ಕಲಬುರಗಿ: ‘ಅಭಿಧಮ್ಮ ಪಿಟಕ ಬೌದ್ಧ ವಿಹಾರಗಳಲ್ಲಿ ಭಿಕ್ಕುಗಳು ಧ್ಯಾನದ ಮೂಲಕ ಅಭಿಧಮ್ಮವನ್ನು ಬೋಧಿಸುತ್ತಾರೆ. ಅಭಿ ಎಂದರೆ ಉನ್ನತವಾದುದು ಎಂದರ್ಥ. ಅಭಿಧಮ್ಮವನ್ನು ಅಚಾರ್ಯ ಬುದ್ಧಘೋಷರು, ವಿಶೇಷಧಮ್ಮ ಎಂದು ಕರೆದಿದ್ದ, ಥೇರವಾದ ಬೌದ್ಧಧರ್ಮೀಯರು ಈ ಪಿಟಕವನ್ನು ಬೌದ್ಧ ಸಿದ್ಧಾಂತದ ಶ್ರೇಷ್ಠ ಹೂವೆಂದು ಪರಿಗಣಿಸಿದ್ದಾರೆ’ ಎಂದು ಬೌದ್ಧ ವಿದ್ವಾಂಸ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ಹೇಳಿದರು.
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ನಡೆದ ಬೌದ್ಧ ತ್ರಿಪಿಟಕಗಳ ಅನುಸಂಧಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಸಮ್ಮಾಸಂಬುದ್ಧನಿಗೆ ಮಾತ್ರ ಹೊಳೆಯಬಹುದಾದ ನಿಖರ, ಸ್ಪಷ್ಟ, ಅನುಭವ ಭೂಮಿಕೆಯಿಂದ ಹೊರಟ ಜ್ಞಾನ ಈ ಅಭಿಧಮ್ಮದಲ್ಲಿದೆ. ಅದವೇ ಸಬ್ಬ ಜ್ಞಾನವಾಗಿದ್ದು, ಅಭಿಧಮ್ಮ ಪಿಟಕ ಮನಃಶಾಸ್ತ್ರ ಗ್ರಂಥ’ ಎಂದು ಅಭಿಪ್ರಾಯಪಟ್ಟರು.
ವಿದ್ವಾಂಸ ಶರತ್‌ಚಂದ್ರಸ್ವಾಮಿ ಮಾತನಾಡಿ, ‘ವಿನಯಪಿಟಕ ಭಿಕ್ಕು ಸಂಘದ ನಿಯಮಾವಳಿಗನ್ನು ಕುರಿತು ಉಪದೇಶ ನೀಡುತ್ತದೆ. ವಿನಯಪಿಟಕ ಆಜ್ಞೋಪದೇಶವಾಗಿದೆ. ಬೌದ್ಧ ಭಿಕ್ಕುಗಳಿಗೂ ವರ್ಷಾವಾಸ ಮಾಡುವುದು ಕಡ್ಡಾವಾಗಿತ್ತು. ವಿನಯಪಿಟಕದಲ್ಲಿ ಸುತ್ತವಿಭಂಗ, ಖಂದಕ ವಿಭಂಗದಂತಹ ವಿಭಾಗಗಳಿವೆ’ ಎಂದರು.
ನಾಲ್ಕು ಪಾರಾಜಿತಗಳು, ಸಂಘಾಧಿಶೇಷಗಳು, ಅನಿಯಮಧಮ್ಮಗಳು, ನಿಸರ್ಗಿಯ ಧಮ್ಮಗಳುಭಿಕ್ಕುಗಳ ಆಸೆ, ವ್ಯಾಮೋಹ, ಅಪರಾಧಗಳಿಂದ ಮುಕ್ತರಾಗಿ ಸರಳ ಜೀವನ ನಡೆಸಬೇಕೆಂಬುದಾಗಿ ಭಗವಾನ್ ಬುದ್ಧ ಬೋಧಿಸಿದ್ದಾರೆ ಎಂದು ಹೇಳಿದರು.
ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ನೀಡಲಾಯಿತು. ಪ್ರೊ. ಎಚ್.ಟಿ. ಪೋತೆ ಮಾತನಾಡಿದರು. ಕೆ.ಪಿ. ರಾವ್, ಪಾಲಿ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಉಪಸ್ಥಿತರಿದ್ದರು.