ಬುಧವಾರ, ಆಗಸ್ಟ್ 4, 2021
25 °C
ಕೋಮು ದ್ವೇಷ ಬಿತ್ತುವ ಅನುರಾಗ್ ಠಾಕೂರ್‌, ಪರ್ವೇಶ್‌ ವರ್ಮಾ ಬಂಧನಕ್ಕೆ ಒತ್ತಾಯ

ಸಿಎಎ ವಿರೋಧಿ ಹೋರಾಟಗಾರರ ಬಂಧನಕ್ಕೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಲಾಕ್‌ಡೌನ್‌ ಆತಂಕದ ಮಧ್ಯೆಯೂ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಗಾರರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಶಾಂತಿಯುತವಾಗಿ, ಪ್ರಜಾತಾಂತ್ರಿಕ ನೆಲೆಯಲ್ಲಿ ಹೋರಾಟ ನಡೆಸುತ್ತಿರುವವರ ಮೇಲೆ ವಿವಿಧ ಕಾಯ್ದೆಗಳಡಿ ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗಿದೆ. ಅದರಲ್ಲಿ ಚಿಂತಕರು, ಹಿರಿಯರು, ಗರ್ಭಿಣಿಯರು ಸೇರಿದ್ದಾರೆ. ಕೂಡಲೇ ಸುಳ್ಳು ಮೊಕದ್ದಮೆಗಳನ್ನು ಕೈಬಿಟ್ಟು ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಂಧಿತರ ವಿರುದ್ಧ ಹೊರಿಸಿದ ಆರೋಪಗಳೇನು, ಅವು ಯಾವ ಹಂತದಲ್ಲಿವೆ ಎಂಬುದನ್ನು ಬಹಿರಂಗಪಡಿಸಬೇಕು. ಮುಕ್ತ ಹಾಗೂ ನ್ಯಾಯಸಮ್ಮತ ವಿಚಾರಣೆಯನ್ನು ನಡೆಸಬೇಕು ಎಂದು 1100ಕ್ಕೂ ಅಧಿಕ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು ಒತ್ತಾಯಿಸಿದ್ದಾರೆ. ಈ ಬೇಡಿಕೆಗೆ ಜಂಟಿ ಹೋರಾಟ ಸಮಿತಿಯ ಬೆಂಬಲವೂ ಇದೇ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ಪರ್ವೇಶ್‌ ವರ್ಮಾ ಕೋಮು ದ್ವೇಷ ಬಿತ್ತುವ ಮಾತುಗಳನ್ನಾಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಇಶ್ರತ್ ಜಹಾನ್, ಆಸಿಫ್‌ ಇಕ್ಬಾಲ್‌ ತನ್ಹಾ, ಗುಲ್ಫಿಶಾ ಖಾತೂನ್, ಸಫೂರಾ ಜರ್ಗಾರ್, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ತಾಹಿರ್‌ ಹುಸೇನ್, ಖಾಲಿದ್‌ ಸಫಿ, ನತಾಶಾ ನರವಾಲ್ ಹಾಗೂ ಉಮರ್‌ ಖಾಲಿದ್‌ ಅವರನ್ನು ಕರಾಳ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಸಫೂರಾ ಅವರನ್ನು ಮಾನವೀಯ ನೆಲೆಗಟ್ಟಿನ ಮೇಲೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.