ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ವಿ.ವಿ: ಡೋಣೂರಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ ಕುಲಸಚಿವ ಪಟೇಲ್

ಸಿಯುಕೆ ಕುಲಸಚಿವರ ಕಚೇರಿಗೆ ಬೀಗ
Last Updated 21 ಜನವರಿ 2021, 10:02 IST
ಅಕ್ಷರ ಗಾತ್ರ

ಕಲಬುರ್ಗಿ: ಐದು ವರ್ಷಗಳ ಅಧಿಕಾರವಧಿ ಇದ್ದರೂ ಕಾನೂನು ಬಾಹಿರವಾಗಿ ತಮ್ಮನ್ನು ಎರಡು ವರ್ಷಕ್ಕೇ ಮಾತೃ ವಿ.ವಿ.ಗೆ. ಕಳಿಸಲಾಗುತ್ತಿದೆ ಎಂಬ ಕಾರಣ ನೀಡಿ ಇಲ್ಲಿನ ಕರ್ನಾಟಕ ಕೇಂದ್ರೀಯ ವಿ.ವಿ. ಕುಲಸಚಿವ ಪ್ರೊ. ಮುಷ್ತಾಕ್ ಅಹ್ಮದ್ ಐ. ಪಟೇಲ್ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದಾರೆ.

ಏತನ್ಮಧ್ಯೆ ಕುಲಸಚಿವರ ಕಚೇರಿಗೆ ಬೀಗ ಹಾಕಲಾಗಿದೆ.

ಹೈದರಾಬಾದ್ ನ ಮೌಲಾನಾ ಆಜಾದ್ ಉರ್ದು ವಿ.ವಿ. ಪ್ರಾಧ್ಯಾಪಕ ಪ್ರೊ. ಮುಷ್ತಾಕ್ ಅಹ್ಮದ್ ಅವರು 2018ರಲ್ಲಿ ಕೇಂದ್ರೀಯ ವಿ.ವಿ. ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಬುಧವಾರ ಸಂಜೆ ಏಕಾಏಕಿ ತಮಗೆ ಆದೇಶ ಪ್ರತಿಯನ್ನು ನೀಡಿದ ಹಂಗಾಮಿ ‌ಕುಲಪತಿ ಪ್ರೊ.ಎಂ.ವಿ.ಅಳಗವಾಡಿ ಅವರು ಮಾತೃ ಇಲಾಖೆಗೆ ತೆರಳುವಂತೆ ‌ಸೂಚಿಸಿದರು.

‘ಅಳಗವಾಡಿ ಅವರೇ ಪೂರ್ಣ ಪ್ರಮಾಣದ ಕುಲಪತಿಯಲ್ಲ. ಅಲ್ಲದೇ ‌ನನ್ನ ಮೇಲೆ ಯಾವ ಆಪಾದನೆಗಳೂ ಇಲ್ಲ. ಒಂದು ವೇಳೆ ಮಾತೃ ವಿ.ವಿ.ಗೆ ಕಳಿಸಬೇಕೆಂದರೆ ಕಾರ್ಯಕಾರಿ ಮಂಡಳಿಯ (ಇ.ಸಿ.) ಒಪ್ಪಿಗೆ ‌ಪಡೆಯಬೇಕು. ಎಲ್ಲ ನಿಯಮಗಳನ್ನು ‌ಉಲ್ಲಂಘಿಸಿದ್ದರಿಂದ ನಾನು ಅಧಿಕಾರ ಹಸ್ತಾಂತರಿಸಿಲ್ಲ’ ಎಂದು ಮುಷ್ತಾಕ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಳಗವಾಡಿ ಅವರು ಸಿಯುಕೆ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ. ಬಸವರಾಜ ‌ಡೋಣೂರ ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಪಟೇಲ್ ಅವರಿಗೆ ‌ಸೂಚಿಸಿದ್ದರು.

ಗುರುವಾರ ಬೆಳಿಗ್ಗೆ ‌ಅಧಿಕಾರ ವಹಿಸಿಕೊಳ್ಳಲು ಪ್ರೊ. ಡೋಣೂರ ಅವರು ತೆರಳಿದ ಸಂದರ್ಭದಲ್ಲಿ ಪ್ರೊ. ಮುಷ್ತಾಕ್ ಅಹ್ಮದ್ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರೊ. ಡೋಣೂರ, ಮೂರು ಸಂದರ್ಭಗಳಲ್ಲಿ ಬೇರೆ ವಿ.ವಿ.ಯಿಂದ ನಿಯೋಜನೆ ಮೇರೆಗೆ ಬಂದವರು ಅಧಿಕಾರ ಬಿಟ್ಟುಕೊಡಬೇಕಾಗುತ್ತದೆ. ಒಂದು ಮಾತೃ ವಿ.ವಿ.ಯವರು ಬರಬೇಕು ‌ಎಂದು ಸೂಚಿಸಿದಾಗ, ಮತ್ತೊಂದು ಅಧಿಕಾರವಧಿ‌ ಮುಗಿದಾಗ, ಮೂರನೇಯದು ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿರುವ ವಿ.ವಿ. ಮುಖ್ಯಸ್ಥರು ಕರ್ತವ್ಯದಿಂದ ಬಿಡುಗಡೆ ‌ಮಾಡಿದಾಗ. ಹಾಗಾಗಿ, ಅಧಿಕಾರ ಬಿಟ್ಟುಕೊಡದೇ ಇರುವುದು ಸರಿಯಲ್ಲ ಎಂದರು.

₹ 6 ಕೋಟಿ ಮೊತ್ತದ ಕಟ್ಟಡ ‌ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ‌ಮುಷ್ತಾಕ್ ಅಹ್ಮದ್ ಅವರ ಮೇಲೆ ಒತ್ತಡ ಹೇರಲಾಗಿತ್ತು. ಈ ಕಡತಕ್ಕೆ ಅವರು ಸಹಿ ಹಾಕಲು ‌ನಿರಾಕರಿಸಿದ್ದರು. ಈ ಅಂಶವೇ ಅವರನ್ನು ಮಾತೃ ವಿ.ವಿ.ಗೆ ಕಳಿಸುವ ನಿರ್ಧಾರ ಕೈಗೊಳ್ಳಲು ‌ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT