ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬೇಕು ಇನ್ನಷ್ಟು ವೇಗ

ಜಲಾಶಯಗಳನ್ನು ಪ್ರವಾಸಿ ತಾಣವಾಗಿಸಲು ₹ 18 ಕೋಟಿ ಪ್ರಸ್ತಾವ ಸಲ್ಲಿಕೆ
Last Updated 26 ಜುಲೈ 2021, 4:18 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯು ಇದೀಗ ಪ್ರವಾಸೋದ್ಯಮದ ಬೆಳವಣಿಗೆಯತ್ತ ಹೆಜ್ಜೆ ಹಾಕುವ ಮೂಲಕ ಮತ್ತೊಂದು ಹೊರಳು ಹಾದಿಯಲ್ಲಿದೆ.

ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿರುವ ಬುದ್ಧ ಹಾಗೂ ಅಶೋಕ ಚಕ್ರವರ್ತಿಗೆ ಸಂಬಂಧಿಸಿದ ಶಾಸನಗಳು, ಐತಿಹಾಸಿಕ ಸ್ಮಾರಕಗಳು, ಸೇಡಂ ತಾಲ್ಲೂಕು ಮಳಖೇಡದ ಕೋಟೆ, ಕಲಬುರ್ಗಿಯ ಬಹಮನಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ, ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ದತ್ತ ಮಂದಿರ, ಘತ್ತರಗಿಯ ಭಾಗ್ಯವಂತಿದೇವಿ ದೇವಸ್ಥಾನಗಳು ಜಿಲ್ಲೆಯ ಮುಕುಟಪ್ರಾಯವಾಗಿವೆ. ಚಿಂಚೋಳಿ ತಾಲ್ಲೂಕಿನ ವನ್ಯಜೀವಿ ಧಾಮ, ಎತ್ತಿಪೋತೆ ಜಲಪಾತ ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತಿವೆ.

ಮೂಲಸೌಕರ್ಯಗಳ ಕೊರತೆ: ರಾಷ್ಟ್ರಮಟ್ಟದ ಭೂಪಟದಲ್ಲಿ ಮಿಂಚುವ ಸಾಮರ್ಥ್ಯವಿರುವ ಹಲವು ಐತಿಹಾಸಿಕ ತಾಣಗಳು ಜಿಲ್ಲೆಯಲ್ಲಿದ್ದರೂ ಅಲ್ಲಿಗೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯಗಳು ಇಲ್ಲದೇ ಇರುವುದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಿಲ್ಲೆ ಹಿಂದುಳಿಯುವಂತೆ ಮಾಡಿದೆ.

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಯುದ್ಧದಲ್ಲಿ ಬಳಕೆ ಮಾಡಲೆಂದು ತಯಾರಿಸಿದ ತೋಪು ಕಲಬುರ್ಗಿಯ ಬಹಮನಿ ಕೋಟೆಯಲ್ಲಿದ್ದು, ಇಂದಿಗೂ ಪ್ರವಾಸಿಗರ ಆಕರ್ಷಣೆಯಾಗಿ ಉಳಿದಿದೆ. ತೋಪು ಇರುವ ಕೋಟೆಯ ನಿರ್ವಹಣೆ ಜವಾಬ್ದಾರಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹೊತ್ತಿದೆ. ಆದರೆ, ಕೋಟೆಗೆ ಕಾವಲು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ಕುಳಿತು ವಿಶ್ರಮಿಸಿಕೊಳ್ಳಲು ಆಸನ, ಉದ್ಯಾನವನದ ನಿರ್ಮಾಣ ಆಗಿಲ್ಲ. ಇಲ್ಲಿ ಹಲವು ವರ್ಷಗಳಿಂದ 180ಕ್ಕೂ ಅಧಿಕ ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದು, ಇದರಿಂದಾಗಿ ಇಲ್ಲಿಗೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಸನ್ನತಿ, ಕನಗನಹಳ್ಳಿ ಹಾಗೂ ನಾಗಾವಿಯ ಸ್ಮಾರಕಗಳ ರಕ್ಷಣೆಗಾಗಿ ಹಣ ಬಿಡುಗಡೆ ಮಾಡಿದ್ದರು. ಅಶೋಕ ಮೂರ್ತಿ ಸೇರಿದಂತೆ ಇತರೆ ಐತಿಹಾಸಿಕ ಮಹತ್ವವಿರುವ ಸ್ಮಾರಕಗಳನ್ನು ಜತನ ಮಾಡಲು ಮ್ಯೂಸಿಯಂ ಮಾಡುವ ಪ್ರಸ್ತಾಪವೂ ಇತ್ತು. ಇದಾವುದೂ ಕೈಗೂಡಿಲ್ಲ.

ರಾಷ್ಟ್ರಕೂಟರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಸೇಡಂ ತಾಲ್ಲೂಕಿನ ಮಳಖೇಡವು ಇಂದು ದೊಡ್ಡ ಹಳ್ಳಿಯಾಗಿ ಉಳಿದಿದೆಯಷ್ಟೇ.

ಚಿಂಚೋಳಿ ತಾಲ್ಲೂಕಿನ ಗಡಿಯಲ್ಲಿರುವ ಎತ್ತಿಪೋತೆ ಜಲಪಾತವು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಭೋರ್ಗರೆಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಆದರೆ, ಅಲ್ಲಿಗೆ ಸಮೀಪದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ. ಚಂದ್ರಂಪಳ್ಳಿ ಜಲಾಶಯ ನೋಡಲು ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲಿ ಅರಣ್ಯ ಇಲಾಖೆಯ ಎರಡು ಕಾಟೇಜ್‌ಗಳಿವೆ. ಇನ್ನಷ್ಟು ವಸತಿ ವ್ಯವಸ್ಥೆ, ಹೋಟೆಲ್, ಟ್ರೆಕ್ಕಿಂಗ್‌ಗೆ ಅರಣ್ಯ ಇಲಾಖೆಯಿಂದ ಅವಕಾಶ ನೀಡಿ ಅದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಿದರೆ ಇತ್ತ ಕಡೆ ಬರುವವರ ಸಂಖ್ಯೆಯೂ ಹೆಚ್ಚಲಿದೆ ಎಂಬುದು ಚಾರಣಪ್ರಿಯರ ಅಭಿಪ್ರಾಯ.

ಬಿಡುಗಡೆಯಾಗದ ₹ 10 ಕೋಟಿ!
ದೇವಲಗಾಣಗಾಪುರದ ದತ್ತಮಂದಿರದ ಸುತ್ತಲಿನ ಆವರಣದ ಅಭಿವೃದ್ಧಿಗಾಗಿ 2019ರಲ್ಲಿಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ₹ 10 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆರ್ಥಿಕ ಇಲಾಖೆಗೆ ಹಣ ಬಿಡುಗಡೆ ಮಾಡಲು ತಿಳಿಸಿದ್ದಾಗಿಯೂ ಸುದ್ದಿಯಾಗಿತ್ತು. ಆದರೆ, ನಂತರದ ದಿನಗಳಲ್ಲಿ ಆ ಅನುದಾನ ಬರಲೇ ಇಲ್ಲ.

’ರಾಜ್ಯ ಸರ್ಕಾರ ₹ 10 ಕೋಟಿ ಘೋಷಣೆ ಮಾಡಿತ್ತಾದರೂ ಆ ಹಣ ಬಿಡುಗಡೆಯಾಗಿಲ್ಲ. ಬಿಡುಗಡೆಯಾಗುವ ಮಾಹಿತಿಯೂ ಇಲ್ಲ‘ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು.

ಕಲಬುರ್ಗಿ ಪ್ರವಾಸಿ ಸರ್ಕ್ಯೂಟ್‌ ಜಾರಿಯಾಗಲಿ
ಕಲಬುರ್ಗಿ ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳಿದ್ದರೂ ಹಲವು ಕಾರಣಗಳಿಂದಾಗಿ ಅವುಗಳಿಗೆ ಜನರು ಹೆಚ್ಚಾಗಿ ಹೋಗುತ್ತಿಲ್ಲ. ಮುಖ್ಯವಾಗಿ ಅಲ್ಲಿಗೆ ತೆರಳುವ ಸಂಪರ್ಕ ರಸ್ತೆಯ ಅವ್ಯವಸ್ಥೆ ಇದೆ. ಜೊತೆಗೆ, ಮೂಲಸೌಕರ್ಯಗಳಾದ ಹೋಟೆಲ್, ಕುಡಿಯುವ ನೀರು, ತಾಣದ ಬಗ್ಗೆ ಪ್ರಚಾರ ಮಾಡುವಲ್ಲಿ ಹಿಂದೆ ಬಿದ್ದಿರುವುದೂ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ಅವರು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ವಿವಿಧ ಸ್ಥಳಗಳಿಗೆ ಪ್ರವಾಸಿಗಳನ್ನು ಕರೆದೊಯ್ಯಲು ಎರಡು ಬಸ್‌ಗಳ ವ್ಯವಸ್ಥೆ ಮಾಡಿದ್ದರು. ಆದರೆ, ಜನರ ನಿರಾಸಕ್ತಿಯಿಂದಾಗಿ ಬಸ್‌ ಸಂಚಾರ ಸ್ಥಗಿತಗೊಂಡಿತು.

ಕಲಬುರ್ಗಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವಂತೆ ಕಲ್ಯಾಣ ಕರ್ನಾಟಕ ಕೃಷಿ, ಸಾಂಸ್ಕೃತಿಕ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹಾಗೂ ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ನಿಟ್ಟಿನಲ್ಲಿ ಹೈ–ಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಪ್ರಸ್ತಾಪವೊಂದನ್ನು ಸಿದ್ಧಗೊಳಿಸುತ್ತಿದ್ದು, ಕಲಬುರ್ಗಿ ಪ್ರವಾಸಿ ಸರ್ಕ್ಯೂಟ್ ಮಾಡುವುದರಿಂದ ಸಹಸ್ರಾರು ಜನರಿಗೆ ಉದ್ಯೋಗ ದೊರೆಯುವ ಮತ್ತು ಹೋಟೆಲ್ ಉದ್ಯಮಕ್ಕೆ ಬಲ ನೀಡುವುದು ಸಾಧ್ಯವಾಗಲಿದೆ. ಸರ್ಕಾರಕ್ಕೆ ಈ ಕುರಿತು ಶೀಘ್ರವೇ ಮನವಿ ಸಲ್ಲಿಸಲಿದ್ದೇವೆ.
-ಪ್ರಶಾಂತ ಮಾನಕರ,ಎಚ್‌ಕೆಸಿಸಿಐ ಅಧ್ಯಕ್ಷ, ಕಲಬುರ್ಗಿ

ಸಿನಿಮಾ ಚಿತ್ರೀಕರಣ ಆಗಬೇಕು
ಜಿಲ್ಲೆಯಲ್ಲಿ ಬಹಮನಿ ಕೋಟೆ, ಮಳಖೇಡ ಕೋಟೆ ಹಾಗೂ ಸನ್ನತಿಯಲ್ಲಿ ಅಶೋಕನ ಕುರಿತಾದ ಕುರುಹುಗಳ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಹೆಚ್ಚು ಪ್ರಚಾರಕ್ಕೆ ತರುವ ವಿಧಾನವೆಂದರೆ ಈ ಸ್ಥಳಗಳಲ್ಲಿ ಸಿನಿಮಾಗಳ ಚಿತ್ರೀಕರಣ. ಕನ್ನಡ ಸಿನಿಮಾ ರಂಗದವರು ಈ ಬಗ್ಗೆ ಗಮನ ಹರಿಸಬೇಕು. ಪ್ರವಾಸೋದ್ಯಮ ಇಲಾಖೆಯು ಇಲ್ಲಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮಾರ್ಗದರ್ಶಿಗಳನ್ನು ನೇಮಕ ಮಾಡಬೇಕು. ವಿವಿಧ ಶಾಲೆಯ ಆಡಳಿತ ಮಂಡಳಿಯವರು ಮಕ್ಕಳಲ್ಲಿ ಇತಿಹಾಸ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಐತಿಹಾಸಿಕ ತಾಣಗಳಿಗೆ ಶಾಲಾ ಮಕ್ಕಳನ್ನು ಕರೆದೊಯ್ಯಬೇಕು.
-ಡಾ.ಶಂಭುಲಿಂಗ ವಾಣಿ,ಸಹ ಪ್ರಾಧ್ಯಾಪಕ, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಬುರ್ಗಿ

ಪ್ರವಾಸಿತಾಣವಾಗಿ ಜಲಾಶಯ ಅಭಿವೃದ್ಧಿ
ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ಅವರು ಆಳಂದ ತಾಲ್ಲೂಕಿನ ಅಮರ್ಜಾ ಹಾಗೂ ಚಿಂಚೋಳಿ ತಾಲ್ಲೂಕಿನ ಜಲಾಶಯಗಳನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಸ್ತಾವ ಸಿದ್ಧಪಡಿಸಲು ತಿಳಿಸಿದ್ದರು. ಅದರಂತೆ, ಅಮರ್ಜಾ ಜಲಾಶಯಕ್ಕೆ ₹ 10 ಕೋಟಿ ಹಾಗೂ ಚಂದ್ರಂಪಳ್ಳಿ ಜಲಾಶಯ ಅಭಿವೃದ್ಧಿಗೆ ₹ 8 ಕೋಟಿ ಮೊತ್ತದ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಲಾಗಿದೆ.

ಅಲ್ಲದೇ, ಇಲಾಖೆಯ ವತಿಯಿಂದ 2017ರಿಂದ ಇಲ್ಲಿಯವರೆಗೆ 78 ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಳಖೇಡ ಕೋಟೆ ಅಭಿವೃದ್ಧಿಗೆ ₹ 2 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ತಂಗಲು ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗುತ್ತಿದೆ.
-ಪ್ರಭುಲಿಂಗ ತಳಕೇರಿ,ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT