪುಸ್ತಕ ಬರೆಯಲು ಪ್ರೇರಣೆಯಾಯಿತು. ಎರಡು ವರ್ಷಗಳ ಕಾಲ ಶ್ರಮಪಟ್ಟು, ಹಲವರ ನೆರವು ಪಡೆದು ಪುಸ್ತಕವನ್ನು ಹೊರ ತಂದಿದ್ದೇನೆ’ ಎಂದರು.

ತಾರಾ ಕುಲಕರ್ಣಿ ಜೀವನ ಕುರಿತ ಲಕ್ಷ್ಮಿಶಂಕರ ಜೋಶಿ ಬರೆದ ಕನ್ನಡ ಭಾಷೆಯ ‘ನಾದವನು ಧೇನಿಸುತ’ ಹಾಗೂ ಹಿಂದಿಗೆ ಶಶಾಂಕ್ ಹೇರೂರ ಅನುವಾದಿಸಿದ ‘ನಾದ ಕೆ ಧ್ಯಾನ ಮೇಂ’ ಪುಸ್ತಕಗಳ ಬಿಡುಗಡೆ ಮಾಡಲಾಯಿತು. ತಾರಾ ಕುಲಕರ್ಣಿ ಅವರಿಗೆ ‘ಸ್ವರ ಸಾಧ್ವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿವಿಯ ಹಿಂದಿ ವಿಭಾಗದ ಮುಖ್ಯಸ್ಥೆ ಪರಿಮಳಾ ಅಂಬೇಕರ, ಕಲಾನಿಕಾಯದ ಡೀನ್‌ ಪ್ರೊ. ಅಬ್ದುಲ್ ರಬ್ ಉಸ್ತಾದ್, ಮಹಿಳಾ ಮಂಡಳದ ಅಧ್ಯಕ್ಷೆ ವೈಶಾಲಿ ದೇಶಮುಖ, ಸಾಧನಾ ಕೇಂದ್ರದ ಕಾರ್ಯದರ್ಶಿ ಪ್ರೀತಿ ಸಿದ್ಧಲಿಂಗ ಪಾಟೀಲ ಉಪಸ್ಥಿತರಿದ್ದರು. ಮಂಜರಿ ಹೊಂಬಾಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT