ವಿದ್ವತ್ ಪೂರ್ಣ ಕೃತಿ ‘ಏವೂರ’

ಕಲಬುರ್ಗಿ: ‘ಸಾಹಿತಿ ಹನುಮಾಕ್ಷಿ ಗೋಗಿ ಅವರು ರಚಿಸಿದ ‘ಏವೂರ’ ಶಾಸನ ಕೃತಿಯು ವಿದ್ವತ್ಪೂರ್ಣವಾಗಿದೆ. ಇತಿಹಾಸ ಓದುಗರು ಹಾಗೂ ಸಾಮಾನ್ಯ ಜನರಿಗೂ ಅರ್ಥವಾಗುವಂಥ ಕೈಪಿಡಿ ಇದು’ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಟಿ.ಡಿ. ರಾಜಣ್ಣ ಹೇಳಿದರು.
ನಗರದಲ್ಲಿ ಶನಿವಾರ ಸಮಾನ ಮನಸ್ಕ ಸಾಹಿತ್ಯಾಸಕ್ತರ ಬಳಗದಿಂದ ಆಯೋಜಿಸಿದ್ದ ‘ಏವೂರ’ ಶಾಸನ ಪುಸ್ತಕ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಕೃತಿ ಪರಿಚಯಿಸಿದರು.
‘ಸ್ಥಳೀಯ ಚರಿತ್ರೆಯನ್ನು ಶಾಸನಗಳ ಹಿನ್ನೆಲೆಯಲ್ಲಿ ಈ ಕೃತಿ ಬರೆದಿದ್ದು, ಸಮರ್ಥವಾಗಿದೆ. ಇಂಥ ಸಂಶೋಧನಾ ಕೃತಿ ಹೊರತರುವುದು ತೀವ್ರ ಕಷ್ಟಕರ’ ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಮಧುಮತಿ ಪಾಟೀಲ ಮಾತನಾಡಿ, ‘ಕಲ್ಯಾಣ ಕರ್ನಾಟಕ ಯಾವ ಕ್ಷೇತದಲ್ಲೂ ಹಿಂದೆ ಬಿದ್ದಿಲ್ಲ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಸಂಗೀತದಿಂದ ಶ್ರೀಮಂತಿಕೆ ನಾಡು ಇದಾಗಿದೆ. ಇದರ ಇತಿಹಾಸದ ಮೇಲೆ ಬೆಳಕು ಚೆಲ್ಲಬೇಕಿದೆ’ ಎಂದರು.
ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ‘ಶಾಸನಗಳ ಕುರಿತು ಪುಸ್ತಕ ಬರೆಯುವುದು ಸಾಹಸದ ಕೆಲಸ. ಇದಕ್ಕೆ ತಾಳ್ಮೆ, ಐತಿಹಾಸಿಕ ಹಾಗೂ ಸಾಹಿತ್ಯದ ಜ್ಞಾನ ಅಪಾರವಾಗಿ ಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಭಿನಂದನಾ ನುಡಿ ಸಮರ್ಪಿಸಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ವಿನೋದಕುಮಾರ ಜನವರಿ ಇದ್ದರು.
ಬಳಗದ ಸಂಚಾಲಕ ಅರುಣ ಕುಲಕರ್ಣಿ ಸ್ವಾಗತಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.