ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಫಲವತ್ತಾದ ಕೃಷಿ ಭೂಮಿ ಹಾಳು

ರಾಸಾಯನಿಕಯುಕ್ತ ತ್ಯಾಜ್ಯ ನೀರು ಹರಿಸಿದ ಸಿಮೆಂಟ್‌ ಕಾರ್ಖಾನೆ
ವಿಶ್ವರಾಧ್ಯ ಎಸ್‌.ಎಚ್‌.
Published 6 ಡಿಸೆಂಬರ್ 2023, 5:40 IST
Last Updated 6 ಡಿಸೆಂಬರ್ 2023, 5:40 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ ‘ರಾಜಶ್ರೀ’ ಸಿಮೆಂಟ್‌ ಕಾರ್ಖಾನೆಯಿಂದ ಬಿಟ್ಟ ರಾಸಾಯನಿಕಯುಕ್ತ ತ್ಯಾಜ್ಯ ನೀರಿನಿಂದ ಹಂಗನಳ್ಳಿ ಮತ್ತು ಮಳಖೇಡ (ನೃಪತುಂಗ ನಗರ) ಗ್ರಾಮದ ಕೃಷಿ ಜಮೀನುಗಳು ಹಾಳಾಗಿವೆ ಎಂಬ ಆರೋಪ ರೈತರಿಂದ ಕೇಳಿಬಂದಿದೆ.

ಕಾರ್ಖಾನೆಯ ತ್ಯಾಜ್ಯ ನೀರಿನಿಂದ ಫಲವತ್ತಾದ ಜಮೀನುಗಳು ಹಾಳಾಗಿದ್ದು, ಉಳುಮೆ ಮಾಡದಂತಾಗಿದೆ. ಅತ್ತ ಪರಿಹಾರವೂ ಇಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಕಾರ್ಖಾನೆಯಿಂದ ಸದಾ ನೀರು ಹರಿಯುವುದರಿಂದ 19.28 ಎಕರೆ ಭೂಮಿ ಸವಳಾಗಿ, ಜೌಗು ಬಂದು ಬೆಳೆ ಬೆಳೆಯಲು ಯೋಗ್ಯವಾಗಿಲ್ಲ. ಆಪು, ಜೇಕು, ಚಡಿಯಂತಹ ಗಿಡಗಳು ಬೆಳೆದು ಯಾವುದೇ ರೀತಿಯ ಬೇಸಾಯಕ್ಕೆ ಯೋಗ್ಯವಾಗಿಲ್ಲ’ ಎಂದು ಸೇಡಂ ಉಪವಿಭಾಗಾಧಿಕಾರಿ ನೇತೃತ್ವದ ತಂಡ ಹೇಳಿದೆ. ಎಸಿ ನೇತೃತ್ವದಲ್ಲಿ ಪರಿಸರ ಅಧಿಕಾರಿ ಮತ್ತು ಜಂಟಿ ಕೃಷಿ ನಿರ್ದೇಶಕರನ್ನೊಳಗೊಂಡ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ನೀರು ಮತ್ತು ಮಣ್ಣಿನ ಪರೀಕ್ಷೆಯ ದಾಖಲೆ ಸಹಿತ 2007ರಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡಿತ್ತು.

ವರದಿ ಆಧರಿಸಿ ಹಂಗನಳ್ಳಿ ಮತ್ತು ಮಳಖೇಡ ಗ್ರಾಮದ 19.28 ಎಕರೆ ಜಮೀನು ಖರೀದಿಸಬೇಕು ಮತ್ತು 1983ರಿಂದ ಆದ ಬೆಳೆ ನಷ್ಟವನ್ನು ಸಂಬಂಧಪಟ್ಟ ರೈತರಿಗೆ ಪರಿಹಾರ ನೀಡಬೇಕು ಎಂದು ಅಂದಿನ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ ಅವರು ಕಾರ್ಖಾನೆಗೆ ಪತ್ರ ಬರೆದಿದ್ದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದಾಗಿ ಜಿಲ್ಲಾಧಿಕಾರಿ ಅವರು ಕಾರ್ಖಾನೆಯು ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂದು 2008ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.

ನಂತರದಲ್ಲಿ ರೈತರ ನಿರಂತರ ಧರಣಿಗೆ ಮಣಿದ ರಾಜಶ್ರೀ ಸಮೆಂಟ್‌ ಕಾರ್ಖಾನೆ, ತ್ಯಾಜ್ಯ ನೀರು ಹರಿಸುವುದನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಮಲಿನ ನೀರು ಹರಿಸಲಾಗುತ್ತಿತ್ತು. ಈ ಮಧ್ಯೆ ರೈತರಿಂದ ವ್ಯಾಪಕ ವಿರೋಧ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಈಚೆಗೆ ಸ್ಥಳಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಕಾರ್ಖಾನೆಯಿಂದ ಹೊಲಗಳಿಗೆ ಬಿಡುವ ತ್ಯಾಜ್ಯ ನೀರಿನ ನಾಲೆಯನ್ನು ಬಂದ್‌ ಮಾಡಲಾಗಿದೆ.

‘ಕಂಪನಿಯ ಅಧಿಕಾರಿಗಳು ರಾತ್ರಿ ಹೊತ್ತು ತ್ಯಾಜ್ಯ ನೀರು ಬಿಡುತ್ತಿದ್ದರು. ಅಲ್ಲದೇ, ಈ ನೀರು ಹರಿದು ಹೋಗಲು ರೈತರ ಅನುಮತಿ ಇಲ್ಲದೆ ಹೊಲಗಳ ಬದಿಯಲ್ಲಿ ಜೆಸಿಬಿಯಿಂದ ನಾಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿದಾಗ ಇದೇ ಆಗಸ್ಟ್‌ 29ರಂದು ಜಮೀನುಗಳಿಗೆ ಭೇಟಿ ನೀಡಿದ್ದರು. ಪರಿಹಾರದ ಭರವಸೆಯೂ ಕೊಟ್ಟಿದ್ದರು. ಆದರೆ, ಈಗ ಅದು ಕಾರ್ಖಾನೆಯ ನೀರಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ರೈತರಾದ ರವೀಂದ್ರ ಪಾಟೀಲ ಹಾಗೂ ಗುರುಲಿಂಗಪ್ಪ ಬೀರನಳ್ಳಿ ದೂರಿದ್ದಾರೆ.

‘ಕೆಲ ರೈತರ ಕುಟುಂಬಗಳಿಗೆ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರಿತ ಕೆಲಸ ನೀಡಿದ್ದರಿಂದ ಆ ರೈತರು ಅಸಹಾಯಕರಾಗಿದ್ದಾರೆ. ಇನ್ನು ಹೆಚ್ಚಿನ ಹಾನಿ ಅನುಭವಿಸಿದ ನಾವು ಕಾರ್ಖಾನೆಯ ಹೊರಗುತ್ತಿಗೆ ಕೆಲಸಕ್ಕೆ ಒಪ್ಪಿಕೊಂಡಿಲ್ಲ. ಬದಲಾಗಿ ಜಮೀನು ಹಾನಿಗೆ ಪರಿಹಾರದ ಬೇಡಿಕೆ ಇಟ್ಟಿದ್ದೇವೆ’ ಎಂದು ಅವರು ತಿಳಿಸಿದರು.

‘ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯು ಐದನೇ ಘಟಕ ಪ್ರಾರಂಭಕ್ಕೆ ಅನುಮತಿ ಕೇಳಿದ್ದು, ರೈತರಿಗೆ ಸೂಕ್ತ ಪರಿಹಾರ ಸಿಗುವವರೆಗೂ ಜಿಲ್ಲಾಡಳಿತ ಅನುಮತಿ ನೀಡಬಾರದು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಸೇಡಂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ರೈತರ ನೆರವಿಗೆ ಧಾವಿಸಬೇಕು’ ಎಂದು ಮಳಖೇಡ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ ಚವ್ಹಾಣ ಆಗ್ರಹಿಸಿದ್ದಾರೆ.

ಕರೆ ಸ್ವೀಕರಿಸಲಿಲ್ಲ: ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾರ್ಖಾನೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಕಾನೂನು ಸಲಹೆಗಾರರನ್ನು ಸಂಪರ್ಕಿಸುವಂತೆ ಹೇಳಿದರು. ಆದರೆ, ಕಾನೂನು ಸಲಹೆಗಾರರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ರಾಜಶ್ರೀ ಸಿಮೆಂಟ್‌ ಕಂಪನಿಯ ತ್ಯಾಜ್ಯ ನೀರು ಹರಿದು ವ್ಯವಸಾಯ ಯೋಗ್ಯ ಭೂಮಿ ನಿರುಪಯುಕ್ತವಾಗಿದೆ. ರೈತರಿಗೆ ಪರಿಹಾರ ಸಿಗದಿದ್ದರೆ ಹೋರಾಟ ಅನಿವಾರ್ಯವಾಗಲಿದೆ

-ಶರಣಬಸಪ್ಪ ಮಮಶೆಟ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ

ಕಾರ್ಖಾನೆಯ ತ್ಯಾಜ್ಯ ನೀರಿನಿಂದ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಲಾಗಿದೆ. ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿ ಸೇರಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು

-ಆದಂ ಪಟೇಲ್‌ ಉಪ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಕಲಬುರಗಿ

ಕೃಷಿ ವಿವಿ ವರದಿಯಲ್ಲೇನಿದೆ?

ಜಮೀನುಗಳಿಗೆ ಹರಿಯುವ ತ್ಯಾಜ್ಯ ನೀರು ಮತ್ತು ಮಣ್ಣಿನ ಮಾದರಿಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ನೀರು ಮತ್ತು ಸಸ್ಯ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ರಾಜಶ್ರೀ ಸಿಮೆಂಟ್‌ ಕಾರ್ಖಾನೆಯಿಂದ ಹರಿಯುವ ನೀರಿನ ರಸಸಾರ (ಪಿಎಚ್‌) 6.30 ಅಸಿಡಿಕ್‌ ಕರಗುವ ಲವಣಾಂಶ 2.5 (ಮಧ್ಯಮ ಅಲ್ಕಲೈನ್‌) ಸೋಡಿಯಂ ಹೀರುವ ಅನುಪಾತ (ಎಸ್‌ಎಆರ್‌) 15 ಇದೆ. ಈ ನೀರು ನೀರಾವರಿಗೂ ಕೂಡ ಯೋಗ್ಯವಾಗಿಲ್ಲ ಎಂದು ವರದಿ ಬಂದಿತ್ತು. ನೀರು ಹರಿಯುವ ಜಾಗದಿಂದ ತೆಗೆದುಕೊಂಡ ಮಣ್ಣಿನ ಮಾದರಿ ಲವಣಾಂಶ 1.1 ಇದ್ದು ಸವಳಿನಿಂದ ಕೂಡಿದೆ. ಇನ್ನು ನೀರು ಹರಿಯದಿರುವ ಸ್ಥಳದಿಂದ ತೆಗೆದಿರುವ ಮಣ್ಣು ಲವಣಾಂಶ 0.3 ಮಿ.ಮೋಸ್‌/ ಸೆ.ಮೀ ಇದ್ದು ಲವಣಾಂಶ ಬಹಳ ಕಡಿಮೆ ಇದೆ. ಸವಳು ಇರುವುದಿಲ್ಲ ಎಂದು ವೈಜ್ಞಾನಿಕ ವರದಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT