ಸೋಮವಾರ, ಮೇ 17, 2021
21 °C
ಶುಕ್ರವಾರವೂ ಖಾಸಗಿ ವಾಹನಗಳನ್ನೇ ಆಶ್ರಯಿಸಿದ ಪ್ರಯಾಣಿಕರು

‘ಹೆಚ್ಚಿನ ದರ ಕೇಳಿದರೆ ದೂರು ಕೊಡಿ’

‌ ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಶುಕ್ರವಾರ 10ನೇ ದಿನದಲ್ಲಿ ಮುಂದುವರಿದಿದೆ. ಎಂದಿನಂತೆ ಹಲವು ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಆಶ್ರಯಿಸಿದರು.

ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿತ್ತು. ಖಾಸಗಿ ವಾಹನಗಳು ಬಸ್‌ ನಿಲ್ದಾಣದ ಒಳಗೆ ಬರದೇ ಹೊರಗಿನಿಂದಲೇ ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬಂತು.

ಹೆಚ್ಚಿನ ದರ ವಸೂಲಿ ಮಾಡಿದರೆ ದೂರು ಕೊಡಿ: ‘ಸಾರ್ವಜನಿಕರ ಪ್ರಯಾಣಕ್ಕಾಗಿ ಬಳಸುತ್ತಿರುವ ಮ್ಯಾಕ್ಸಿಕ್ಯಾಬ್, ಖಾಸಗಿ ಬಸ್‌, ಶಾಲಾ ವಾಹನ ಮತ್ತು ಪಿ.ಎಸ್.ವಿ ಬಸ್‍ಗಳು ಸಾರ್ವಜನಿಕರಿಂದ ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿದರೆ ಪ್ರಯಾಣಿಕರು ವಾಹನ ಸಂಖ್ಯೆ ಸಮೇತ ಆರ್.ಟಿ.ಒ ಕಚೇರಿಗೆ ದೂರು ಕೊಡಬೇಕು’ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ನೌಕರರು ಅನಿರ್ದಿಷ್ಟಾವಧಿಗೆ ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಖಾಸಗಿ ವಾಹನಗಳನ್ನು ನಿಗದಿತ ದರದಲ್ಲಿ ವಸೂಲಿ ಮಾಡಿ ಸಂಚರಿಸಲು ಅನುಮತಿ ನೀಡಲಾಗಿದೆ. ಆದರೆ, ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಅತಿ ಹೆಚ್ಚಿನ ದರವನ್ನು ವಾಹನದ ಮಾಲೀಕರು ವಸೂಲಿ ಮಾಡುತ್ತಿದ್ದಾರೆಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ವಾಹನದ ಮಾಲೀಕರು ಹೆಚ್ಚಿನ ಪ್ರಯಾಣ ದರವನ್ನು ವಸೂಲಿ ಮಾಡಿದ್ದಕ್ಕೆ ದೂರು ನೀಡಿದರೆ ಅಂತಹ ವಾಹನದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಿಡಿಯೊ ವೈರಲ್‌: ‘ಬಿಜೆಪಿ ಮುಖಂಡರ ಚುನಾವಣೆ ಖರ್ಚಿಗಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕೊಡುವ’ ಅಫಜಲಪುರದ ಸಾರಿಗೆ ಸಿಬ್ಬಂದಿಯ ಅಣಕು ವಿಡಿಯೊ ಶುಕ್ರವಾರ ವೈರಲ್‌ ಆಗಿದೆ.

‘ಬಿಜೆಪಿ ಸರ್ಕಾರದಲ್ಲಿ ದುಡ್ಡಿಲ್ಲ. ಪಕ್ಷಕ್ಕೂ ಬಡತನ ಬಂದಿದೆ. ಹಾಗಾಗಿ ಸಾರಿಗೆ ನೌಕರರ ಬೇಡಿಕೆ ಈಡೇರಿಸುತ್ತಿಲ್ಲ. ಅವರಿಗಾಗಿ ಭಿಕ್ಷೆ ಬೇಡುತ್ತಿದ್ದೇವೆ. ಭಿಕ್ಷೆ ಹಾಕ್ರಪ್ಪೋ ಭಿಕ್ಷೆ...’ ಎನ್ನುವ ವಿಡಿಯೊವನ್ನು ಪ್ರತಿಭಟನೆಕಾರರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.