ಮಂಗಳವಾರ, ಜೂನ್ 22, 2021
29 °C
ಎನ್‍ಡಿಆರ್‌ಎಫ್ ತಂಡದ 25 ಸಿಬ್ಬಂದಿಯಿಂದ ನಿರಂತರ ಶೋಧ ಕಾರ್ಯ

ಕಲಬುರ್ಗಿ: ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತಾಲ್ಲೂಕಿನ ಭೀಮಳ್ಳಿ ಗ್ರಾಮದ ಬಳಿಯ ಹಳ್ಳದಲ್ಲಿ ಗುರುವಾರ ರಾತ್ರಿ 12 ವರ್ಷದ ಬಾಲಕ ಕೊಚ್ಚಿಕೊಂಡು ಹೋಗಿದ್ದಾನೆ. ಈತನೊಂದಿಗೆ ಇದ್ದ 24 ವರ್ಷದ ಯುವಕ ಸಿನಿಮೀಯ ರೀತಿಯಲ್ಲಿ ಪ್ರವಾಹದಿಂದ ಪಾರಾಗಿದ್ದಾನೆ.

ಬಾಲಕನ ಪತ್ತೆಗೆ 25 ಜನರ ಎನ್‌ಡಿಆರ್‌ಎಫ್‌ ತಂಡ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಗುರುವಾರ ರಾತ್ರಿ ಹಾಗೂ ಶುಕ್ರವಾರ ಇಡೀ ದಿನ ತಡಕಾಡಿದರೂ ಪತ್ತೆಯಾಗಿಲ್ಲ.

ನಗರದ ದುಬೈ ಕಾಲೊನಿ ನಿವಾಸಿ ಮಲ್ಲಿಕಾರ್ಜುನ ನೀಲಕಂಠ ಕುದಮೂಡ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಬಾಲಕ. ಇವನೊಂದಿಗೆ ಇದ್ದ ಸಂಜಯ ಗಂಧಿ ನಗರದ ನಿವಾಸಿ ವಿಶ್ವಾರಾಧ್ಯ ಸಿದ್ಧಪ್ಪ ಕುಂಬಾರ ಸಿನಿಮೀಯ ರೀತಿಯಲ್ಲಿ ಬದುಕಿ ಬಂದಿದ್ದಾರೆ.

ಘಟನೆ ವಿವರ: ವಿಶ್ವಾರಾಧ್ಯ ದುಬೈ ಕಾಲೊನಿಯಲ್ಲಿ ಪಾನಿಪೂರಿ ಮಾರಿಕೊಂಡು ವಾಸವಾಗಿದ್ದ. ಸಾವಳಗಿ ಗ್ರಾಮದಲ್ಲಿರುವ ಆತನ ಸಹೋದರ ಸಂಬಂಧಿಯೊಬ್ಬರು ಶ್ರೀಶೈಲದೇವಸ್ಥಾನಕ್ಕೆ ಹೋಗಿ ಬಂದಿದ್ದರಿಂದ ಅವರಿಗೆ ಬಟ್ಟೆ ಕಾಣಿಕೆ ನೀಡಲು ಗುರುವಾರ ಸಾವಳಗಿಗೆ ಹೋಗಿದ್ದ. ಬೈಕ್‌ನಲ್ಲಿ ತನ್ನ ಸಂಗಡ ಮಲ್ಲಿಕಾರ್ಜುನನನ್ನೂ ಕರೆದುಕೊಂಡು ಹೋಗಿದ್ದ.

ಬಟ್ಟೆ ಕಾಣಿಕೆ ನೀಡಿದ ಬಳಿಕ ಇಬ್ಬರೂ ಬೈಕ್‌ ಮೇಲೆ ಮರಳುತ್ತಿದ್ದರು. ಮಾರ್ಗಮಧ್ಯೆ ಭೀಮಳ್ಳಿ ಬಳಿಯ ಭೋಸಗಾ ಕೆರೆ ಮತ್ತು ಹಳ್ಳದ ನೀರಿನಿಂದ ನಿರ್ಮಾಣವಾದ ಜಲಪಾತ ನೋಡಲು ಹೋದರು. ಬೈಕ್ ಮೇಲೆ ಹಳ್ಳದ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಬೈಕ್‍ ಸಮೇತ ಬಿದ್ದು, ತೇಲಿಕೊಂಡು ಹೋದರು. ಸ್ವಲ್ಪ ದೂರ ಹೋದ ಬಳಿಕ ವಿಶ್ವಾರಾಧ್ಯ ಗಿಡದ ಕಂಠಿಯೊಂದಕ್ಕೆ ಸಿಕ್ಕಿಕೊಂಡು ನಿಂತ. ಆದರೆ, ಮಲ್ಲಿಕಾರ್ಜುನ ನೀರಿನ ಸೆಳವಲ್ಲಿ ಕಣ್ಮರೆಯಾದ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿಯವರೆಗೂ ಬಾಲಕನ ಸುಳಿವು ಸಿಗಲಿಲ್ಲ. ಸ್ಥಳದಲ್ಲಿ ಸೇರಿದ ಬಾಲಕನ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ತಹಸೀಲ್ದಾರ್‌ ಮಲ್ಲೇಶಿ ತಂಗಾ, ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ ಪಾಟೀಲ ದಣ್ಣೂರ, ಡಿಸಿಪಿ ಕಿಶೋರಬಾಬು, ಇನ್‍ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ ಮತ್ತು ಸಿಬ್ಬಂದಿ ಭೇಟಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು