ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹಿಷ್ಕಾರಕ್ಕೆ ಒಳಗಾದ ಕೃತಿಗಳೇ ಶ್ರೇಷ್ಠ: ಮೀನಾಕ್ಷಿ ಬಾಳಿ

ಕಥೆಗಾರ ಮಹಾಂತೇಶ ನವಲಕಲ್ ಬರೆದ ಬುದ್ಧ ಗಂಟೆಯ ಸದ್ದು ಕೃತಿ ಬಿಡುಗಡೆ
Published : 8 ಸೆಪ್ಟೆಂಬರ್ 2024, 15:49 IST
Last Updated : 8 ಸೆಪ್ಟೆಂಬರ್ 2024, 15:49 IST
ಫಾಲೋ ಮಾಡಿ
Comments

ಕಲಬುರಗಿ: ‘ಆಯಾ ಕಾಲಘಟ್ಟದಲ್ಲಿನ ಘಟನೆಗಳಿಗೆ ಮುಖಾಮುಖಿಯಾಗುವ, ತನ್ನನ್ನೇ ತಾನು ಶ್ರೇಷ್ಠ ಎಂದುಕೊಂಡವರನ್ನು ಪ್ರಶ್ನಿಸುವ ಕೃತಿಗಳನ್ನು ಬಹಿಷ್ಕರಿಸಿದ, ಸುಟ್ಟು ಹಾಕಿದ ಘಟನೆಗಳು ಇತಿಹಾಸದಲ್ಲಿ ಅನೇಕವಿವೆ. ಅವೇ ಕೃತಿಗಳು ನಂತರ ಶ್ರೇಷ್ಠವಾಗಿದ್ದನ್ನು ಗಮನಿಸಿದ್ದೇವೆ’ ಎಂದು ಚಿಂತಕಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.

ಸಮುದಾಯ ಕಲಬುರಗಿ, ಪಲ್ಲವ ಪ್ರಕಾಶನದ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಥೆಗಾರ ಮಹಾಂತೇಶ ನವಲಕಲ್ ಅವರ ‘ಬುದ್ಧ ಗಂಟೆಯ ಸದ್ದು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಹಿಷ್ಕಾರಗೊಂಡ ಕೃತಿಗಳ ಪಟ್ಟಿಯಲ್ಲಿ ತಮ್ಮ ಕೃತಿಯ ಹೆಸರಿಲ್ಲ ಎಂದು ಸಾಹಿತಿಗಳು ಬೇಸರಪಟ್ಟುಕೊಳ್ಳುವ ಸನ್ನಿವೇಶವೂ ಇತ್ತು. ಸಂಪ್ರದಾಯ, ಯಥಾಸ್ಥಿತಿ ವಾದವನ್ನು ಪ್ರಶ್ನಿಸಿದ, ಹೊಸ ಚಿಂತನೆಯನ್ನು ಹರಡಿದ ಕೃತಿಗಳನ್ನೇ ಸುಟ್ಟು ಹಾಕುವ ಇಲ್ಲವೇ ಬಹಿಷ್ಕರಿಸುವ ರೂಢಿ ಇತ್ತು’ ಎಂದು ಹೇಳಿದರು.

ಕಥೆಗಾರ ಮಹಾಂತೇಶ ನವಲಕಲ್ ಅವರು ಕೃಷಿ ವಲಯದ ಬಿಕ್ಕಟ್ಟುಗಳನ್ನು ಸೂಕ್ಷ್ಮವಾಗಿ ತಮ್ಮ ಕಥೆಗಳ ಮೂಲಕ ತೆರೆದಿಟ್ಟಿದ್ದಾರೆ. ಆದರೆ, ಈ ಭಾಗದ ಕಥೆಗಾರರು ಬರೆದ ಕೃತಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯದಿರುವುದು ದುರದೃಷ್ಟಕರ. ದಕ್ಷಿಣ ಕರ್ನಾಟಕದವರ ಕೃತಿ ಇನ್ನೂ ಹೊರಗೇ ಬಂದಿರುವುದಿಲ್ಲ, ಅಷ್ಟರಲ್ಲೇ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಸಿಗುತ್ತದೆ’ ಎಂದು ವಿಷಾದಿಸಿದರು.

ಕೃತಿ ಬಿಡುಗಡೆ ಮಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ‘1990ರ ದಶಕದಲ್ಲಿ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾಗತೀಕರಣ, ಉದಾರೀಕರಣದ ಪ್ರಕ್ರಿಯೆಗಳು ಆರಂಭವಾದವು. ಡಂಕೆಲ್ ಪ್ರಸ್ತಾವಗಳಿಗೆ ಭಾರತ ಸರ್ಕಾರ ಸಹಿ ಮಾಡಬಾರದು ಎಂದು ಒತ್ತಾಯಿಸಿ ದೆಹಲಿಯಲ್ಲಿ 25 ಲಕ್ಷ ಜನ ಸೇರಿ ಪ್ರತಿಭಟನೆ ನಡೆಸಿದ್ದರು. ಆದರೂ, ಜಾಗತೀಕರಣ ಒಪ್ಪಿಕೊಂಡ ಬಳಿಕ ಇಂದು ಕೃಷಿ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಏನೆಲ್ಲ ಅನಾಹುತ ಮಾಡಿವೆ ಎಂಬುದನ್ನು ನೋಡುತ್ತಿದ್ದೇವೆ. ಅಂತಹ ಅಂಶಗಳನ್ನು ಆಧರಿಸಿ ಮಹಾಂತೇಶ ನವಲಕಲ್ ಅವರು ಕಥೆಗಳನ್ನು ರಚಿಸಿದ್ದಾರೆ’ ಎಂದರು.

ಹಿರಿಯ ಸಾಹಿತಿ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ‘ನಮ್ಮಲ್ಲೇ ಜಾಗತಿಕ ಮಟ್ಟದ ಕಥೆಗಳನ್ನು ಬರೆದ ಹಲವರು ಇದ್ದರೂ ಅವರನ್ನು ಗುರುತಿಸುತ್ತಿಲ್ಲ. ಅಮೆರಿಕದ ಕಥೆಗಾರ್ತಿ ಪರ್ಲ್ ಎಸ್. ಬಕ್ ಅವರನ್ನು ಮೀರಿಸುವಂತಹ ಕಥೆಯನ್ನು ಬೀದರ್‌ನ ಶ್ರೀಕಾಂತ ಪಾಟೀಲ ಅವರು ಬರೆದಿದ್ದಾರೆ. ಮಹಾಂತೇಶ ಅವರೂ ಜಾಗತಿಕ ಶ್ರೇಷ್ಠ ಕಥೆಗಾರರ ಸಾಲಿನಲ್ಲಿ ಸೇರಿದ್ದಾರೆ. ಇವರ ಕಥೆಗಳ ಬಗ್ಗೆ ಆಗಾಗ ಚರ್ಚೆಗಳು ನಡೆಯಬೇಕು’ ಎಂದು ಸಲಹೆ ನೀಡಿದರು.

ಕೃತಿ ಲೇಖಕ ಮಹಾಂತೇಶ ನವಲಕಲ್ ಮಾತನಾಡಿ, ‘1996ರಲ್ಲಿ ಕೀಟನಾಶಕ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ಮೇಲೆ ನಡೆದ ಕಾರ್ಯಾಗಾರದಲ್ಲಿ ಕೀಟನಾಶಕವನ್ನು ಹಲವು ಬಾರಿ ಬಳಸಲು ರೈತರಿಗೆ ಹೇಗೆ ಉತ್ತೇಜಿಸಬೇಕು ಎಂದು ಹೇಳಿಕೊಡಲಾಯಿತು. ಮಣ್ಣು, ಬೆಳೆಯಲ್ಲಿ ವಿಷ ತುಂಬುವ ಇಂತಹ ಕೃತ್ಯಗಳು ರೈತ ಕುಟುಂಬದ ನನಗೆ ಸರಿಯೆನಿಸಲಿಲ್ಲ. ಅಂದಿನಿಂದ ಈ ಬಗ್ಗೆ ಬರೆಯಲು ಶುರು ಮಾಡಿದೆ’ ಎಂದರು.

