ಶ್ರೀಮಂತ ಹಾಗೂ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾದ ಟೆನಿಸ್‌ನ ಪ್ರತಿಷ್ಠಿತ ಕೂಟ ವಿಂಬಲ್ಡನ್‌ಗೆ ಸಂಬಂಧಿಸಿದ ಕುತೂಹಲಕಾರಿಯಾದ ಕೆಲವು ಮಾಹಿತಿ ಇಲ್ಲಿವೆ.
ಬಿಳಿ ಉಡುಪು
ವಿಂಬಲ್ಡನ್‌ನಲ್ಲಿ ಕಣಕ್ಕಿಳಿಯುವ ಪ್ರತಿಯೊಬ್ಬ ಆಟಗಾರನೂ ಸಂಪೂರ್ಣ ಬಿಳಿ ಬಣ್ಣದ ಉಡುಪುಗಳನ್ನೇ ಧರಿಸಬೇಕು. ಒಳ ಉಡುಪುಗಳೂ ಸೇರಿದಂತೆ ಯಾವುದರ ಬಣ್ಣವೂ ಚೂರೂ ವ್ಯತ್ಯಾಸವಾಗುವಂತಿಲ್ಲ.
ರಾಜಮನೆತನಕ್ಕೆ ಗೌರವ
ಯಾವುದೇ ಪಂದ್ಯವನ್ನು ವೀಕ್ಷಿಸಲು ರಾಜವಂಶಸ್ಥರು ಹಾಜರಿದ್ದರೆ, ಪ್ರತಿಯೊಬ್ಬ ಆಟಗಾರ ಕ್ರೀಡಾಂಗಣಕ್ಕೆ ಪ್ರವೇಶಿಸುವ ಮುನ್ನ ತಲೆ ಬಾಗಿ ನಮಿಸಬೇಕು
ಆಹ್ವಾನಿತರಿಗಷ್ಟೇ ರಾಯಲ್ ಬಾಕ್ಸ್‌ನಲ್ಲಿ ಆಸನ
ರಾಜ ವಂಶಸ್ಥರಿಂದ ಆಹ್ವಾನ ಪಡೆದವರಷ್ಟೇ ರಾಯಲ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಬಹುದು. ಇಲ್ಲದಿದ್ದರೆ, ಎಷ್ಟೇ ಹಣ ನೀಡಿದರೂ, ಆ ಬಾಕ್ಸ್‌ನ ಟಿಕೆಟ್ ಖರೀದಿಸಲು ಸಾಧ್ಯವಿಲ್ಲ.
ವಿಂಬಲ್ಡನ್ ಟವಲ್ ಗುಜರಾತ್‌ನದ್ದು
ಪಂದ್ಯಗಳ ವೇಳೆ ಆಟಗಾರರು ಬಳಸುವ ನೇರಳೆ ಮತ್ತು ಹಸಿರು ಬಣ್ಣದ ಕಾಟನ್ ಟವಲ್‌ಗಳು ಗುಜರಾತ್‌ನ ವಾಪಿಯಲ್ಲಿ ತಯಾರಾಗುತ್ತವೆ.
ಯಾರಿಗೂ ಇಲ್ಲ ವಿಐಪಿ ಆತಿಥ್ಯ
ಎಷ್ಟು ದೊಡ್ಡ ಆಟಗಾರನೇ ಆದರೂ, ಯಾರಿಗೂ ಇಲ್ಲಿ ವಿಶೇಷ ಆತಿಥ್ಯ, ಉಪಚಾರವಿಲ್ಲ. ರೋಜರ್ ಫೆಡರರ್, ರಫೇಲ್ ನಡಾಲ್, ನೊವಾಕ್ ಜೊಕೊವಿಚ್, ಸರೇನಾ ವಿಲಿಯಮ್ಸ್ ಅವರಂತಹ ದಿಗ್ಗಜರೂ, ಲಾಕರ್ ರೂಮ್‌ಗಳು ಮತ್ತು ಸ್ನಾನಗೃಹಗಳನ್ನು ಯುವ ತಾರೆಯರೊಂದಿಗೆ ಹಂಚಿಕೊಳ್ಳುತ್ತಾರೆ.
ಕಾವಲುಗಾರ ಗಿಡುಗ
ಪಂದ್ಯಗಳಿಗೆ ಪಾರಿವಾಳಗಳು ತೊಂದರೆ ನೀಡದಂತೆ 'ರುಫಸ್' ಗಿಡುಗ ಕಾವಲು ಕಾಯುತ್ತದೆ. ತರಬೇತಿ ಪಡೆದ ಈ ರುಫಸ್ ಬಳಿಯೂ ವಿಂಬಲ್ಡನ್ ಸೆಕ್ಯುರಿಟಿ ಪಾಸ್ ಇದೆ.
ಟ್ರೋಫಿ ಮೇಲೊಂದು ಪೈನಾಪಲ್
ಪ್ರಶಸ್ತಿ ಗೆದ್ದ ಆಟಗಾರರಿಗೆ ನೀಡುವ ಟ್ರೋಫಿ ಮೇಲೊಂದು ಪೈನಾಪಲ್ ಹಣ್ಣಿನ ಆಕೃತಿ ಇರುವುದನ್ನು ಗಮನಿಸಬಹುದು. ಈ ಹಣ್ಣು, 17ನೇ ಶತಮಾನದ ವೇಳೆ ಇಂಗ್ಲೆಂಡ್‌ನಲ್ಲಿ ಹಣ್ಣು ಸಂಸತ್ತು ಮತ್ತು ಅತಿಥಿ ಸತ್ಕಾರದ ಪ್ರತೀಕವಾಗಿತ್ತು. ಅದೇ ಕಾರಣಕ್ಕೆ ಟ್ರೋಫಿ ಮೇಲೆ ಸೇರಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಅದ್ಭುತ ಹಣ್ಣನ್ನು ಮರಳಿ ತಂದ ವಸಾಹತುಶಾಹಿ ಅನ್ವೇಷಕರಿಗೆ ನೀಡುವ ಗೌರವ ಎನ್ನುವುದು ಕೆಲವರ ಅಂಬೋಣ.
ನಿತ್ಯವೂ ಹುಲ್ಲು ಟ್ರಿಮ್
ಟೆನಿಸ್ ಅಂಗಳದಲ್ಲಿ ಬೆಳೆದಿರುವ ಹುಲ್ಲನ್ನು ನಿತ್ಯವೂ ನಿಖರವಾಗಿ 8 ಮಿ.ಮೀ. ಕತ್ತರಿಸಲಾಗುತ್ತದೆ. ಅದು ಒಂದಿಷ್ಟೂ ಆಚೀಚೆಯಾಗುವಂತಿಲ್ಲ. ಬಕ್ಕಿಂಗ್‌ಹ್ಯಾಮ್ ಅರಮನೆ ಮುಂಗಾದಲ್ಲಿರುವ ಹುಲ್ಲು ಹಾಸಿನಂತೆಯೇ ಕಾಣುವಂತೆ ಅಂಕಣವನ್ನು ನೋಡಿಕೊಳ್ಳಲಾಗುತ್ತದೆ.
ಬಾಲ್ ಬಾಯ್‌ಗಳಿಗೆ ಅಥ್ಲೀಟ್‌ಗಳಂತೆ ತರಬೇತಿ
ಪಂದ್ಯಗಳ ವೇಳೆ, ಆಟಗಾರರಿಗೆ ಚೆಂಡನ್ನು ಎತ್ತಿಕೊಡುವ ಬಾಲಕ – ಬಾಲಕಿಯರಿಗೆ ಫಿಟ್‌ನೆಸ್ ಕಾಪಾಡಿಕೊಳ್ಳಲು ನಿಕಟ ತರಬೇತಿ ನೀಡಲಾಗುತ್ತದೆ. ಅವರನ್ನು ಅಥ್ಲೀಟ್‌ಗಳಂತೆ ಸಜ್ಜುಗೊಳಿಸಲಾಗುತ್ತದೆ.
ದಂಡ ಕಟ್ಟಿದ್ದ ಫೆಡರರ್
2013ರಲ್ಲಿ ಕಿತ್ತಳೆ ಬಣ್ಣದ ತಳ ಹೊಂದಿದ್ದ ಶೂ ಧರಿಸಿದ್ದಕ್ಕಾಗಿ ದಿಗ್ಗಜ ರೋಜರ್ ಫೆಡರರ್ ಅವರು ದಂಡ ಕಟ್ಟಿದ್ದರು.
ರೇನ್‌ಪ್ರೂಫ್ ಕೋರ್ಟ್
ವಿಂಬಲ್ಡನ್ ಪಂದ್ಯಗಳು ನಡೆಯುವ ಸೆಂಟರ್ ಕೋರ್ಟ್ 'ರೇನ್ ಪ್ರೂಫ್' ಮೇಲ್ಛಾವಣಿ ಹೊಂದಿದೆ. ಮಳೆ ಬಂದರೆ ಈ ಮೇಲ್ಛಾವಣಿಯನ್ನು ಕೇವಲ 10 ನಿಮಿಷದಲ್ಲೇ ಮುಚ್ಚಬಹುದು.
ಟಿಕೆಟ್‌ಗಾಗಿ ಟೆಂಟ್
ಪಂದ್ಯದ ಟಿಕೆಟ್‌ಗಳನ್ನು ಖರೀದಿಸಲು ಟೆನಿಸ್ ಪ್ರಿಯರು ಹಾತೊರೆಯುತ್ತಾರೆ. ಟಿಕೆಟ್‌ಗಾಗಿ ಹಿಂದಿನ ದಿನ ರಾತ್ರಿಯೇ ಕ್ರೀಡಾಂಗಣದ ಹೊರಗೆ ಟೆಂಟ್‌ಗಳನ್ನು ಹಾಕಿಕೊಂಡು ಕಾಯ್ದ ಉದಾಹರಣೆಗಳಿವೆ.
ಸೆಂಟರ್ ಕೋರ್ಟ್ ಮೇಲೆ ಬಿದ್ದಿತ್ತು ಬಾಂಬ್
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಿಂಬಲ್ಡನ್ ಸೆಂಟರ್ ಕೋರ್ಟ್ ಮೇಲೆ ಬಾಂಬ್ ದಾಳಿಯಾಗಿತ್ತು. ಇದರಿಂದಾಗಿ, ಸುಮಾರು 1,200 ಆಸನಗಳು ಸಂಪೂರ್ಣ ಹಾನಿಯಾಗಿದ್ದವು.
ಬ್ರಾಂಡಿಂಗ್‌ಗೆ ಅವಕಾಶವಿಲ್ಲ
ಪ್ರಾಯೋಜಕತ್ವಕ್ಕೆ ಸಂಬಂಧಿಸಿದ ಯಾವುದೇ ಬ್ರಾಂಡ್‌ನ ಬ್ಯಾನರ್‌ಗಳ ಪ್ರದರ್ಶನಕ್ಕೆ ಅವಕಾಶವಿಲ್ಲ.
ಮ್ಯಾನ್ಯುವಲ್ ಸ್ಕೋರ್‌ಬೋರ್ಡ್
ಪಂದ್ಯದ ವೇಳೆ ಆಟಗಾರರ ಪಾಯಿಂಟ್, ಫಲಿತಾಂಶ ಪ್ರದರ್ಶಿಸುವ ಸ್ಕೋರ್‌ಬೋರ್ಡ್‌ಗೆ ಈಗಲೂ ಸ್ಮಾರ್ಟ್ ಟಚ್ ಸಿಕ್ಕಿಲ್ಲ. ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಳ್ಳಲಾಗಿದೆ. ಅಂಗಳದಲ್ಲಿನ ಸಿಬ್ಬಂದಿ ಕೈಗಳಿಂದಲೇ ಕ್ಷಣಕ್ಷಣಕ್ಕೂ ಅಪ್‌ಡೇಟ್ ಮಾಡುತ್ತಾರೆ.
ಕ್ರೀಮ್ ಜೊತೆ ಸ್ಟ್ರಾಬೆರಿ
ಸ್ಟ್ರಾಬೆರಿ ಮತ್ತು ಕ್ರೀಮ್ ವಿಂಬಲ್ಡನ್‌ನ ಅಧಿಕೃತ ಉಪಹಾರಗಳಾಗಿವೆ. ಪಂದ್ಯದ ಮುನ್ನಾದಿನ ಕೆಂಟ್‌ನಿಂದ ಆರಿಸಿದ ಉತ್ಕೃಷ್ಟ ಗುಣಮಟ್ಟದ ಸ್ಟ್ರಾಬೆರಿಗಷ್ಟೇ ಅವಕಾಶವಿದೆ. 1877ರಲ್ಲಿ ಆರಂಭವಾದ ಸಂಪ್ರದಾಯದಂತೆ, ಹಣ್ಣನ್ನು ಕ್ರೀಮ್ ಜೊತೆ ನೀಡಲಾಗುತ್ತದೆ. ಅಭಿಮಾನಿಗಳು ಪ್ರತಿವರ್ಷ ಸುಮಾರು 20 ಲಕ್ಷ ಸ್ಟ್ರಾಬೆರಿ ಸವಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.