ಪಲ್ಲವ ಪ್ರಕಾಶನದ ಮುಖ್ಯಸ್ಥ ಪಲ್ಲವ ವೆಂಕಟೇಶ್, ಸಮುದಾಯ ಕಲಬುರಗಿ ಅಧ್ಯಕ್ಷ ದತ್ತಾತ್ರೇಯ ಇಕ್ಕಳಕಿ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್, ಕರ್ನಾಟಕ ಕೇಂದ್ರೀಯ ವಿ.ವಿ. ಸಹಾಯಕ ‍ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್, ಶೋಭಾ ನವಲಕಲ್, ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್, ಸಿದ್ದಪ್ಪ ತಳ್ಳಳ್ಳಿ, ಸಂಧ್ಯಾ ಹೊನಗುಂಟಿಕರ್, ಲಕ್ಷ್ಮಿ ಶಂಕರ ಜೋಶಿ, ಅಜೀಮ್ ಪಾಷಾ, ಸಂಗನಗೌಡ ಹಿರೇಗೌಡ, ಮೀನಾಕ್ಷಿ ಗುತ್ತೇದಾರ ಸೇರಿದಂತೆ ಇತರರು ಭಾಗವಹಿಸಿದ್ದರು.

‘ಕ್ರಿಮಿನಾಶಕಗಳ ರಾಜಕಾರಣ ಅನಾವರಣ’

‘ಕತೆಗಾರ ಮಹಾಂತೇಶ ನವಲಕಲ್ ಅವರು ಬುದ್ಧ ಗಂಟೆಯ ಸದ್ದು ಕೃತಿಗಳ ಮೂಲಕ ಕ್ರಿಮಿನಾಶಕ ಕಂಪನಿಗಳ ಅಂತರರಾಷ್ಟ್ರೀಯ ರಾಜಕಾರಣವನ್ನು ಅನಾವರಣಗೊಳಿಸಿದ್ದಾರೆ’ ಎಂದು ಕರ್ನಾಟಕ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಲೇಖಕ ಪ್ರೊ. ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು. ಕೃತಿ ಪರಿಚಯಿಸಿದ ಅವರು ‘ರೈತರ ಜಮೀನಿನ ಮಣ್ಣನ್ನು ನಾಶ ಮಾಡುವ ಹತ್ತಾರು ರೋಗಗಳನ್ನು ತರುವ ಕೀಟನಾಶಕಗಳ ಬಗ್ಗೆ ನವಲಕಲ್ ಅವರಿಗೆ ಮಾಹಿತಿ ಇರುವುದರಿಂದ ಸಶಕ್ತವಾಗಿ ತಮ್ಮ ಕಥೆಗಳಲ್ಲಿ ತಂದಿದ್ದಾರೆ. ಒಂದು ಪ್ರೇಮ ಕಥೆಯಲ್ಲಿಯೂ ಸಾಮಾಜಿಕ ಸಂದೇಶವನ್ನು ತಂದಿದ್ದಾರೆ. ಹಲವು ಕ್ಲಿಷ್ಟಕರ ವಿಷಯಗಳ ಬಗ್ಗೆಯೂ ಹೊಸ ಬೆಳಕನ್ನು ಚೆಲ್ಲಿದ್ದಾರೆ. ಕನ್ನಡ ಎಂ.ಎ. ಓದಿದವರೂ ಬಳಕೆ ಮಾಡದಷ್ಟು ಉತ್ತಮ ಭಾಷೆಯನ್ನು ಎಂಎಸ್ಸಿ ಅಗ್ರಿ ಓದಿರುವ ನವಲಕಲ್ ಅವರು ಬಳಕೆ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT